ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಹಾನಗಲ್ಲ :

       ಮಕ್ಕಳ ಮನಸ್ಸನ್ನು ಅರಳಿಸುವ ಶಾಲೆಗಳು ದೇಶಭಕ್ತಿ ಹಾಗೂ ಸಾಂಸ್ಕತಿಕ ವೈಭವದ ಮೂಲಕ ಜನ ಮಾನಸಕ್ಕೆ ಉತ್ತಮ ಪೀಳಿಗೆಯನ್ನು ನೀಡುವ ಶಕ್ತಿ ಕೇಂದ್ರಗಳು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ ನುಡಿದರು.

       ಹಾನಗಲ್ಲಿನ ಕಲ್ಲಹಕ್ಕಲ-ಕಮಾಟಗೇರಿ ಬಡಾವಣೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ನಿಯಮಗಳಿಗೂ ಮೀರಿ ಶಿಕ್ಷಕರು ಮಕ್ಕಳ ಬದುಕನ್ನು ಮುಂದಿಟ್ಟುಕೊಂಡು ಶೈಕ್ಷಣಿಕ ಹಿತ ಕಾಯಬೇಕು. ನಾಳಿನ ಭಾರತದ ಪ್ರಜೆಗಳು ಹೇಗಿರಬೇಕೆಂದ ಸ್ಪಷ್ಟ ಚಿತ್ರಣ ನೀಡುವ ಪ್ರಯತ್ನದ ಜೊತೆಗೆ ಭವಿಷ್ಯ ರೂಪಿಸುವ ಶಿಕ್ಷಣ ಬೇಕಾಗಿದೆ.

        ಶೈಕ್ಷಣಿಕ ನಿಯಮಗಳನ್ನು ಮೀರಿಯೂ ಶಿಕ್ಷಕನಾದವನು ಇಡೀ ತನ್ನ ವ್ಯಾಪ್ತಿಯ ಪ್ರದೇಶವನ್ನು ದೇಶದ ಹಿತಕ್ಕಾಗಿ ಬದಲಾಯಿಸಬಲ್ಲ ಶಕ್ತಿ ಇದೆ. ಅಂಥ ಇಚ್ಛಾಶಕ್ತಿಯ ನಿಜವಾದ ಅನಾವರಣ ಆಗಬೇಕಾಗಿದೆ ಎಂದರು.

        ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಮುಖ್ಯ ಅತಿಥಿಯಾಗಿ ಮಾತನಾಡಿ, ನಿಜವಾದ ಶೈಕ್ಷಣಿಕ ಕಳಕಳಿಯ ಈ ಶಾಲೆ ಮಾದರಿ ಶಾಲೆಯಾಗಿದೆ. ಮಕ್ಕಳಲ್ಲಿನ ಶಿಸ್ತು, ಗ್ರಹಿಕೆ, ಜನ ಜಾಗೃತಿ, ಪ್ರತಿಭಾ ಅಭಿವ್ಯಕ್ತಿ ಸೇರಿದಂತೆ ಶಾಲೆ, ಮನೆ, ಸಮಾಜಕ್ಕೆ ಮಾದರಿಯಾಗಬಲ್ಲ ವಿಚಾರಗಳನ್ನು ಮಕ್ಕಳಿಗೆ ನೀಡುತ್ತಿರುವುದು ಈ ಶಾಲೆಯ ವಿಶೇಷ ಎಂದ ಅವರು, ಇಂಥ ಶಾಲೆಗಳಲ್ಲಿನ ಶಿಕ್ಷಕರ ಶ್ರಮ ನಿಜಕ್ಕೂ ಸಾರ್ಥಕ ಎಂದರು.

       ಧಾರವಾಡ ಸಮೀಪದ ಜೀರಗಿವಾಡ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ.ಎಚ್.ನದಾಫ್ ಮುಖ್ಯ ಅತಿಥಿಯಾಗಿ ಮಾತನಾಡಿ, ಶಾಲೆಯಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪಾಲಕರು ಹಾಗೂ ಶಾಲೆಯ ಪೋಷಕರ ಜವಾಬ್ದಾರಿ ಹೆಚ್ಚಾಗಿರುತ್ತದೆ. ಶಾಲೆ ಎಂದರೆ ಅದು ಕೇವಲ ನಾಲ್ಕು ಗೋಡೆಗಳಲ್ಲಿ ಅಕ್ಷರ ಕಲಿಸುವುದು ಮಾತ್ರವಲ್ಲ. ಇಲ್ಲಿಂದಲೇ ಬದುಕನ್ನು ಕಲಿಸಬೇಕು. ಅಂತಹ ಸಂಸ್ಕಾರಕ್ಕೆ ಮುಂದಾಗುವಾಗ ಯಾವುದೇ ಬೇಧಗಳಿಗೆ ಅವಕಾಶವಿರಬಾರದು ಎಂದ ಅವರು, ಕೊಳಚೆ ಪ್ರದೇಶವೆಂದೇ ಗುರುತಿಸಿರುವ ಈ ಶಾಲಾ ಪ್ರದೇಶದಲ್ಲಿ ಬಡ ಮಕ್ಕಳೇ ಇದ್ದಾರೆ. ಆದರೆ ಶಿಕ್ಷಣ ಮಾತ್ರ ಯಾವುದೇ ಖಾಸಗಿ ಶಾಲೆಗೆ ಏನೂ ಕಡಿಮೆ ಇಲ್ಲದಂತೆ ಶೈಕ್ಷಣಿಕ ಪ್ರಗತಿ ಇರುವುದೇ ನಿಜಕ್ಕೂ ಪ್ರಶಂಷನೀಯವಾದುದು ಎಂದರು.

        ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಶಿಕ್ಷಣ ಸಂಯೋಜನಾಧಿಕಾರಿ ಡಿ.ಮೋಹನಕುಮಾರ, ದೀಪಾ ಗೋನಾಳ, ಟಿ.ಶಿವಕುಮಾರ, ಮಹೇಶಕುಮಾರ ಹನಕೆರೆ, ಡಿ.ನಾಗರಾಜ, ಆರ್.ಕೆ.ಕರಗುದರಿ, ಸಿಆರ್‍ಪಿ ಆರ್.ಜಯಲಕ್ಷ್ಮೀ, ಮುಖ್ಯ ಶಿಕ್ಷಕರಾದ ನಂದೀಶ ಲಮಾಣಿ, ಸಹಶಿಕ್ಷಕರಾದ ಶಾಂತಾ ಪ್ರಾಣೇಶರಾವ್, ಜೆ.ರೇಣುಕಾ, ನಾಗರತ್ನಾ ವಾಲೀಕಾರ, ಶ್ವೇತಾ ನಂದೀಶ ಲಮಾಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link