ಪಾವಗಡ
ತಾಲ್ಲೂಕಿನಲ್ಲಿ 15 ವರ್ಷಗಳಿಂದ ಮಳೆಯಿಲ್ಲದೆ ಕುಡಿಯುವ ನೀರಿಗಾಗಿ ಜನತೆ ಪರದಾಡುತ್ತಿದ್ದಾರೆ. ಸರ್ಕಾರ ಗಮನ ಹರಿಸಿ, ಶುದ್ದ ಕುಡಿಯುವ ನೀರು ಕೊಡಲು ತಾಲ್ಲೂಕಿನಲ್ಲಿ ಡಿಫ್ಲೋರೈಡ್ ಘಟಕಗಳನ್ನು ಸ್ಥಾಪಿಸಿದೆ. ಆದರೂ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾಗಿ ನಿರ್ವಣೆಯಾಗುತ್ತಿಲ್ಲ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಕಚೇರಿ ಮುಂದೆ, ನಾಗಲಮಡಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಂಡ್ಲಿಜೀವಿ ಗ್ರಾಮಸ್ಥರು ಖಾಲಿ ಕೊಡಗಳ ಪ್ರದರ್ಶಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. 6 ತಿಂಗಳಿಂದ ಡಿಫ್ಲೋರೈಡ್ ಘಟಕ ಕೆಟ್ಟುನಿಂತಿದೆ. ಇದುವರೆಗೂ ಸರಿಪಡಿಸಲು ಸಾಧ್ಯವಾಗಿಲ್ಲ ಎಂದರೆ ಇದಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದರು.
ತಾಲ್ಲೂಕಿನ ಜನತೆ ಫ್ಲೋರೈಡ್ ನೀರು ಕುಡಿದು ಅಂಗವಿಕಲತೆ ಹಾಗೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಗರ್ಭಕೋಶ ಕಾಯಿಲೆಯಿಂದ ನರಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮತ್ತು ಘಟಕ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಚೆಲ್ಲಾಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ 200 ಕ್ಕೂ ಹೆಚ್ಚು ಡಿಫ್ಲೋರೈಡ್ ಘಟಕಗಳು ನಿರ್ಮಾಣ ಆಗಿದೆ. ಆದರೆ ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸರ್ಕಾರ ಘಟಕಗಳನ್ನು ಗುತ್ತಿಗೆದಾರರಿಗೆ ವಹಿಸುವುದರಿಂದ ಇಂತಹ ಅವ್ಯವಸ್ಥೆ ಆಗಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದರು.
ಸಹಾಯಕ ಎಂಜಿನಿಯರ್ ಬಿ.ಪಿ.ನಾಗರಾಜು ಮಾತನಾಡಿ, ಕೆಟ್ಟು ನಿಂತ ಡಿಫ್ಲೋರೈಡ್ ಘಟಕಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಕೆಲ ಡಿಫ್ಲೋರೈಡ್ ಘಟಕದ ಕಂಪನಿಗಳ ಗುತ್ತಿಗೆದಾರರಿಗೆ ಕೋರ್ಟ್ ನೋಟಿಸ್ ಸಹ ನೀಡಿದ್ದೇವೆ. ಇವರು ಯಾವುದಕ್ಕೂ ಬಗ್ಗುತ್ತಿಲ್ಲ. ನಿರ್ಮಾಣ ಮಾಡಿದ ಘಟಕಗಳ ಗುತ್ತಿಗೆ ಹಣ ಇವರಿಗೆ ನೇರವಾಗಿ ನೀಡಿದ್ದರಿಂದ ನಮ್ಮ ಕೈಗೆ ಗುತ್ತಿಗೆದಾರರು ಸಿಗುತ್ತಿಲ್ಲ. ಪೆಂಡ್ಲಿಜೀವಿ ಗ್ರಾಮದಲ್ಲಿ ಕೆಟ್ಟುನಿಂತ ಘಟಕವನ್ನು ಎರಡು ದಿನದೊಳಗೆ ರಿಪೇರಿ ಮಾಡಿಸಿ ನೀರು ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಕೆ.ನಾರಾಯಣಪ್ಪ, ಪೋಮ್ಯಾನಾಯ್ಕ್, ರೈತಸಂಘದ ಸದಸ್ಯರಾದ ಕೊಂಡಣ್ಣ, ಬಡಪ್ಪ, ಸುಬ್ಬರಾಯಪ್ಪ, ನಾಗರಾಜರೆಡ್ಡಿ, ಗ್ರಾಮಸ್ಥರಾದ ರತ್ನಮ್ಮ, ಸಂಜೀವಪ್ಪ, ಈರಪ್ಪರೆಡ್ಡಿ, ಮಾರಪ್ಪ, ಸುಬ್ಬಣ್ಣ, ಭಾವಕ್ಕ, ನಾಗಮ್ಮ, ಲಕ್ಷ್ಮಮ್ಮ, ಲಕ್ಷ್ಮೀದೇವಿ, ಚಿನ್ನಪ್ಪ, ನಾಗರಾಜು, ವೆಂಕಟೇಶ್, ಕಟ್ಟಾರೆಡ್ಡಿ, ಸುನೀತ ಹಾಜರಿದ್ದರು.