ಚಿತ್ರದುರ್ಗ : 

ಈ ತಿಂಗಳ 18ರಂದು ನಡೆಯಲಿರುವ ಲೋಕಸಭೆಯ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವುದರ ಮುಖಾಂತರ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಹೇಳಿದರು.
ಬಸವಕೇಂದ್ರ ಶ್ರೀಮುರುಘಾಮಠದ ವತಿಯಿಂದ ಆಯೋಜಿಸಿದ್ದ `ನಮ್ಮ ನಡಿಗೆ ಮತದಾನ ಜಾಗೃತಿ ಕಡೆಗೆ’ ಜಾಥಾದ ನೇತೃತ್ವ ವಹಿಸಿದ್ದ ಮುರುಘಾ ಶರಣರು, ಏಪ್ರಿಲ್ 18ರಂದು ಯಾವುದೇ ಕಾರಣಕ್ಕೂ ಮತದಾನ ಮಾಡುವುದನ್ನು ನಿರ್ಲಕ್ಷಿಸಬೇಡಿ. ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯೊಳಗೆ ನಿಮಗೆ ಸೂಕ್ತ ಸಮಯದಲ್ಲಿ ಹೋಗಿ ಯೋಗ್ಯರಿಗೆ ಮತ ಹಾಕಿ ಬನ್ನಿ ಎಂದರು. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತ, ಮತದಾನದ ಮಹತ್ವ ಕುರಿತ ಕರಪತ್ರವನ್ನು ಅವರು ವಿತರಿಸಿದರು.
ಬೆಳಿಗ್ಗೆ 7.30ಕ್ಕೆ ಸರಿಯಾಗಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಹೊರಟ ಜಾಥಾ ಗಾಂಧಿವೃತ್ತ, ಸಂತೇಹೊಂಡದ ರಸ್ತೆ, ಮೆದೇಹಳ್ಳಿ ರಸ್ತೆ, ಬಂಬೂ ಡಿಪೋವರೆಗೂ ಸಾಗಿತು. ಎದುರಾದ ಎಲ್ಲ ಸಾರ್ವಜನಿಕರಿಗೆ, ಅಂಗಡಿ ಮುಗ್ಗಟ್ಟುಗಳಲ್ಲಿದ್ದ ಜನರಿಗೆ, ಮಾರುಕಟ್ಟೆಯಲ್ಲಿದ್ದ ವ್ಯಾಪಾರಸ್ಥರಿಗೆ, ಕಾರ್ಮಿಕರಿಗೆ, ಪ್ರಯಾಣಿಕರಿಗೆ, ಮಹಿಳೆಯರಿಗೆ ಇನ್ನು ಇತರರಿಗೆ ಕರಪತ್ರ ನೀಡಿ ತಪ್ಪದೆ ಮತ ಚಲಾಯಿಸಲು ತಿಳಿಸಿದರು. ಜನರೂ ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದರು.
ಜಾಥಾದಲ್ಲಿ ಭಾಗವಹಿಸಿದ್ದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ವಿದ್ಯಾರ್ಥಿಗಳು ಕೈಯಲ್ಲಿ ಹಿಡಿದಿದ್ದ `ಎಲ್ಲವನ್ನು ಬದಿಗಿಡಿ ಮೊದಲು ಮತದಾನ ಮಾಡಿ’, `ಮತವನ್ನು ಚಲಾಯಿಸಿ ಮತದ ಮೌಲ್ಯವನ್ನು ಉಳಿಸಿ’, `ನನ್ನ ಮತ – ನನ್ನ ಹಕ್ಕು’, `ಜಾತಿ ಧರ್ಮ ಬೇಡ, ಯೋಗ್ಯರಿಗೆ ಮತ ಚಲಾಯಿಸಿ’ ಎಂಬ ಘೋಷಣೆ ವಾಕ್ಯಗಳು ಎಲ್ಲರ ಗಮನಸೆಳೆದವು.
ಅಥಣಿಯ ಶ್ರೀ ಶಿವಬಸವ ಸ್ವಾಮಿಗಳು, ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಚಳ್ಳಕೆರೆಯ ಶ್ರೀ ಬಸವ ಕಿರಣ ಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ. ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ನಿರಂಜನಮೂರ್ತಿ, ಶ್ರೀಮತಿ ರುದ್ರಾಣಿ ಗಂಗಾಧರ್, ವೀರಶೈವ ಸಮಾಜದ ಕಾರ್ಯದರ್ಶಿ ಶಿವಕುಮಾರ್ ಪಟೇಲ್, ಕೆಇಬಿ ಷಣ್ಮುಖಪ್ಪ, ನಾಗರಾಜ ಸಂಗಂ, ಮಹಲಿಂಗಪ್ಪ, ಶ್ರೀಮತಿ ಗಾಯತ್ರಿ ಶಿವರಾಂ, ಎಸ್.ಜೆ.ಎಂ. ಸಂಸ್ಥೆಗಳ ಮುಖ್ಯಸ್ಥರುಗಳು ಈ ಅಭಿಯಾನದಲ್ಲಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
