ಚಿತ್ರದುರ್ಗ
ಸಂವಿಧಾನ ಜಾರಿ ಮಾಡುವ ವಿಚಾರದಲ್ಲಿ ಇರುವ ವೈಪಲ್ಯಗಳನ್ನು ಮೆಟ್ಟಿ ನಿಲ್ಲುವುದು ಕೂಡ ಸವಾಲಿನ ಕೆಲಸವಾಗಿದೆ ಎಂದು ಸಾಮಾಜಿಕ ಚಿಂತಕ ಅರಕಲವಾಡಿ ನಾಗೇಂದ್ರ ಅಭೀಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾಕ್ರೀಡಾಭವನದಲ್ಲಿ ಜಿಲ್ಲಾಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಮತ್ತು ಸಮಕಾಲೀನ ಸ್ಥಿತಿಗತಿಗಳು ಎಂಬ ವಿಷಯ ಕುರಿತು ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಮಹತ್ವವನ್ನು ಈ ದೇಶದ ನಾಗರಿಕರಿಗೆ ಹೇಳಿಕೊಡುವ ಮೂಲಕ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ. ಆ ಕಾರಣಕ್ಕೆ ಎಲ್ಲ ಕಡೆಗಳಲ್ಲಿ ಸಂವಿಧಾನ ಕುರಿತು ವಿಚಾರ ಸಂಕಿರಣ, ಸಂವಾದ ಮಾಡುವುದರ ಮೂಲಕ ಸಂವಿಧಾನದ ತಿರುಳನ್ನು ಅರ್ಥೈಸಬೇಕು ಎಂದರು.
ದೇಶದ 130 ಕೋಟಿ ಜನರು ಕೂಡ ರಕ್ಷಾ ಕವಚವಾಗಿ, ಆಶ್ರಯವಾಗಿ, ಸಾಮಾನತೆಯ ಬದುಕಿಗಾಗಿ ಇಡೀ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಸಂವಿಧಾನವನ್ನು ಭಾರತ ಹೊಂದಿದೆ ಎಂದು ಹೇಳಿದ ಅವರು ಇನ್ನೂ ಮುಂದಿನ ದಿನಗಳಲ್ಲಿ ಸಂವಿಧಾನ ಉಳಿಸಿಕೊಳ್ಳುವುದು ಸಹಾ ಸವಾಲಿನ ಕೆಲಸ ಎಂದು ನಾಗೇಂದ್ರ ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಬಿ.ಆರ್.ಶಿವಕುಮಾರ್ ಮಾತನಾಡಿ, ಅಂಬೇಡ್ಕರ್ ರಚಿಸಿರುವ ಸಂವಿಧಾನ ಹಾಗೂ ಅವರ ವಿಚಾರ ಧಾರೆಗಳನ್ನು ಪ್ರತಿಯೊಬ್ಬರು ಓದಿ ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಚಂದ್ರಪ್ಪ, ಮಾಜಿ ಅಧ್ಯಕ್ಷ ಜಗನ್ನಾಥ, ಉಪನ್ಯಾಸಕ ತಿಪ್ಪೇಸ್ವಾಮಿ ಕೆರೆಯಗಳಹಳ್ಳಿ, ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಟಿ.ಶ್ರೀನಿವಾಸ್, ಅಂಬೇಡ್ಕರ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ, ಚಳ್ಳಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ದಯಾನಂದ, ಡಾ.ಬಿ.ಎಂ.ಗುರುನಾಥ್ ಅವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








