ಚಿತ್ರದುರ್ಗ:
ನಿವೃತ್ತಿಯತನಕ ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.
ಸುಮಾರು ಹತ್ತರಿಂದ ಹದಿನೈದು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆ ನೌಕರರು ನಾಲ್ಕು ಗಂಟೆಗಳ ಕಾಲ ಡಿ.ಸಿ.ಕಚೇರಿ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ಕುಳಿತು ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದರಿಂದ ಮಧ್ಯಾಹ್ನ ಎರಡು ಗಂಟೆಯತನಕ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯುಂಟಾಯಿತು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಆರೋಗ್ಯ ಕ್ಷೇತ್ರದ ಬಜೆಟ್‍ನ್ನು ಶೇ.15 ರಷ್ಟಕ್ಕೆ ಏರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಪ್ರತಿಭಟನಾಕಾರರು ಅಗತ್ಯವಿರುವ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ವೇತನ ಶ್ರೇಣಿಯನ್ನು ನೀಡಲು ಹರಿಯಾಣ ಮಾದರಿಯಲ್ಲಿ ಹೆಚ್.ಆರ್.ಪಾಲಿಸಿ ರಚಿಸಬೇಕು.ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಕಾಯ್ದೆಯ ಮಾದರಿಯಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ದಿ ಕಾಯ್ದೆಯನ್ನು ಜಾರಿಗೆ ತಂದು ಸೇವಾಭದ್ರತೆ ಒದಗಿಸಬೇಕು.
ಹೊರಗುತ್ತಿಗೆಯಲ್ಲಿರುವ ಎಲ್ಲರಿಗೆ ಗುತ್ತಿಗೆದಾರರ ಮಧ್ಯವರ್ತಿತನವಿಲ್ಲದೆ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿ ಮಾಡಬೇಕು. ಸರ್ಕಾರಿ ನೌಕರರಿಗೆ ನೀಡುವ ಜ್ಯೋತಿ ಸಂಜೀವಿನ ವೈದ್ಯಕೀಯ ಯೋಜನೆಯು ಆರೋಗ್ಯ ಇಲಾಖೆಯಲ್ಲಿಯೇ ಕೆಲಸ ಮಾಡುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸಿಗದಂತಾಗಿದೆ. ಈ ತಾರತಮ್ಯವನ್ನು ಸರಿಪಡಿಸಬೇಕು.ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ನೇಮಕಾತಿಗಳಲ್ಲಿ ವಯಸ್ಸಿನ ಮಿತಿಯನ್ನು ವಿಸ್ತರಿಸಬೇಕು.ಸೇವಾ ಅನುಭವಕ್ಕೆ ತಕ್ಕಂತೆ ಸೇವಾಂಕ ನೀಡಬೇಕು.
ಖಾಯಂ ನೇಮಕಾತಿಯ ಕಾರಣ ಹೇಳಿ ಸ್ಥಳ ಬದಲಾವಣೆ ಮಾಡಬಾರದು.
ಯಾವುದೇ ಸೇವಾ ಭದ್ರತೆ ಇಲ್ಲದಿರುವುದರಿಂದ ಸಣ್ಣಪುಟ್ಟ ಕಾರಣ ಹೇಳಿ ಹಲವರನ್ನು ಈಗಾಗಲೇ ಕೆಲಸದಿಂದ ತೆಗೆದು ಹಾಕಲಾಗಿದೆ.ಕಳೆದ ಒಂದು ವರ್ಷದ ಅವಧಿಯಲ್ಲಿ ಕೆಲಸದಿಂದ ತೆಗೆದುಹಾಕಿರುವವರನ್ನು ಮತ್ತೆ ಅದೇ ಹುದ್ದೆಗೆ ಅದೇ ಸ್ಥಳಕ್ಕೆ ಮರುನೇಮಕಾತಿ ಮಾಡಿಕೊಳ್ಳಬೇಕು.
ಕೆಲಸದ ಸ್ಥಳಗಳಲ್ಲಿ ಗುತ್ತಿಗೆ ನೌಕರರು ಅನುಭವಿಸುತ್ತಿರುವ ಶೋಷಣೆಯನ್ನು ತಡೆಗಟ್ಟಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಎಪ್ಲಾಂಯ್ ಗ್ರೀವಿಯೆನ್ಸ್ ಕಮಿಟಿ ಫಾರ್ ಕಾಂಟ್ರಾಕ್ಟ್ ವರ್ಕರ್ಸ್ ರಚಿಸಬೇಕು.ಅದರಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವೇದಿಕೆಯ ಇಬ್ಬರು ಪ್ರತಿನಿಧಿಗಳಿರಬೇಕು.
ತುರ್ತು ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಯಲ್ಲಿ ಇರುವವರು, ಗ್ರಾಮೀಣ ಸೇವೆ ಸಲ್ಲಿಸುತ್ತಿರುವವರಿಗೆ ಕ್ಷಯ, ಹೆಚ್.ಐ.ವಿ., ಇತ್ಯಾದಿ ಮಾರಕ ರೋಗಗಳ ನಿಯಂತ್ರಣ ಸೇವೆಯಲ್ಲಿರುವವರು ಅಂಬುಲೆನ್ಸ್ ವಾಹನ ಚಾಲಕರಿಗೆ, ಇತರೆ ಎಲ್ಲಾ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹಾಗೂ ಗ್ರೂಪ್ ಡಿ ನೌಕರರಿಗೆ ವಿಶೇಷ ಸೇವಾ ಭತ್ಯೆ ನೀಡಬೇಕು.
ಕೆಲಸದ ಜಾಗದಲ್ಲಿ ತಾರತಮ್ಯ ಸಂಬಳದ ಅನಿಶ್ಚಿತತೆ, ಮೂರು ತಿಂಗಳ ಬಾಂಡ್, ವರ್ಷಕ್ಕೊಂದು ದಿನ ಬ್ರೇಕ್ ಇನ್ ಸರ್ವಿಸ್‍ತರದ ವಿವಿಧ ರೀತಿಯ ಅತಂತ್ರತೆಯ ಜೊತೆಗೆ ಸದಾಕಾಲ ಹತ್ತು ಹಲವು ರೀತಿಯ ಸಮಸ್ಯೆಗಳನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಎದುರಿಸುತ್ತಿದ್ದಾರೆ.
ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಮಹತ್ವದ ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇನ್ನು ಹೆಚ್ಚಿನ ಆಸ್ಪತ್ರೆಗಳನ್ನು ತೆರೆಯಬೇಕು. ಅದಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿರುವ ಮಹಾತ್ವಾಕಾಂಕ್ಷಿ ಆರೋಗ್ಯ ಕರ್ನಾಟಕದಡಿ ಬಹುತೇಕ ಸರ್ಕಾರಿ ಆಸ್ಪತ್ರೆಗಳನ್ನೇ ಎಂಪ್ಯಾನೆಲ್ ಮಾಡಿಕೊಳ್ಳಬೇಕು. ಸರ್ಕಾರಿ ಆರೋಗ್ಯ ವ್ಯವಸ್ಥೆಯಡಿ ಎಲ್ಲಾ ಬಗೆಯ ಸಮಸ್ಯೆಗಳಿಗೆ ಸಂಪೂರ್ಣ ಗುಣಮಟ್ಟದ ಚಿಕಿತ್ಸೆ ಸಿಗಲು ಬೇಕಾದಂತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಧರಣಿನಿರತರು ಪಟ್ಟುಹಿಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ವಾಸು ಎಚ್.ವಿ., ಜಿಲ್ಲಾಧ್ಯಕ್ಷ ಜಿ.ಎಸ್.ಯತೀಶ್, ರಾಜ್ಯ ಸಂಚಾಲಕ ವಿಶ್ವಾರಾಧ್ಯ, ಕಾರ್ಯದರ್ಶಿ ಎಸ್.ಪಿ.ಮಹೇಂದ್ರ, ಖಜಾಂಚಿ ಡಾ.ಬಿ.ಎಸ್.ಮಹೇಂದ್ರಕುಮಾರ್ ಸೇರಿದಂತೆ ನೂರಾರು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಧರಣಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
