ಹೊಸಪೇಟೆ :
ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಸಂಚಾರವನ್ನು ಕೂಡಲೇ ಆರಂಭಿಸುವಂತೆ ಒತ್ತಾಯಿಸಿ ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನೈರುತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಹೊಸಪೇಟೆ-ಕೊಟ್ಟೂರು ಪ್ರಯಾಣಿಕರ ರೈಲು ಸಂಚಾರ ಈಗಾಗಲೇ ವಿಳಂಬವಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸಿ, ರೈಲು ಸಂಚಾರ ಆರಂಭಿಸಬೇಕು. ಈ ಭಾಗದ ಬಹು ದಿನದ ಬೇಡಿಕೆಯಾದ ಹೊಸಪೇಟೆ-ಬೆಂಗಳೂರು ಹಗಲು ಹೊತ್ತು ಓಡಾಡುವ ಇಂಟರ್‍ಸಿಟಿ ಎಕ್ಸ್‍ಪ್ರೆಸ್‍ನ್ನು ಕೂಡಲೇ ಆರಂಭಿಸಬೇಕು. ಅನಂತಶಯನಗುಡಿ ರೈಲ್ವೇ ಗೇಟ್‍ನ ಸಂಖ್ಯೆ ಎಲ್.ಸಿ.-85ಗೆ ಮೇಲ್ಸೇತುವೆ ನಿರ್ಮಾಣ ಶೀಘ್ರವೇ ಆರಂಭಿಸುವಂತೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಎ.ಕೆ.ಗುಪ್ತಾ ಮಾತನಾಡಿ, ರೈಲ್ವೇ ಮಾರ್ಗದಲ್ಲಿ ಹಾದು ಹೋಗಿರುವ ಅಧಿಕ ಸಾಮಾಥ್ರ್ಯದ ವಿದ್ಯುತ್ ತಂತಿಗಳನ್ನು ಎತ್ತರಿಸುವ ಕಾಮಗಾರಿ ಆಗಷ್ಟ್‍ನಲ್ಲಿ ಪೂರ್ಣಗೊಳ್ಳಲಿದೆ. ವ್ಯಾಸನಕೇರಿ-ಕೊಟ್ಟೂರು ರೈಲು ಮಾರ್ಗದ ಮಧ್ಯೆ ಒಟ್ಟು 29 ರೈಲ್ವೇ ಗೇಟುಗಳಿವೆ. ಅದರಲ್ಲಿ 6 ಕಡಿಮೆ ಬಳಕೆಯ ರೈಲ್ವೇ ಕ್ರಾಸಿಂಗ್ ಗೇಟುಗಳನ್ನು ಬಂದ್ ಮಾಡಲಾಗುವುದು. ಉಳಿದ 19 ಗೇಟುಗಳನ್ನು ಹತ್ತಿರದಲ್ಲಿರುವ ಗೇಟುಗಳಿಂದ ಸಂಪರ್ಕ ಕಲ್ಪಿಸಿ, 4ಗೇಟುಗಳಿಗೆ ಅಂಡರ್ ಬ್ರಿಡ್ಜ್ ನಿರ್ಮಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಕೆ.ಮಹೇಶ್, ಮುಖಂಡರಾದ ಎಂ.ಶಾಮಪ್ಪ, ಟಿ.ಆರ್.ತಿಪ್ಪೇಸ್ವಾಮಿ, ಅರವಿಂದ ಜಾಲಿ, ಕೌತಾಳ್ ವಿಶ್ವನಾಥ, ಹಾಗೂ ಶಿವಪುತ್ರಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ