ಹಗರಿಬೊಮ್ಮನಹಳ್ಳಿ:
ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ದುಡಿಯುತ್ತಿರುವ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಹೊಸಪೇಟೆಯ ಕೆ.ನಾಗರತ್ನಮ್ಮ ಆಗ್ರಹಪಡಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಭಾನುವಾರ ಏರ್ಪಡಿಸಲಾಗಿದ್ದ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಪರವಾಗಿ ಹಕ್ಕುಗಳನ್ನು ಜಾರಿಗೊಳಿಸಬೇಕು ಎಂದು ಹೋರಾಟ ಮಾಡಿಕೊಂಡುಬಂದುದ್ದರ ಫಲವೇ, ಇಂದು ಹಲವು ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಶೇ.33 ರಷ್ಟು ಮೀಸಲಾತಿ ಸೇರಿದಂತೆ ಮಹಿಳಾ ಹಕ್ಕುಗಳು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಜಾರಿ ಆಗುವವರೆಗೂ ನಮ್ಮ ಹೋರಾಟ ನಿಲ್ಲದೆಂದು ಸರ್ಕಾರಗಳಿಗೆ ಎಚ್ಚರಿಸಿದರು.
ಹಿರಿಯ ಸಾಹಿತಿ ಬಸರಕೋಡಿನ ಮೇಟಿ ಕೊಟ್ರಪ್ಪ ಮಾತನಾಡಿ, ಮಹಿಳೆಯರು ಕೇವಲ ಮಹಿಳಾ ದಿನಾಚರಣೆಗೆ ಮಾತ್ರ ಸೀಮಿತವಾಗದೆ, ನಿಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಹೋರಾಟ ಅಗತ್ಯವಾಗಿದೆ. ಎಲ್ಲ ರಂಗಗಳಲ್ಲಿ ಮಹಿಳೆಯರು ಸಮಾನವಾಗಿ ದುಡಿಯುತ್ತಿರುವಾಗ ಕೂಲಿ, ವೇತನ ನೀಡುವಲ್ಲಿ ಮಹಿಳೆಯರನ್ನು ಎರಡನೇ ದರ್ಜೆಯ ಕೆಲಸಗಾರೆಂದು ತಾರತಮ್ಯಮಾಡುವುದು ಸರಿ ಅಲ್ಲ. ದುಡುಮೆಗೆ ತಕ್ಕ ಪ್ರತಿಫಲ ನೀಡಬೇಕು ಎಂದು ತಿಳಿಸಿದರು.
ನಂತರ ಪ್ರಾಂತರೈತ ಸಂಘದ ಸಂಚಾಲಕ ಕೊಟುಗಿ ಮಲ್ಲಿಕಾರ್ಜುನ ಪಾಲ್ಗೊಂಡು ಮಾತನಾಡಿ, ಬಂಡವಾಳ ಶಾಹಿಗಳು ಮಹಿಳಾ ಕೂಲಿಕಾರರನ್ನು ದುಡಿಸಿಕೊಂಡು ಕೂಲಿ ನೀಡುವಲ್ಲಿ ಅತ್ಯಂತ ಕಡಿಮೆ ನೀಡುವ ಮೂಲಕ ಶೋಷಣೆ ಮಾಡುತ್ತಾರೆ. ಯಾವುದೇ ಮಹಿಳಾ ಕೂಲಿಕಾರ್ಮಿಕರಿಗೆ ತಕ್ಕ ಕೂಲಿ ನೀಡಿ ಮತ್ತು ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಳೇ ಊರಿನ ಜೆ.ಜೆ. ನಗರದ ಜೋಗತಿ ಗೌರಮ್ಮ ಹಾಗೂ ಬಾಚಿಗೊಂಡನಹಳ್ಳಿಯ ಮೀನುಗಾರ ಹುಲಿಗೆಮ್ಮ ಇವರಿಗೆ ಸಂಘಟನೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜನವಾದಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ಜಿ.ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಸಮಘಟನೆಯ ಜಿಲ್ಲಾ ಕಾರ್ಯದರ್ಶಿ ಜೆ.ಚಂದ್ರಕುಮಾರಿ, ಅಂಗವಿಕಲರ ಸಂಘಟನೆಯ ತಾಲೂಕು ಕಾರ್ಯದರ್ಶಿ ಉಸ್ಮಾನ್ ಭಾಷ, ಬಾಚಿಗೊಂಡನಹಳ್ಳಿಯ ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಭರಮಲಿಂಗಪ್ಪ ಹಾಗೂ ವೀರಣ್ಣ ಕಲ್ಮನಿ ಮತ್ತಿತರರು ಇದ್ದರು.
ನಿಶಾ ಪಾಟೀಲ್ ಕ್ರಾಂತಿಗೀತೆ ಹಾಡಿದರು. ಸಂಘಟನೆಯ ಕಾರ್ಯದರ್ಶಿ ಜಿ.ಸರೋಜ, ಖಜಾಂಚಿ ಎಸ್.ಹುಲಿಗೆಮ್ಮ, ಸಹಕಾರ್ಯದರ್ಶಿ ಮಹಾದೇವಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








