ಹುಳಿಯಾರು
ಹುಳಿಯಾರು ಹೋಬಳಿಯಲ್ಲಿ ಇತ್ತಿಚಿನ ದಿನಗಳಲ್ಲಿ ಉತ್ತಮ ಮಳೆಯಾಗಿದ್ದು ರೈತರು ಕೃಷಿ ಕಾಯಕದತ್ತ ಮುಖ ಮಾಡಿದ್ದು ಭೂಮಿ ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇವರಿಗೆ ನೆರವಾಗಲು ಕೃಷಿ ಇಲಾಖೆ ಸನ್ನದ್ಧವಾಗಿದೆ ಎಂದು ಹುಳಿಯಾರಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕರಿಬಸವಯ್ಯ ತಿಳಿಸಿದರು.
ಹೋಬಳಿಯಲ್ಲಿ ಪೂರ್ವ ಮುಂಗಾರಿನಲ್ಲಿ ಮಳೆ ಕೈ ಕೊಟ್ಟಕಾರಣ ಹೆಸರು ಕಾಳು ಬೆಳೆಯಲು 1350 ಹೆಕ್ಟೇರ್ ಗುರಿಯಲ್ಲಿ 110 ಹೆಕ್ಟರ್ ಮಾತ್ರ ಸಾಧನೆ ಮಾಡಲಾಗಿದೆ. ಅಲಸಂದೆಯನ್ನು 350 ಹೆಕ್ಟರ್‍ನಲ್ಲಿ ಬೆಳೆಯುವ ಗುರಿ ಇಟ್ಟುಕೊಂಡಿದ್ದು ಕೇವಲ 30 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಉದ್ದಿನಕಾಳಿಗೆ 100 ಹೆಕ್ಟರ್ ಗುರಿಯಲ್ಲಿ 15 ಹೆಕ್ಟರ್ ಮಾತ್ರ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಈಗ ರಾಗಿ ಮತ್ತು ತೊಗರಿ ಬೆಳೆಯಲು ಮಾತ್ರ ಅವಕಾಶವಿದ್ದು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು ಬಿತ್ತನೆ ಬೀಜ ಪಡೆಯಲು ಭಾವಚಿತ್ರ, ಚಾಲ್ತಿ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ ( ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ) ವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
ಪ್ರತಿ ಎಕರೆಗೆ 5 ಕೆ.ಜಿಯ ಒಂದು ಪ್ಯಾಕೆಟ್‍ನಂತೆ ಗರಿಷ್ಠ 5 ಎಕರೆಗೆ 5 ಪ್ಯಾಕೆಟ್ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಎಸ್‍ಸಿ ಎಸ್‍ಟಿಗೆ ಕೆ.ಜಿಗೆ 27 ರೂ. ಸಬ್ಸಿಡಿ ಸಿಗಲಿದ್ದು ರೈತರ ವಂತಿಕೆ 18.90 ರೂ ನೀಡಬೇಕಿದ್ದು 5 ಕೇಜಿಗೆ 94.50 ರೂ ಕೊಡಬೇಕಿದೆ. ಇತರರಿಗೆ ಕೆ.ಜಿಗೆ 18 ರೂ. ಸಬ್ಸಿಡಿ ಸಿಗಲಿದ್ದು 27.90 ರೂ ರೈತರ ವಂತಿಕೆಯಾಗಿದ್ದು 5 ಕೇಜಿಗೆ 139.50 ರೂ. ಕೊಡಬೇಕಿದೆ ಎಂದು ವಿವರಿಸಿದರು.
ರೈತರು ತಮ್ಮ ಜಮೀನಿಗೆ ಅನುಗುಣವಾಗಿ ಬೆಳೆ ಮತ್ತು ತಳಿಗಳನ್ನು ಆಯ್ಕೆ ಮಾಡಿಕೊಂಡು ಅಧಿಕೃತ ಮಾರಾಟಗಾರರಿಂದ ಬಿತ್ತನೆ ಬೀಜವನ್ನು ಖರೀದಿಸಿ, ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು. ನಕಲಿ ಮಾರಾಟಗಾರರ ಬಗ್ಗೆ ರೈತರು ಎಚ್ಚರ ವಹಿಸಬೇಕು. ಅಂಥವರ ಬಗ್ಗೆ ಮಾಹಿತಿ ಇದ್ದರೆ ಇಲಾಖೆಗೆ ತಿಳಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.