ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ : ಹೈ ಅಲರ್ಟ್ ಘೋಷಣೆ..!!

ಬೆಂಗಳೂರು

     ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಗುರುವಾರ ತಡರಾತ್ರಿ ಭಾರಿ ಮಳೆ ಸುರಿದಿದ್ದು ಕರಾವಳಿ ಪ್ರದೇಶಗಳಲ್ಲಿ ಇನ್ನು ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

     ಕರಾವಳಿ ಭಾಗದಲ್ಲಿ ಜುಲೈ 20ರಿಂದ 22ರವರೆಗೆ 200 ಮಿಮೀ ಮಳೆ ಆಗುತ್ತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಶನಿವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ. ಅಲ್ಲದೆ ತುರ್ತು ನಿರ್ವಹಣಾ ಪಡೆಗೆ ಜಾಗೃತ ಸ್ಥಿತಿಯಲ್ಲಿರುವಂತೆ ಸೂಚನೆ ನೀಡಿದ್ದಾರೆ.

     ಕರಾವಳಿಯಲ್ಲಿ ಮಳೆ ಬಿರುಸು ಪಡೆದಿದ್ದು ಮಂಗಳೂರು ನಗರದ ವಿವಿಧೆಡೆ ಮಳೆ ನೀರು ಅವಾಂತರ ಸೃಷ್ಟಿಸಿದೆ. ಚರಂಡಿ ಬ್ಲಾಕ್ ಆಗಿ ಮಳೆ ನೀರು ಹರಿಯಲು ಸಾಧ್ಯವಾಗದೆ ಮಂಗಳೂರು ರೈಲು ನಿಲ್ದಾಣಕ್ಕೂ ನೀರು ನುಗ್ಗಿದೆ. ರೈಲು ನಿಲ್ದಾಣದ ಮುಂಭಾಗದಲ್ಲಿ ಕಾಮಗಾರಿ ನಡೆಯುತಿದ್ದ ಹಿನ್ನೆಲೆಯಲ್ಲಿ ಚರಂಡಿ ಬ್ಲಾಕ್ ಆಗಿತ್ತು. ಗುರುವಾರ ಒಂದೇ ಸಮನೆ ಸುರಿದ ಮಳೆಗೆ ನೀರು ರೈಲು ನಿಲ್ದಾಣದ ಒಳಗೆ ನುಗ್ಗಿದೆ. ಟಿಕೆಟ್ ಕೌಂಟರ್ ನಲ್ಲಿ ನೀರು ನಿಂತ ದೃಷ್ಯ ಅಲ್ಲಿನ ದಯನೀಯ ಸ್ಥಿತಿಯನ್ನು ತೋರಿಸುತ್ತಿದೆ.

      ಇನ್ನೂ ಬೆಂಗಳೂರು, ತುಮಕೂರು, ಮಂಡ್ಯ-ಮೈಸೂರು, ಶಿವಮೊಗ್ಗ, ಮಂಗಳೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಹಲವೆಡೆ ರಸ್ತೆಯ ಮೇಲೆ ನೀರು ನಿಂತು ಜನರು ಓಡಾಡಲು ಕಷ್ಟವಾಗುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಜನರು ಪರದಾಡಿ ಸಂಕಷ್ಟ ಎದುರಿಸುವಂತಾಯಿತು.

       ಮಂಗಳೂರು ನಗರದಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದರಿಂದ ಅದೂ ಬ್ಲಾಕ್ ಆಗಿ ರಸ್ತೆಯಲ್ಲಿ ನೀರು ತುಂಬಿಕೊಂಡು ಜನರು ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಯಿತು.

       ಮಂಗಳೂರಿನಲ್ಲಿ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ನೀರು ತುಂಬಿದ್ದರಿಂದ ಪ್ರಯಾಣಿಕರು ಆಕಡೆಯಿಂದ ಈಕಡೆಗೆ ತೆರಳಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಯಿತು. ಕಳೆದೆರೆಡು ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ, ನೇತ್ರಾವತಿ ಮತ್ತು ಕುಮಾರಧಾರ ನದಿಗಳು ತುಂಬದಿರುವುದು ಈ ಭಾಗದ ಜನರನ್ನು ಆತಂಕಕ್ಕೆ ಗುರಿ ಮಾಡಿದೆ.ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹೆಡಿಯಾಲಾ ಗ್ರಾಮದ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದೆ.

      ಅಂತರವಳ್ಳಿ ಕ್ರಾಸ್‍ನಲ್ಲಿ 50ಕ್ಕೂ ಹೆಚ್ಚು ಗುಡಿಸಲುಗಳಿಗೆ ನೀರು ತುಂಬಿದ್ದರಿಂದ ಗುಡಿಸಿಲಿನಲ್ಲಿ ವಾಸವಾಗಿದ್ದ ಜನ ರಾತ್ರಿಯಿಡೀ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಧಾರವಾಡದ ವಿವಿಧ ಭಾಗಗಳಲ್ಲಿ ಮಳೆಗೆ ಜನರು ಬಸವಳಿದು ಹೋಗಿದ್ದಾರೆ. ಜನ್ನತ್ ನಗರ ಬಡಾವಣೆಯಲ್ಲಿ ನೀರು ತುಂಬಿ ಜನರು ತೊಂದರೆ ಅನುಭವಿಸುವಂತಾಗಿದೆ.ಬಿಸಿಲಿನಿಂದ ಕಂಗೆಟ್ಟಿದ್ದ ಬೀದರ್ ಜಿಲ್ಲೆಯ ಜನರಿಗೆ ಮಳೆ ಸುರಿದಿರುವುದು ಖುಷಿ ಕೊಟ್ಟಿದೆ. ಬೀದರ್ ನಗರ, ತಾಲ್ಲೂಕು ಸೇರಿದಂತೆ ವಿವಿಧ ಭಾಗಗಳಲ್ಲಿ ಕೃಷಿಕರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ.

ಕೊಡಗಿನಲ್ಲಿ ಕಟ್ಟೆಚ್ಚರ

     ಕೊಡಗು ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. .ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ.ಕಳೆದ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಇನ್ನೂ ಮಳೆಯಾಗುವ ಸಾಧ್ಯತೆಗಳು ಹೆಚ್ಚಿವೆ ರಾಜಧಾನಿ ಬೆಂಗಳೂರಿನ ವಿವಿಧೆಡೆ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

     ಲಾಲ್‍ಭಾಗ್ ಬಳಿ ಚರಂಡಿ ಕಟ್ಟಿಕೊಂಡ ಹಿನ್ನೆಲೆಯಲ್ಲಿ ನೀರು ಸರಾಗವಾಗಿ ಹೋಗದೆ ರಸ್ತೆ ಮೇಲೆ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಯಿತು. ಎಂಜಿ ರಸ್ತೆಯಲ್ಲೂ ನೀರು ನಿಂತಿದ್ದರಿಂದ ಜನರು, ವಾಹನ ಸಂಚಾರರು ಪರದಾಡುವಂತಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link