ನಾಟಿಂಗ್ಹ್ಯಾಮ್:
ಭಾರತ – ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧ 203 ರನ್ ಗಳ ಬೃಹತ್ ಗೆಲುವು ದಾಖಲಿಸಿದೆ.
ತನ್ಮೂಲಕ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-2 ಅಂತರ ಗಳಿಸುವ ಮೂಲಕ ಸರಣಿ ಗೆಲುವಿನ ಆಸೆ ಜೀವಂತವಾಗಿರಿಸಿಕೊಂಡಿದೆ.
ದ್ವಿತೀಯ ಹಾಗೂ ಅಂತಿಮ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ನೀಡಿದ್ದ 521 ರನ್ ಗಳ ಭಾರೀ ಗುರಿಯನ್ನು ಬೆನ್ನತ್ತಿತ್ತು. ನಾಲ್ಕನೇ ದಿನದಾಟ ಮುಗಿವ ವೇಳೆ ಅತಿಥೇಯ ಆಂಗ್ಲ ಪಡೆ 9 ವಿಕೆಟ್ ನಷ್ಟಕ್ಕೆ 311 ರನ್ ಕಲೆ ಹಾಕಿತ್ತು.
ಪಂದ್ಯದ ಐದನೇ ದಿನವಾದ ಇಂದು (ಬುಧವಾರ) 104.5 ಓವರ್ ಗಳಲ್ಲಿ 317 ರನ್ ಬಾರಿಸುವಷ್ಟರಲ್ಲಿ ಕಡೆಯ ವಿಕೆಟ್ ಕೂಡ ಪತನಗೊಂಡಿದೆ. ಜೇಮ್ಸ್ ಆ್ಯಂಡರ್ಸನ್ 11 ರನ್ ಗಳಿಸಿ ಆರ್. ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಆದಿಲ್ ರಶೀದ್ ಔಟಾಗದೆ 33 ರನ್ ಗಳಿಸಿದ್ದರು.
ಈ ಸೋಲಿನೊಡನೆ ಚೊಚ್ಚಲ ಟೆಸ್ಟ್ ಶತಕ ಗಳಿಸಿದ್ದ ಜೋಸ್ ಬಟ್ಲರ್ (106), ಅರ್ಧ ಶತಕ ಗಳಿಸಿ ಸಾಧನೆ ಮೆರೆದಿದ್ದ ಬೆನ್ ಸ್ಟೋಕ್ಸ್ (62) ಪ್ರಯತ್ನ ವ್ಯರ್ಥವಾಗಿದೆ.
ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ 5, ವಿಕೆಟ್ ಕೀಳುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದಾರೆ.