ಬೆಂಗಳೂರು:
ಹಳೇ ಕಟ್ಟಡ ತೆರವುಗೊಳಿಸುತ್ತಿದ್ದ ವೇಳೆ ಮುಗಿಲೆತ್ತರದ ಮೊಬೈಲ್ ಟವರ್’ವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ 11 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಲಗ್ಗೆರೆಯಲ್ಲಿ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ಜೆಸಿಬಿಯಲ್ಲಿ ಸೈಟ್ ಕ್ಲೀನ್ ಮಾಡಲಾಗುತ್ತಿತ್ತು. ಈ ವೇಳೆ ಜೆಸಿಬಿ ಮುಂಭಾಗ ಟವರ್‌ಗೆ ತಗುಲಿದ್ದ ಮನೆ ಸಮೇತ ಕುಸಿದು ಬಿದ್ದಿದೆ.
ಮೊಬೈಲ್ ಟವರ್‌ಗೆ ಹೊಂದಿಕೊಂಡಿರುವ ಎರಡು ಅಂತಸ್ತಿನ ಕಟ್ಟಡದಲ್ಲಿ 11 ಜನ ವಾಸ ಮಾಡುತ್ತಿದ್ದರು. ಟವರ್ ಬೀಳುವ ಮುನ್ಸೂಚನೆ ಸಿಗುತ್ತಿದ್ದಂತೆ ಮನೆಯೊಳಗಿದ್ದ ಎಲ್ಲರನ್ನೂ ಹೊರಗೆ ಕರೆತರಲಾಗಿತ್ತು. ಹೀಗಾಗಿ ಅದೃಷ್ಟವಶಾತ್ 11 ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಮೊಬೈಲ್ ಟವರ್ ಬಿದ್ದು ಪಕ್ಕದಲ್ಲಿದ್ದ 2 ಅಂಗಡಿಗಳಿಗೆ ಹಾನಿಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ನಂದಿನಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನಿವೇಶನದ ಮಾಲೀಕ ಹರೀಶ್ ಎಂಬವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಆರೋಪದಡಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.