ಬೆಂಗಳೂರು
ಪಕ್ಷದ ಶಿಸ್ತು ಉಲ್ಲಂಘಿಸಿ ಬಂಡಾಯ ಎದ್ದಿರುವ ಶಾಸಕರ ಮೇಲೆ ಮೊದಲು ಶಿಸ್ತು ಕ್ರಮ ಕೈಗೊಳ್ಳಲಿ. ನಿಮಗೆ ನಿಜಕ್ಕೂ ಧೈರ್ಯ ಇದ್ದರೆ ಅಂತಹ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಬಿಜೆಪಿ ವಕ್ತಾರ ಹಾಗೂ ಶಾಸಕ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷದ ಶಾಸಕರನ್ನು ನಿಯಂತ್ರಿಣದಲ್ಲಿಟ್ಟುಕೊಳ್ಳಲು ಸಾಧ್ಯವಾಗದೇ ನಮ್ಮ ಪಕ್ಷದ ಮೇಲೆ ಅನಗತ್ಯವಾಗಿ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ. ಮೊದಲು ನಿಮ್ಮ ಮನೆಯನ್ನು ಭದ್ರಪಡಿಸಿಕೊಳ್ಳಿ. ನಮ್ಮ ಮೇಲೆ ಆರೋಪ ಮಾಡುವ ನೀವು ಯಾವ ಆಮೀಷ ಒಡ್ಡಿ ಅತೃಪ್ತರನ್ನು ಪಕ್ಷಕ್ಕೆ ಮತ್ತೆ ಕರೆದುಕೊಂಡು ಬಂದಿದ್ದೀರಿ ಎಂಬುದನ್ನು ರಾಜ್ಯದ ಜನರ ಮುಂದೆ ಬಹಿರಂಪಡಿಸಿ ಎಂದರು.
ಇದು ಜನ ಬಯಸಿದ ಸರ್ಕಾರವಲ್ಲ. ನಾವು 40 ಸ್ಥಾನದಿಂದ 104 ಸ್ಥಾನಗಳನ್ನು ಗೆದ್ದಿದ್ದೇವೆ. ಚುನಾವಣಾ ಅಖಾಡದಲ್ಲಿ ನಮಗೆ ಗೆಲುವು ಸಿಕ್ಕಿದೆ. ಆದರೆ ನೀವು ಗಣಿತಶಾಸ್ತ್ರದಂತೆ ಸರ್ಕಾರ ನಡೆಸುತ್ತಿದ್ದೀರಾ. ನಮ್ಮ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಮೈತ್ರಿ ಸರ್ಕಾರವನ್ನ ಯಾವಾಗ ಉರುಳಿಸುತ್ತೀರಾ ಎಂದು ಅವರೇ ಕೇಳುತ್ತಿದ್ದಾರೆ ಎಂದು ಆಪರೇಶನ್ ಕಮಲ ಕಾರ್ಯಾಚರಣೆ ಇನ್ನೂನಡೆಯುತ್ತಿದೆ ಎಂಬುದನ್ನು ಸೂಚ್ಯವಾಗಿ ಹೇಳಿದರು.
ಆಪರೇಷನ್ ಕಮಲ ಕಾರ್ಯಾಚರಣೆ ವಿಫಲವಾಗಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ ಸಿ.ಟಿ. ರವಿ, ಯುದ್ಧದಲ್ಲಿ ಬಿಜೆಪಿ ಸೋತಿಲ್ಲ. ಅರ್ಜುನನಿಗೆ [ಅಮಿತ್ ಷಾ] ಚಕ್ರವ್ಯೂಹ ಬೇಧಿಸುವುದು ಗೊತ್ತಿದೆ. ಚಕ್ರವ್ಯೂಹದಿಂದ ಹೊರ ಬರುವುದು ಸಹ ತಿಳಿದಿದೆ. ಯಾವ ಸಂದರ್ಭದಲ್ಲಿ ಯಾವ ಪಾನ್ ಮೂವ್ ಮಾಡಬೇಕು ಎನ್ನುವ ಅರಿವು ಸಹ ಇದೆ ಎಂದರು.
ಬಿಜೆಪಿಯವರನ್ನು ಮಾನಗೆಟ್ಟವರು ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆಗೆ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಮರ್ಯಾದಾ ಪುರುಷೋತ್ತಮ ಎಂದು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ರಾಜ್ಯದ ಜನ ಮರ್ಯಾದ ಪುರುಷೋತ್ತನನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಹೀಗೆ ಅಧಿಕಾರ ಕಳೆದುಕೊಂಡವರು ಮಾನ ಮರ್ಯಾದೆ ಬಿಟ್ಟು ಜೆಡಿಎಸ್ ಗೆ ಬೆಂಬಲ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಮಾಜಿ ಆದ ನಂತರವೂ ತಾವು ವಾಸವಾಗಿದ್ದ ಕಾವೇರಿ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಕಚೇರಿಯನ್ನೂ ಸಹ ಹೊಂದಿದ್ದಾರೆ. ಯಾವ ಪ್ರಭಾವ ಬೀರಿ ಕೊಠಡಿ ಪಡೆದುಕೊಂಡಿದ್ದಾರೆ. ಅವರಿಗಿಂತ ಮರ್ಯಾದಸ್ಥರು ಇನ್ನೊಬ್ಬರಿಲ್ಲ ಎಂದರು.
ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಏಳು ಜನ ಶಾಸಕರನ್ನು ಜೆಡಿಎಸ್ ಗೆ ಸೇರಿಸಿಕೊಂಡಿದ್ದರು. ತಮ್ಮ ಕಾಲದಲ್ಲಿ ಆದ ಈ ರಾಜಕೀಯ ಬೆಳವಣಿಗೆಯನ್ನು ಗೌಡರು ಏನೆಂದು ವಿಶ್ಲೇಷಿಸುತ್ತಾರೆ. ಹಿರಿಯ ರಾಜಕಾರಣಿಯಾಗಿ ಬಂಡಾಯ ಎನ್ನುವುದು ಶಾಸಕರ ಖರೀದಿ ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.
ನಾವು ಬರ ಅಧ್ಯಯನ ನಡಸಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದೇವು. ರಾಜಕೀಯ ಬೆಳವಣಿಗೆಗಳ ಬಗ್ಗೆ ಅಲ್ಲಿ ಚರ್ಚೆ ಮಾಡಿದ್ದೇವೆ. ಹರಿಯಾಣದ ಗುರುಗ್ರಾಮ್ ದಲ್ಲೂ ವಾಸ್ತವ್ಯ ಹೂಡಿದ್ದೇವು. ಆದರೆ ಮುಖ್ಯಮಂತ್ರಿಯಾಗಿ ನೀವು ತಾಜ್ ವೆಸ್ಟೆಂಡ್ ನಲ್ಲಿ ಉಳಿದಿರುವುದಾರೂ ಏಕೆ?. ಭತ್ತಕ್ಕೆ ಬೆಂಬಲ ಬೆಲ ನಿಗದಿ ಮಾಡಿ ಸಾಕಷ್ಟು ಸಮಯ ಆಯಿತು. ಆದರೆ ಆದ್ರೆ ಖರೀದಿ ಕೇಂದ್ರ ತೆರೆದಿಲ್ಲ. ಮುಖ್ಯಮಂತ್ರಿಯಾಗಿ ಏನು ಮಾಡುತ್ತಿದ್ದೀರಿ ಎಂದು ಸಿ.ಟಿ. ರವಿ ಕುಮಾರ ಸ್ವಾಮಿ ಅವರನ್ನು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ