“ಸದೃಢ ಸಮಾಜಕ್ಕಾಗಿ ಸಕ್ರೀಯ ನಾಗರೀಕರ ಅವಶ್ಯಕತೆಯಿದೆ”–ದಯಾನಂದ್.

ಶಿರಾ:-

           ಸಿಎಂಸಿಎ ಸಂಸ್ಥೆಯು ಮಕ್ಕಳನ್ನು ಸಶಕ್ತ ನಾಗರೀಕರನ್ನಾಗಿ ಬೆಳೆಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳಿಗೆ ಪಠ್ಯಕಲಿಕೆಯ ಜೊತೆಗೆ ಜೀವನ ಕೌಶಲ್ಯಗಳನ್ನು ಹೊಂದಿರುವ ಚಟುವಟಿಕೆ ಆಧಾರಿತ ಪೌರಶಿಕ್ಷಣ ಇಂದಿನ ಪ್ರಸ್ತುತತೆಗೆ ಅಗತ್ಯವೆಂದು ಬ್ರಹ್ಮಸಂದ್ರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ದಯಾನಂದ್‍ರವರು ಅಭಿಪ್ರಾಯಪಟ್ಟರು.
            ಇವರು ಸ್ವಾಮಿ ವಿವೇಕಾನಂದ ಯುವಜನ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ, ಕಳ್ಳಂಬೆಳ್ಳ ಹಾಗೂ ಬೆಂಗಳೂರಿನ ಸಿಎಂಸಿಎ ಸಂಸ್ಥೆಯ ಸಹಯೋಗದಲ್ಲಿ ಬ್ರಹ್ಮಸಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಲಬ್ ಸದಸ್ಯರಿಗೆ ಬ್ಯಾಡ್ಜ್ ಹಾಕುವ ಮೂಲಕ “ಅರಿವು ಸಿಎಂಸಿಎ ಕ್ಲಬ್”ನ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
           ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳು ಶಿಕ್ಷಣ ಕಲಿಯುವ ಜೊತೆ ಜೊತೆಯಲ್ಲಿ ಸುತ್ತ ಮುತ್ತಲಿನ ಸವಾಲುಗಳನ್ನು ಅರ್ಥಮಾಡಿಕೊಳ್ಳಬೇಕು . ಪರಿಸರ, ಜೀವ ವೈವಿಧ್ಯತೆ, ಸಾಮಾಜಿಕ ಸಂಬಂಧಗಳೊಂದಿಗೆ ಬೆರೆತು ಸದೃಢ ಸಮಾಜ ನಿರ್ಮಾಣಕ್ಕೆ ತಮ್ಮ ಕೊಡುಗೆಗಳನ್ನು ನೀಡಬೇಕೆಂದು ತಿಳಿಸಿದರು.
           ಕಾರ್ಯಕ್ರಮದಲ್ಲಿ ಸಿಎಂಸಿಎ ಸಂಸ್ಥೆಯ ಗ್ರಾಮೀಣ ಕಾರ್ಯಕ್ರಮದ ಅಸೋಸಿಯೇಟ್ ಮಂಜುನಾಥ್‍ಅಮಲಗೊಂದಿ ಮಾತನಾಡಿ, ಅಭಿವೃದ್ದಿ ಎಂದರೆ ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ ಪರಿಸರ ಸಂರಕ್ಷಣೆ, ಮಹಿಳೆಯರ ಸುರಕ್ಷತೆ, ಎಲ್ಲರಿಗೂ ಸಮಾನತೆ, ಹಸಿವು ನಿರ್ಮೂಲನೆಯಂತಹ ಸವಾಲುಗಳನ್ನು ಸುಧಾರಿಸಬೇಕಿದೆ. ಇಂತಹ ಸುಸ್ಥಿರ ಅಭಿವೃದ್ದಿಯನ್ನು ಮಾಡುವುದಕ್ಕೆ ಮಕ್ಕಳ ಮತ್ತು ಯುವಜನರ ಪಾಲ್ಗೋಳ್ಳುವಿಕೆ ಸಂಪೂರ್ಣವಾಗಿರಬೇಕೆಂದು ಎಂದು ತಿಳಿಸಿದರು.
           ಉದ್ಘಾಟನಾ ಅಭಿಯಾನದಲ್ಲಿ ಮಕ್ಕಳು ಭಾರತದ ವಾಸ್ತವತೆಯನ್ನು ಎತ್ತಿಹಿಡಿಯುವ ಸಕಾರಾತ್ಮಕ ಮತ್ತು ನಕಾರಾತ್ಮಕ ಹೇಳಿಕೆಗಳನ್ನು ಹೇಳುತ್ತಾ ಪ್ರಸ್ತುತ ದೇಶದ ಅಭಿವೃದ್ಧಿಯ ಪಥಗಳನ್ನು ವಿವರಿಸಿದರು. ಪರಿಸರ ಸ್ನೇಹಿ ಗಣಪತಿ ಹಬ್ಬವನ್ನು ಆಚರಿಸುವುದಕ್ಕೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಸಿಎಂಸಿಎ ಕ್ಲಬ್ ಕಾರ್ಯಕ್ರಮವು ಸಕ್ರೀಯವಾಗಿ ನಡೆಸಲು ಸಹಕರಿಸುತ್ತಿರುವ ಶಾಲೆಯ ಮಂಡಳಿಗೆ ಸ್ಮರಣಿಕೆಯನ್ನು ನೀಡಲಾಯಿತು, ಹಿಂದಿನ ವರ್ಷ ಸಕ್ರೀಯ ನಾಗರೀಕತ್ವದ ಕಾರ್ಯಗಳನ್ನು ಮಾಡಿದ ಮಕ್ಕಳಿಗೆ ಮೆಡಲ್ ಮತ್ತು ಪ್ರೇರಣಾ ಪತ್ರಗಳನ್ನು ನೀಡುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಎಲ್ಲಾ ಮಕ್ಕಳಿಗೆ ಸಕ್ರೀಯ ನಾಗರೀಕರಾಗುವುದಕ್ಕೆ ಪ್ರಮಾಣವಚನವನ್ನು ಬೋಧಿಸಲಾಯಿತು.
             ಈ ಸಂದರ್ಭದಲ್ಲಿ ಸಿಎಂಸಿಎ ಸಂಸ್ಥೆಯ ಸ್ವಯಂಸೇವಕರಾದ ಜನಾರ್ಧನ್, ಮಧು, ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಶಾಲಾ ಸಿಬ್ಬಂದಿಯವರು ಹಾಜರಿದ್ದರು.

Recent Articles

spot_img

Related Stories

Share via
Copy link