ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ವರದಿಯಾಗಿದೆ.ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ.
ಮೃತರನ್ನು ಸೂರಜ್ (27) ಹಾಗೂ ಕಮಲ್ (26) ಗುರುತಿಸಲಾಗಿದ್ದು ಉತ್ತರ ಪ್ರದೇಶದ ಖಾನಾಪುರ್ ನಿವಾಸಿಗಳು ಎಂದು ತಿಳಿದು ಬಂದಿದೆ.ಗಂಭೀರವಾಗಿ ಗಾಯಗೊಂಡ ಜೈಸಿಂಗ್, ಯು ಜೈಸಿಂಗ್ ಅವರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ಇಬ್ಬರಿಗೆ ಹಿಂದೂಪೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರು ಮಂದಿ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿಂದೂಪುರ ಬಳಿಯ ಕೈಗಾರಿಕಾ ಪ್ರದೇಶ ಶ್ಯಾಮ್ ಪೈರಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿಕೊಂಡು ಗೌರಿಬಿದನೂರು ಮಾರ್ಗವಾಗಿ ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮತ್ತೊಂದು ಘಟನೆ ಚಿಂತಾಮಣಿ ತಾಲೂಕಿನ ದಂಡುಪಾಳ್ಯ ಗೇಟ್ ಬಳಿ ನಡೆದಿದೆ. ಕಾರು ಹಾಗೂ ಟಿಟಿ ನಡುವೆ ಮುಖಾಮುಖಿ ಡಿಕ್ಕಿಯಾಗದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮಗ ಶ್ರೀಕಾಂತ್ ಈತನ ತಂದೆ ಶ್ರೀನಿವಾಸಲು ಹಾಗೂ ತಾಯಿ ಪುಷ್ಪ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇನ್ನೂ ಟಿಟಿ ವಾಹನದಲ್ಲಿದ್ದ 12 ಜನರಿಗೆ ಗಂಭೀರ ಗಾಯಗಳಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಟಿಟಿ ವಾಹನ ಆಂಧಪ್ರದೇಶದ ಬಾಯಿಕೊಂಡದಿಂದ ಚಿಂತಾಮಣಿ ಕಡೆಗೆ ಬರುತ್ತಿತ್ತು. ಅಪಘಾತಕ್ಕೀಡಾದ ಕಾರು ಬೆಂಗಳೂರಿನಿಂದ ಕಡಪ ಹೈವೇ ರಸ್ತೆ ಮುಖಾಂತರ ಆಂಧ್ರಪ್ರದೇಶದ ಕಡೆಗೆ ಹೋಗುತ್ತಿತ್ತು. ಈ ವೇಳೆ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ.
ಕಾರಿನಲ್ಲಿದ್ದವರು ಮೂಲತಃ ಆಂಧ್ರದವರಾದರೂ ಬೆಂಗಳೂರಿನಲ್ಲಿ ನೆಲಸಿದ್ದರು. ಬುಧವಾರ ಸಂಬಂಧಿಕರ ಮದುವೆಗೆ ಎಂದು ಆಂಧ್ರಪ್ರದೇಶದ ಕಡೆಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.ಇನ್ನೂ ಟಿಟಿ ವಾಹನದಲ್ಲಿದ್ದವರು ಸಹ ಬೆಂಗಳೂರಿನವರಾಗಿದ್ದು, ಬಾಯಿಕೊಂಡ ಗಂಗಮ್ಮ ದೇವಾಲಯಕ್ಕೆ ಹೋಗಿ ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದರು ಎಂದು ತಿಳಿದುಬಂದಿದೆ.