ರಾಯಚೂರು: ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭಾರೀ ಅವ್ಯವಹಾರ : 3 ಕೋಟಿ ರೂ. ಗುಳುಂ

ರಾಯಚೂರು

    ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನಲ್ಲಿರೊ ಆರ್​ಚ್ ಕ್ಯಾಂಪ್​ 2 ರಲ್ಲಿ (ಬಂಗಾಳ ಮೂಲದ ಹಿಂದುಗಳಿಗೆ ಪುರ್ವಸತಿ ಕಲ್ಪಿಸಿರುವ ಪ್ರದೇಶ. ಸುಮಾರು ನಾಲ್ಕೈದು ಕ್ಯಾಂಪ್​​ಗಳಿವೆ)​​ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ  ಸಂಘವಿದೆ. ಇದೇ ಸಹಕಾರಿ ಸಂಘದಲ್ಲಿ ಈಗ ಕೋಟಿ ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. 2021 ನೇ ಸಾಲಿನಲ್ಲಿ ಈ ಸಹಕಾರಿ ಸಂಘದಿಂದ ಕೆಲ ರೈತರು ಭತ್ತ ಅಡಮಾನ ಇಟ್ಟುಕೊಂಡು ಸಾಲ ಪಡೆದಿದ್ದರು. ಆನಂದ್ ಎಂಬ ರೈತ 1500 ಚೀಲ ಭತ್ತವನ್ನು ಅಡಮಾನ ಇಟ್ಟು,16 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಇತ್ತೀಚೆಗೆ ಆ ರೈತ ಸಾಲ ಮರುವಾಪತಿ ಮಾಡಲು ಹೋಗಿದ್ದಾಗ ಆಡಳಿತ ಮಂಡಳಿಯ ಅವ್ಯವಹಾರ ಬಯಲಾಗಿದೆ. ರೈತ ಆನಂದ್ ಅಡಮಾನ ಇಟ್ಟಿದ್ದ 1500 ಚೀಲ ಭತ್ತವೇ ಗೋಡೌನ್​​ನಿಂದ ಕಾಣೆಯಾಗಿತ್ತು. ಇದು ಸಹಕಾರಿ ಸಂಘದ ಈಗಿನ ಹೊಸ ಆಡಳಿತ ಮಂಡಳಿಯನ್ನು ಕೆರಳಿಸಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ರೈತರು ಅಡಮಾನ ಇಟ್ಟಿದ್ದ ಭತ್ತವನ್ನೇ ಬಳಸಿಕೊಂಡು ಹಳೆ ಆಡಳಿತ ಮಂಡಳಿ ಗೋಲ್​ಮಾಲ್​ ಮಾಡಿರುವ ಸತ್ಯ ಬಯಲಾಗಿದೆ.

    ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆಯೇ ಸಹಕಾರಿ ಸಂಘದ ಹೊಸ ಆಡಳಿತ ಮಂಡಳಿ, ಗೋಲ್​ಮಾಲ್​ ಆರೋಪದ ದಾಖಲೆಗಳನ್ನು ನೀಡಿ ಎಂದು ಹಳೆ ಆಡಳಿತ ಮಂಡಳಿಯನ್ನು ಆಗ್ರಹಿಸಿದೆ. ಆದರೂ ಹಳೆ ಆಡಳಿತ ಮಂಡಳಿ ದಾಖಲೆಗಳನ್ನೇ ನೀಡುತ್ತಿಲ್ಲ. ಕೇವಲ ರೈತರನ್ನು ವಂಚಿಸಿರೋದಷ್ಟೇ ಅಲ್ಲದೆ, ವಿವಿಧ ರೀತಿಯಲ್ಲೂ ಹಳೆ ಆಡಳಿತ ಮಂಡಳಿ ಕೋಟಿ ಕೋಟಿ ಅವ್ಯವಹಾರ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಎಂದು ಹೊಸ ಆಡಳಿತ ನಿರ್ದೇಶಕ ಆರೋಗ್ಯಸ್ವಾಮಿ ಆಗ್ರಹಿಸಿದ್ದಾರೆ. ದೊಡ್ಡ ಮಟ್ಟದ ಅವ್ಯವಹಾರ ಆರೋಪವನ್ನು ಸದ್ದಿಲ್ಲದೇ ಮುಚ್ಚಿ ಹಾಕುವ ಯತ್ನವೂ ನಡೆಯುತ್ತಿದ್ದು, ಈ ಬಗ್ಗೆ ಕೂಡಲೇ ಸಂಬಂಧ ಪಟ್ಟ ಇಲಾಖೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕಿದೆ. ಅಲ್ಲದೇ ಕಾಣೆಯಾಗಿರುವ ಭತ್ತದ ಚೀಲಗಳ ನಿಗೂಢತೆಯನ್ನು ಬೇಧಿಸಬೇಕಿದೆ.

Recent Articles

spot_img

Related Stories

Share via
Copy link