ಬಳ್ಳಾರಿ
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತಿಕ ಚುನಾವಣೆ-2019ರ ಹಿನ್ನೆಲೆಯಲ್ಲಿ ಮೇ 31 ರಂದು ಜಿಲ್ಲೆಯ ಸಂಡೂರು, ಹೆಚ್.ಹಡಗಲಿ, ಹರಪನಹಳ್ಳಿ, ಹೊಸಪೇಟೆ ತಾಲೂಕಿನ ತಹಶೀಲ್ದಾರರ ಕಚೇರಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಈ ಮತ ಎಣಿಕೆ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿರ್ಭಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆ ನಂತರ ವಿಜಯ ಹೊಂದಿದ ಅಭ್ಯರ್ಥಿಗಳು ಬೆಂಬಲಿಗರು ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ಸಭೆ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಿದಲ್ಲಿ ಕಾನೂನು ಸುವ್ಯವಸ್ಥೆ ಭಂಗವಾಗುವ ಸಾಧ್ಯತೆಗಳು ಇರುವುದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮೇ 31 ರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮತ ಎಣಿಕೆಯ ಕೇಂದ್ರದ ವ್ಯಾಪ್ತಿಯ ಸುತ್ತಲೂ ದಂಡ ಪ್ರಕಿಯಾ ಸಂಹಿತೆ 1973ರ ಸೆಕ್ಷನ್ ಕಲಂ:144ರಡಿ ನಿಷೇಧಾಜ್ಞೆ ಪ್ರದೇಶವಾಗಿರುತ್ತದೆ.
ಈ ಅವಧಿಯಲ್ಲಿ ಜಿಲ್ಲೆಯ ಸಂಡೂರು, ಹೆಚ್.ಹಡಗಲಿ, ಹರಪನಹಳ್ಳಿ, ಹೊಸಪೇಟೆ ತಾಲೂಕಿನಾದ್ಯಂತ ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ ಸಮಾರಂಭ/ರ್ಯಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸುವುದು, ಸ್ಪೋಟಕ/ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮತ ಎಣಿಕೆಯ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ತಂಗುವಿಕೆ, ಧ್ವನಿವರ್ಧಕ ಬಳಕೆಯನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
