ಬಳ್ಳಾರಿ : ಸ್ವಾತಂತ್ರ್ಯದ ಹೋರಾಟಕ್ಕೆ ಜಿಲ್ಲೆಯ ಕೊಡುಗೆ ಅಪಾರ: ಡಿಸಿ

ಬಳ್ಳಾರಿ

      ಸ್ವಾತಂತ್ರೋತ್ಸವದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿ ಮತ್ತು ಅದು ನಮ್ಮ ಆದ್ಯ ಕರ್ತವ್ಯವೂ ಆಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

    ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 73ನೇ ಸ್ವಾತಂತ್ರ್ಯೋ ತ್ಸವದ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನಗಳ ವೀಕ್ಷಿಸಿ ಮತ್ತು ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನೋವು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಹಾಗೂ ಅಪಾರ ತ್ಯಾಗ ಮಾಡಿದ ಜನರಲ್ಲಿ ಅನೇಕರು ಇಂದು ನಮ್ಮೊಂದಿಗಿದ್ದಾರೆ. ಅನೇಕರು ನಮ್ಮನ್ನು ಅಗಲಿದ್ದಾರೆ. ಅವರೆಲ್ಲರಿಗೂ ನಮ್ಮ ನಮನಗಳನ್ನು ಈ ಸಂದರ್ಭದಲ್ಲಿ ಸಲ್ಲಿಸಬೇಕು ಎಂದರು.

    ಭಾರತದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ವಿಶ್ವದಲ್ಲಿ ಅನನ್ಯವಾದ ಸ್ಥಾನ ಸಿಕ್ಕಿದೆ. ಬ್ರಿಟಿಷ್ ಪ್ರಭುತ್ವ ಕಟ್ಟಿದ್ದ “ಸೂರ್ಯ ಮುಳುಗದ ಸಾಮ್ರಾಜ್ಯವನ್ನು” ಅಹಿಂಸೆ, ಸತ್ಯಾಗ್ರಹಗಳ ಮೂಲಕ ಭಾರತವು ಮಣಿಸಿದ್ದು ನಿಜಕ್ಕೂ ಅದ್ವಿತೀಯವಾದ ಸಂಗತಿಯಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ನಕುಲ್ ಅವರು ಭಾರತದ ಸ್ವಾತಂತ್ರ್ಯದ ಹೋರಾಟವೆಂದರೆ ಅದೊಂದು “ಪವಾಡವೇ ಸರಿ”. ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಮನೋಭಾವದಿಂದ ದೇಶ ಪ್ರೇಮದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅವರು ಜಾತಿ-ಮತ- ಧರ್ಮಗಳ ಬೇಧವನ್ನು ಮರೆತು ಒಂದುಗೂಡಿ ಹೋರಾಡಿದರು ಎಂದರು.

     ಈ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಿಂದ ಇಂದಿನ ಪೀಳಿಗೆಯು ಮುಖ್ಯವಾಗಿ ಯುವಕರು, ವಿದ್ಯಾರ್ಥಿಗಳು ರಾಷ್ಟ್ರಪ್ರೇಮದ ಬಗ್ಗೆ ಪ್ರೇರಣೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂಬುದನ್ನು ತಮ್ಮ ಸ್ವಾತಂತ್ರೋತ್ಸವ ಸಂದೇಶದಲ್ಲಿ ಹೇಳಿದರು.
ಸಮಾಜ ಸುಧಾರಣೆಯು ಸ್ವಾತಂತ್ರ್ಯ ಚಳುವಳಿಯ ಅವಿಭಾಜ್ಯ ಅಂಗವಾಗಿತ್ತು. ಪರಿಶಿಷರ ಉದ್ಧಾರ, ಅಸ್ಪೃಶ್ಯತೆಯ ನಿವಾರಣೆ, ವಿಧವಾ ವಿವಾಹ ಮುಂತಾದವು ಸಮಾಜ ಸುಧಾರಣೆಯ ಅಂಗಗಳಾಗಿದ್ದವು.

     ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಪಾತ್ರವನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಅವರು ತಮ್ಮದೇ ಆದ ಸೀಮಿತ ನೆಲೆಯಲ್ಲಿ ಅಪೂರ್ವ ಕಾಣಿಕೆ ಸಲ್ಲಿಸಿದ್ದಾರೆ ಎಂಬುದನ್ನು ಹೇಳಿದ ಜಿಲ್ಲಾಧಿಕಾರಿಗಳು, ಈ ಶುಭ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್‍ದಾರ್ ವಲ್ಲಬಾಯಿ ಪಟೇಲ್, ನೆಹರು, ಸುಭಾಸ್ ಚಂದ್ರ ಭೋಸ್,ದಾದಾಬಾಯಿ. ನವರೋಜಿ, ವೀರಸಾವರ್‍ಕರ್, ಮೌಲಾನ ಅಬುಲ್ ಕಲಾಂ ಆಜಾದ್, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್‍ಸಿಂಗ್, ಚಂದ್ರಶೇಖರ ಅಜಾದ್, ರಾಜ್‍ಗುರು, ಸಖ್‍ದೇವ್ ಹಾಗೂ ಸಾವಿರಾರು ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ:

   ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವು ರಾಷ್ಟೀಯ ಭಾವೈಕ್ಯತೆಯ ಸಂಕೇತವಾಗಿದೆ. ಕನ್ನಡ ಹಾಗೂ ತೆಲುಗು ಮಾತನಾಡುವ ಜನರು ಭಾಷಾ ಭೇದವನ್ನು ಮರೆತು ಹೋರಾಡಿದ್ದು, ದ್ವಿಭಾಷಾ ಸಂಸ್ಕೃತಿಗೆ ಒಳಗಾಗಿರುವ ನಾಡಿನಲ್ಲಿ ವಿಶಿಷ್ಟ ಸಂಗತಿ ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದರು.

    ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವು ಮೂಲಭೂತವಾಗಿ “ಗಾಂಧಿವಾದ” ಸ್ವರೂಪದಾಗಿತ್ತು. ಯಾವುದೇ ಹಿಂಸೆಗೆ ಅವಕಾಶ ನೀಡದಂತೆ, ಅಹಿಂಸಾವಾದವನ್ನು ಅನುಸರಿಸಿ ಹೋರಾಟ ನಡೆಸಲಾಯಿತು ಎಂದು ವಿವರಿಸಿದ ಅವರು ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಟಿ.ಸುಬ್ರಮಣ್ಯಂ,ಟಿ.ಬಿ.ಕೇಶವರಾವ್, ಕೊಟ್ಟೂರಿನ ಗೋರ್ಲಿ ಶರಣಪ್ಪ, ಗೋರ್ಲಿ ರುದ್ರಮ್ಮ, ಡಾ. ಎ. ನಂಜಪ್ಪ, ಚಿದಾನಂದ ಶಾಸ್ತ್ರಿ, ಕೊ. ಚನ್ನಬಸಪ್ಪ, ಗೌಡಪ್ಪ, ಬಿಂಧು ಮಾದವರಾವ, ಬುರ್ಲಿ ಶೇಷಣ್ಣ, ಬೆಲ್ಲದ ಚೆನ್ನಪ್ಪ,ಬೂಸಲ ಸಾಂಬಮೂರ್ತಿ, ಹಡಪದ ತಿಮ್ಮಪ್ಪ , ಬಂಡಿಹಟ್ಟಿ ವೆಂಕೋಬರಾವ್,

     ಲಕ್ಷ್ಮಿದೇವಿ ಇನ್ನು ಮುಂತಾದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ನಾವಿಂದು ನೆನೆಯಬೇಕಾಗಿದೆ ಎಂದರು.,
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು, ಬಾಲ ಗಂಗಾಧರ ತಿಲಕ್ ರಂತಹ ರಾಷ್ಟ್ರ ನಾಯಕರುಗಳು ಬಳ್ಳಾರಿಗೆ ಅಗಮಿಸಿದ್ದರು. ಬಳ್ಳಾರಿಯ ಅಲ್ಲಿಪುರ ಜೈಲಿನಲ್ಲಿ ನೂರಾರು ಸತ್ಯಾಗಹಿಗಳನ್ನು ಬಂಧಿಸಲಾಗಿತ್ತು. ಚಕ್ರವರ್ತಿ ಗೋಪಾಲಚಾರಿ, ಪೊಟ್ಟಿ ಶ್ರೀರಾಮುಲು, ಕಾಮರಾಜ್,ಟಿ.ವಿ.ಸುಬ್ಬಾಶೆಟ್ಟಿ, ಬೆಜವಾಡ. ಗೋಪಾಲರೆಡ್ಡಿ ಮುಂತಾದ ಅಗ್ರಗಣ್ಯ ಹೋರಾಟಗಾರರನ್ನು ಈ ಜೈಲಿನಲ್ಲಿ ಇರಿಸಲಾಗಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದರು.

     ಸ್ವಾತಂತ್ರ್ಯ ಬಂದ ನಂತರ ದೇಶದ ಸಮಸ್ಯೆಗಳನ್ನು ಬಗೆಹರಿಸಲು ಪಂಚವಾರ್ಷಿಕ ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಧಿಯತ್ತ ಪ್ರಯತ್ನ ಸಾಗಿತು. ಎಲ್ಲಾ ಸವಾಲುಗಳ ಮಧ್ಯದಲ್ಲಿಯೂ ಭಾರತ ಬಲಿಷ್ಠ ರಾಷ್ಟ್ರವಾಗಿ ರೂಪುಗೊಂಡಿದೆ ಎಂದರು.
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆ, ಕೈಗಾರಿಕೆ, ಕೃಷಿ, ಸಾಕ್ಷರತೆ, ತಂತ್ರಜ್ಞಾನ,ಆರೋಗ್ಯ, ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ, ಬಾಹ್ಯಾಕಾಶ ವಿಜ್ಞಾನ, ಅಣು ವಿಜ್ಞಾನ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವಂತಹ ಪ್ರಗತಿ ಸಾಧಿಸಲಾಗಿದೆ ಎಂದರು. ಭಾರತ ದೇಶವು ಇಡೀ ವಿಶ್ವದಲ್ಲಿ ಸಾಂಸ್ಕೃತಿಕವಾಗಿ ಮಹತ್ವದ ಸ್ಥಾನವನ್ನು ಹೊಂದಿದೆ ಎಂದರು.

ಜಿಲ್ಲೆಯಲ್ಲಿ ನೆರೆಹಾವಳಿ ಸಮರ್ಪಕ ನಿರ್ವಹಣೆ:

    ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆಹಾವಳಿಯನ್ನು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿದೆ. ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿಲ್ಲ ಎಂದು ಡಿಸಿ ನಕುಲ್ ಹೇಳಿದರು.

      ಕಳೆದ ಒಂದು ತಿಂಗಳಲ್ಲಿ ಯಾವುದೇ ದಾಖಲಿಗಳು ಇಲ್ಲದಿದ್ದರೂ ಅರ್ಹ 5600 ಜನರಿಗೆ ವಿಶೇಷ ಆಂದೋಲನದ ಮೂಲಕ ಪಿಂಚಣಿ ಒದಗಿಸಲು ಕ್ರಮಕೈಗೊಳ್ಳಾಗಿದೆ. ಜಿಲ್ಲಾಧಿಕಾರಿ ಕಚೇರಿಯನ್ನು ಇ-ಆಫೀಸ್ ಆಗಿ ಪರಿವರ್ತಿಸಲಾಗಿದ್ದು ಕ್ಷೀಪ್ರಗತಿಯಲ್ಲಿ ಕೆಲಸಗಳಾಗುವಂತೆ ಕ್ರಮಕೈಗೊಳ್ಳಲಾಗಿದೆ ಎಂದರು.

      ಈ ಸಂದರ್ಭದಲ್ಲಿ ಸಂಸದ ವೈ.ದೇವಿಂದ್ರಪ್ಪ, ಸೈಯದ್ ನಾಸೀರ್ ಹುಸೇನ್, ಶಾಸಕರಾದ ಸೋಮಶೇಖರರೆಡ್ಡಿ , ಕೆ.ಸಿ. ಕೊಂಡಯ್ಯ , ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಪಿ.ದೀನಾ ಮಂಜುನಾಥ, ಜಿಪಂ ಸಿಇಒ ಕೆ.ನಿತೀಶ್, ಎಸ್ಪಿ ಸಿ.ಕೆ.ಬಾಬಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ:

     73ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸನ್ಮಾನಿಸಿದರು.ಜಿಲ್ಲಾಮಟ್ಟದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಟಿ.ಸುಪ್ರಿತ, ಬಿ.ಎಂ.ಅಪ್ರೀನ್, ಎಚ್.ಕೆ.ಕಾವ್ಯ ಅವರನ್ನು ಸನ್ಮಾನಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಂಪ್ಯೂಟರ್ ನೀಡಿ ಗೌರವಿಸಲಾಯಿತು.

    ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಕುಸುಮಾ ಉಜ್ಜೈನಿ, ಅನುಪಲ್ಲವಿ, ನಾಗರಾಜಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಉತ್ತೇಜ್, ಗೋಪಿ, ಯೋಜಿತ್, ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು. ಸೇವಾ ಕ್ಷೇತ್ರದಲ್ಲಿ ಎಸ್.ತಿಪ್ಪೇಸ್ವಾಮಿ ಮತ್ತು ಎಸ್.ಎಂ.ಗಿರೀಶ್ ಅವರನ್ನು ಸನ್ಮಾನಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link