ಕಾರವಾರ:
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಾ ಮಳೆಯಾಗುತ್ತಿದ್ದು, ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.9 ಮಂದಿಯ ಪೈಕಿ ಒಂದೇ ಕುಟುಂಬದ ಐವರು ಇದ್ದಾರೆ ಎನ್ನಲಾಗಿದೆ. ಒಂದೇ ಕುಟುಂಬದ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ, ರೋಷನ್, ಆವಂತಿಕಾ, ಜಗನ್ನಾಥ ಸೇರಿದಂತೆ 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಎನ್ಡಿಆರ್ಎಫ್ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಕ್ಯಾಂಟೀನ್ ವೊಂದರ ಪಕ್ಕದಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ವೊಂದು ಮಣ್ಣಿನ ರಭಸಕ್ಕೆ ಗಂಗಾವಳಿ ನದಿಗೆ ಕೊಚ್ಚಿಹೋಗಿದೆ. ಇದರಿಂದ ಟ್ಯಾಂಕರ್ ನಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಕೂಡ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆಂದು ತಿಳಿದುಬಂದಿದೆ.
ಮಣ್ಣಿನಡಿ ಸಿಲುಕಿದವರು ಮೃತಪಟ್ಟಿರುವ ಶಂಕೆಗಳು ವ್ಯಕ್ತವಾಗಿದೆ. ಜಿಲ್ಲಾಡಳಿತವು ಹೆದ್ದಾರಿ ಮೇಲಿನ್ನು ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ.ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನಿರಾಕಾರ ದೇವಾಲುದ ಬಳಿ ಕೂಡ ಗುಡ್ಡ ಕುಸಿತವಾಗಿದ್ದು, ಪಕ್ಕದಲ್ಲೆ ಇದ್ದ ಹಂಚಿನ ಮನೆಗೆ ಸಂಪೂರ್ಣ ಹಾನಿಯಾಗಿದೆ. ಮನೆಯವರು ಇಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ