ದೊಡ್ಡ ಕೆರೆ ಶುದ್ಧೀಕರಣ ಘಟಕದ ನೀರು ಮುಗಿಯಲು ಕೇವಲ 10 ದಿನ ಬಾಕಿ
ಶಿರಾ:
ವಿಶೇಷ ವರದಿ : ಬರಗೂರು ವಿರೂಪಾಕ್ಷ
ಶಿರಾ ನಗರದ ಜನತೆಯನ್ನು ಪ್ರತೀ ವರ್ಷವೂ ಕಾಡುವ ಭಯಾನಕ ಸಂಗತಿ ಎಂದರೆ ಅದು ಕುಡಿಯುವ ನೀರಿನ ಸಂಕಟ ಎಂಬುದು ಅಕ್ಷರಶಃ ಸತ್ಯ.ಕಳೆದ 18 ವರ್ಷಗಳ ಹಿಂದೆ ಶಿರಾ ನಗರದ ಜನತೆ ಹನಿ ಹನಿ ನೀರಿಗೂ ಹಪಹಪಿಸುತ್ತಾ ಮಳೆರಾಯನನ್ನೇ ಕಾದು ಕೂತು ಅಂತರ್ಜಲ ಹೆಚ್ಚಿಸಲೆಂದು ಹಾಗೂ ಕೆರೆ-ಕಟ್ಟೆಗಳನ್ನು ತುಂಬಿಸೆಂದು ಪರಿಪರಿಯಾಗಿ ದೇವರ ಮೊರೆ ಹೋಗಿ ಬೇಡಿಕೊಳ್ಳುತ್ತಿದ್ದ ಕಾಲವೂ ಈ ಹಿಂದೆ ಇತ್ತು.
ಹಳ್ಳಿಯಿಂದ ನಗರಕ್ಕೆ ಕಾರ್ಯನಿಮಿತ್ತ ಬಂದವರು ಒಂದು ಗ್ಲಾಸ್ ನೀರು ಬೇಕೆಂದರೂ ಹತ್ತಿರದ ಹೋಟೆಲ್‍ಗೆ ಹೋಗಿ ನೀರು ಕೇಳಿದರೂ ಸಿಗದಂತಹ ಪರಿಸ್ಥಿತಿ ಇತ್ತು. ಒಂದು ಕಪ್ ಕಾಫಿ ಇಲ್ಲವೇ ಟೀ ಕುಡಿದರೆ ಮಾತ್ರಾ ಒಂದು ಲೋಟ ನೀರು ಲಭ್ಯವಾಗುತ್ತಿತ್ತು. ಆಗ ಕುಡಿಯುವ ನೀರಿಗಾಗಿ ಅಂತಹ ದಾರುಣ ಪರಿಸ್ಥಿತಿಯೂ ಇತ್ತು. ಶಿರಾ ನಗರದಲ್ಲಿನ ಕುಡಿಯುವ ನೀರಿನ ದಾರುಣ ಪರಿಸ್ಥಿತಿಯನ್ನರಿತ ಪ್ರಯಾಣಿಕರು ಕೂಡಾ ನಗರದಲ್ಲಿ ಒಂದು ದಿನದ ಮಟ್ಟಿಗೆ ತಂಗಲು ಕೂಡಾ ಚಿಂತಿಸುವ ಸ್ಥಿತಿ ಆಗ ನಿರ್ಮಾಣವಾಗಿತ್ತು.
ಯಾವಾಗ ಶಿರಾ ಹಾಗೂ ಕಳ್ಳಂಬೆಳ್ಳ ಕೆರೆಗಳಿಗೆ ಹೇಮಾವತಿಯ ನೀರು ಪಾದಾರ್ಪಣೆ ಮಾಡಿತೋ ಅಲ್ಲಿಂದ ಶಿರಾ ನಗರದ ಜನತೆಯ ಕುಡಿಯುವ ನೀರಿನ ಬವಣೆಯೂ ಒಂದಷ್ಟು ಬಗೆಹರಿಯಿತು. ಹನಿಹನಿ ನೀರಿಗಾಗಿ ಪರದಾಡುತ್ತಿದ್ದ ಜನ ಒಂದಿಷ್ಟು ನಿಟ್ಟುಸಿರು ಬಿಟ್ಟು ಸಂತೃಪ್ತಿಗೊಂಡದ್ದು ಸರಿಯಷ್ಟೇ. ಕೆರೆಯಲ್ಲಿ ನೀರಿದ್ದದ್ದರಿಂದ ಅಂತರ್ಜಲವೂ ಹೆಚ್ಚಾಗಿತ್ತು.
ಮಾಜಿ ಶಾಸಕ ದಿವಂಗತ ಪಿ.ಎಂ.ರಂಗನಾಥಪ್ಪ ಅವರಿಂದಾ ಹಿಡಿದು, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಎಸ್.ಕೆ.ದಾಸಪ್ಪ, ಕಾಂಗ್ರೆಸ್ ಮುಖಂಡ ಬೂವನಹಳ್ಳಿ ಶ್ರೀನಿವಾಸಯ್ಯ ಸೇರಿದಂತೆ ಹೇಮಾವತಿ ಹೋರಾಟ ಸಮಿತಿಯ ಸದಸ್ಯರು ಹಾಗೂ ಹಲವು ಮಠಾಧೀಶರ ಪರಿಶ್ರಮದಿಂದಲೂ ಹೇಮಾವತಿಯ ನೀರು ಶಿರಾ ಭಾಗಕ್ಕೆ ಹರಿಯಲು ಕಾರಣವಾಯಿತು. ಹೇಮಾವತಿಯ ಬಗ್ಗೆ ಅಷ್ಟೇನೂ ಹೆಚ್ಚು ಒಲವು ತೋರದಿದ್ದರೂ ಶಾಸಕ ಬಿ.ಸತ್ಯನಾರಾಯಣ್ ಕೂಡಾ ಮದಲೂರಿಗೆ ಕುಮಾರಸ್ವಾಮಿ ಆಗಮಿಸಿದ್ದಾಗ ಈ ಹಿಂದೆ ಮದಲೂರು ಕೆರೆಗೆ ಹೇಮಾವತಿ ಹರಿಸಲು ಒತ್ತಡವನ್ನೂ ಹೇರಿದ್ದರು.
ಕಳೆದ ಸುಮಾರು 18 ವರ್ಷಗಳಿಂದ ಹೇಮಾವತಿಯ ನೀರು ಅದರೊಟ್ಟಿಗೆ ಕಾಲ ಕಾಲಕ್ಕೆ ಒಂದಿಷ್ಟು ವರುಣನ ಕೃಪೆಯೂ ಸೇರಿದಂತೆ ಶಿರಾ ದೊಡ್ಡಕೆರೆಗೆ ನೀರು ಶೇಖರಣೆಗೊಂಡು ಕನಿಷ್ಟ ಒಂದು ವರ್ಷಕ್ಕೆ ಆಗುವಷ್ಟು ನೀರು ಕೆರೆಯಲ್ಲಿ ಶೇಖರಣೆಯಾಗುತ್ತಲೇ ಇತ್ತು.ಈವರೆಗೆ ಶಿರಾ ಕೆರೆಗೆ ಹೇಮಾವತಿಯ ನೀರು ಪ್ರತಿ ವರ್ಷವೂ ಹರಿದು ಬಂದು ಅದರೊಟ್ಟಿಗೆ ಮಳೆಯ ನೀರು ಕೂಡಾ ಶೇಖರಣೆಯಾಗಿ ಶಿರಾ ನಗರದ ಜನತೆ ಒಂದು ವರ್ಷಕ್ಕೆ ಆಗುವಷ್ಟು ನೀರನ್ನು ಕುಡಿಯಲು ಬಳಸಬಹದುತ್ತು. ಅತ್ಯಂತ ವಿಪರ್ಯಾಸದ ಸಂಗತಿ ಎಂದರೆ ಕಳೆದ ವರ್ಷ ಶಿರಾ ಕೆರೆಗೆ ಹರಿದು ಬಂದ ನೀರು ಸಂಪೂರ್ಣವಾಗಿ ಹೇಮಾವತಿಯ ನೀರೇ ಆಗಿತ್ತು. ಕಳೆದ ವರ್ಷ ಕೈ ಕೊಟ್ಟ ಮಳೆಯು ಯಾವ ಕೆರೆಗಳನ್ನೂ ಸರಿಯಾಗಿ ತುಂಬಿಸಲೇ ಇಲ್ಲ. ಕಳೆದ ವರ್ಷ ಶಿರಾ ಕೆರೆಯ ನೀರು ಖಾಲಿಯಾಗುವ ಸಂದಬಧಲ್ಲಿಯೇ ಬಿ.ಸತ್ಯನಾರಾಯಣ್ ನೂತನವಾಗಿ ಶಾಸಕರೂ ಆಗಿದ್ದರು.
ಶಿರಾ ಜನತೆ ನೀರಿಲ್ಲದೆ ಪರಿತಪಿಸುತ್ತಿದ್ದಾಗ ಕೆರೆಯ ಶುದ್ಧೀಕರಣ ಘಟಕದ ಮುಂದೆ ಹೇಮಾವತಿ ಹರಿಸುವಂತೆ ರಾತೋರಾತ್ರಿ ಪ್ರತಿಭಟನೆಗೂ ಕೂತು ಶಾಸಕ ಸತ್ಯನಾರಾಯಣ್ ಜಿಲ್ಲಾಡಳಿತವನ್ನು ಜಗ್ಗಿಸಿ ಕೆರೆಗೆ ನೀರು ಹರಿಸಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಒಂದು ಹನಿ ಹೇಮಾವತಿಯ ನೀರಾಗಲಿ ಇಲ್ಲವೇ ಮಳೆಯ ನೀರಾಗಲಿ ಶಿರಾ ಕೆರೆಗೆ ಹರಿಯಲೇ ಇಲ್ಲ. ಬಳಲಿ ಬೆಂಡಾಗಿ ಒಣಗಿ ಕೂತ ಶಿರಾ ಕೆರೆಗೆ ಶಾಸಕ ಸತ್ಯನಾರಾಯಣ್ ಹರಸಾಹಸ ಮಾಡಿ ನೀರು ತಂದಿದ್ದರು.
ಅತ್ಯಂತ ವಿಪರ್ಯಾಸದ ಸಂಗತಿ ಎಂದರೆ ಈ ಹಿಂದೆ ಮುಕ್ಕಾಲು ಭಾಗದಷ್ಟು ನೀರು ತುಂಬಿದ್ದ ಶಿರಾ ಕೆರೆ ಇದೀಗ ಕೇವಲ 10 ದಿನದೊಳಗೆ ಸಂಪೂರ್ಣವಾಗಿ ಖಾಲಿಯಾಗಲಿದೆ. ಈವರೆಗೆ ಜನತೆಯ ದಣಿವಾರಿಸುತ್ತಿದ್ದ ಕೆರೆ ಕೇವಲ ಹತ್ತು ದಿನದಲ್ಲಿ ನೀರಿಲ್ಲದೆ ಬಣಗುಟ್ಟಲಿದ್ದು ಜನತೆ ಕುಡಿಯುವ ನೀರಿಗಾಗಿ ಪರದಾಡುವ ಕಾಲ ಸಂಪೂರ್ಣವಾಗಿ ಸನ್ನಿಹಿತವಾಗಿದೆ.
ಕೆರೆಯಲ್ಲಿ ನೀರಿದ್ದಾಗ 8 ದಿನ ಇಲ್ಲವೇ 10 ದಿನಕ್ಕೊಮ್ಮೆ ಕೊಳಾಯಿ ಮೂಲಕ ನೀರು ನೀಡುತ್ತಿದ್ದ ನಗರಸಭೆಯು ಕಳೆದ ಎರಡು ತಿಂಗಳಿಂದ 13-15 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿತ್ತು. ಇನ್ನು ಮುಂದೆ 20 ದಿನಕ್ಕೊಮ್ಮೆ ನೀರು ನೀಡಲು ಕೂಡಾ ನಗರಸಭೆಯು ಸಂಕಟಪಡುವಂತಹ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ.
ದೊಡ್ಡಕೆರೆಯ ಕುಡಿಯುವ ನೀರು ಇನ್ನೇನು ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ ಎಂಬುದರ ಸಂಪೂರ್ಣ ಅರಿವಿದ್ದರೂ ಇಲ್ಲಿನ ನಗರಸಭೆಯು ಯಾವುದೇ ಮುಝಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಕೈಚೆಲ್ಲಿ ಕೂತಿರುವ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತಗೊಳ್ಳತೊಡಗಿದೆ.
ಶಿರಾ ನಗರದ ವ್ಯಾಪ್ತಿಯೂ ಸೇರಿದಂತೆ ಶಿರಸ್ತೆದಾರ್ ಕಟ್ಟೆ, ಕೋಟೆ ಪಂಪ್‍ಹೌಸ್‍ಗಳ ಎಲ್ಲಾ ಕೊಳವೆ ಬಾವಿಗಳನ್ನು ಸೇರಿಸಿಕೊಂಡರೆ ಒಟ್ಟು 165 ಕೊಳವೆ ಬಾವಿಗಳು ನಗರಸಭಾ ವ್ಯಾಪ್ತಿಯಲ್ಲಿ ಬರುತ್ತವೆ. ಈ ಪೈಕಿ 15 ಕೊಳವೆ ಬಾವಿಗಳು ದುಸ್ಥಿಯಾಗದೆ ಕೂತಿವೆ. ಕೇವಲ 165 ಕೊಳವೆ ಬಾವಿಗಳ ನೀರಿನಿಂದ ಇಡೀ ನಗರದ 31 ವಾರ್ಡುಗಳ ಜನತೆಗೆ ನೀರು ಪೂರೈಸುವುದಂತೂ ಕಷ್ಟ ಸಾದ್ಯದ ಮಾತು ಎಂಬುದು ಕಟು ಸತ್ಯವಾಗಿದ್ದರೂ ನಗರಸಭೆಯ ಅಧಿಕಾರಿಗಳು ಮಾತ್ರಾ ಕೈಚೆಲ್ಲಿ ಕೂತಿದ್ದಾರೆ.
ಮುಂದುವರೆಯುವುದು…