ಪ್ರವಾಹ ಇಳಿಮುಖ: ಮನೆಗೆ ತೆರಳುವವರಿಗೆ ಫುಡ್ ಕಿಟ್ ವಿತರಣೆ. 

ಹಾವೇರಿ
 
    ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಗಣನೀಯವಾಗಿ ಇಳುಮುಖವಾಗುತ್ತಿದ್ದು, ಜನರ ಬದುಕು ಸಹಜ ಸ್ಥಿತಿಯತ್ತ ಮುಖಮಾಡಿದೆ. ಕಳೆದ ಒಂದು ವಾರದಿಂದ ಕಾಡಿದ ಪ್ರಕೃತಿ ವಿಕೋಪದಿಂದ ಹಾಳಾಗಿದ್ದ ರಸ್ತೆ, ಸೇತುವೆ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕ ಮರು ಸ್ಥಾಪನೆ ಕೆಲಸ ಆರಂಭಗೊಂಡಿದೆ.
    ಸಂತ್ರಸ್ಥರಿಗಾಗಿ ಜಿಲ್ಲೆಯಲ್ಲಿ  130 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಅಂದಾಜು  ನಾಲ್ಕು ಸಾವಿರ ಕುಟುಂಬಗಳು 15,249 ಜನರು ಆಶ್ರಯ ಪಡೆದಿದ್ದಾರೆ. ಪರಿಸ್ಥಿತಿ ಸುಧಾರಿಸಿದರೆ ಹಂತ ಹಂತವಾಗಿ ಮನೆಗೆ ತೆರಳಲಿದ್ದಾರೆ. ಮರಳಿ ಮನೆಗೆ ಹೋದಾಗ  ಕುಟುಂಬದ ನಿರ್ವಹಣೆಗೆ ಅನುಕೂಲವಾಗಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಆಹಾರ ಕಿಟ್‍ಗಳನ್ನು ತಯಾರಿಸಿ ಸಂತ್ರಸ್ಥ ಕುಟುಂಬಗಳಿಗೆ ನೀಡಲು ಸಿದ್ಧತೆ ನಡೆಸಿದ್ದಾರೆ
    ಅಂದಾಜು 3,800 ಕುಟುಂಬಗಳನ್ನು ಲೆಕ್ಕಹಾಕಿರುವ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆಯ ಉಪನಿರ್ದೇಶಕರಾದ ವಿನೋದ ಹೆಗ್ಗಳಗಿ ಅವರು ಮುಂಜಾಗ್ರತಾ ಕ್ರಮವಾಗಿ ಸಂತ್ರಸ್ಥ ಕುಟುಂಬಗಳಿಗೆ ನೀಡಲು ಆಹಾರ ಕಿಟ್‍ಗಳ ತಯಾರಿಕೆಯಲ್ಲಿ ತೊಡಗಿದ್ದು, ಪ್ರತಿ ಕಿಟ್‍ನಲ್ಲಿ 10 ಕೆ.ಜಿ ಅಕ್ಕಿ, ಒಂದು ಬೆಳೆ, ಒಂದು ಕೆಜಿ ಸಕ್ಕರೆ, ಒಂದು ಕೆ.ಜಿ. ಉಪ್ಪು, ಒಂದು ಕೆ.ಜಿ.ಎಣ್ಣೆ ಪೊಟ್ಟಣದೊಂದಿಗೆ ಐದು ಲೀಟರ್ ಸೀಮೆ ಎಣ್ಣೆ ನೀಡಿ ಜಿಲ್ಲಾಡಳಿತದಿಂದ ತತಕ್ಷಣದ ಬದುಕನ್ನು ಕಟ್ಟಿಕೊಳ್ಳಲು ನೆರವಾಗಲು ಸಿದ್ಧತೆ ನಡೆಸಿದ್ದಾರೆ.
   ಈಗಾಗಲೇ ನೆರೆ ಹಾವಳಿಯಿಂದ ಕುಡಿಯುವ ನೀರಿನ ಸಂಪರ್ಕ ಹಾಳಾಗಿರುವ ಗ್ರಾಮಗಳಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕಲುಷಿತ ನೀರು ಕುಡಿದು ಸಾಂಕ್ರಾಮಿಕ ರೋಗಗಳು ಹರಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
   ಆರೋಗ್ಯ ಇಲಾಖೆಗೆ 20 ಲಕ್ಷ ರೂ.ಗಳನ್ನು ನೀಡಿ ತುರ್ತು ಔಷಧೀಗಳ ಖರೀದಿಗೆ ಸೂಚನೆ ನೀಡಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ತಪಾಸಣೆ, ಪರಿಹಾರ ಕೇಂದ್ರಗಳಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸಾ ಸೌಕರ್ಯವನ್ನು ಕಲ್ಪಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಂಪರ್ಕ ದುರಸ್ಥಿ:
  ರಸ್ತೆ ಸಂಪರ್ಕವನ್ನು ದುರಸ್ಥಿಗೊಳಿಸಿ ಜನ, ವಾಹನಗಳ ಸಂಚಾರಕ್ಕೆ ವ್ಯವಸ್ಥೆಮಾಡಿಕೊಡುವ ಕಾರ್ಯ ಭರದಿಂದ ನಡೆದಿದೆ. ಇಂದು ಲೋಕೋಪಯೋಗಿ ಇಲಾಖೆಯಿಂದ ಹಾನಗಲ್, ಸುರಳೇಶ್ವರ, ನೀರಲಗಿ, ಗುಯಿಲಗುಂದಿ, ಹಾವೇರಿ ನಗರ ವ್ಯಾಪ್ತಿಯ, ಬ್ಯಾಡಗಿ, ಹಾನಗಲ್ ತಾಲೂಕು ಕೆಲವರಕೊಪ್ಪದ ಬಳಿಯ ದಿಡಗೂರ ತಿಳವಳ್ಳಿ ರಸ್ತೆ,  ಯಕ್ಕುಂಬಿ-ಮೊಳಕಾಲ್ಮೂರು ರಸ್ತೆ  ಹಲವು ರಸ್ತೆಗಳ ದುರಸ್ಥಿ ಪೂರ್ಣಗೊಳಿಸಿದೆ.
   ಉಳಿದ ಕಾಮಗಾರಿಗಳು ನಡೆಯುತ್ತಿವೆ. ಇದೇ ಮಾದರಿ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ಸಂಪರ್ಕಗಳು ನಡೆಯುತ್ತಿವೆ. ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ರೂ.97.89 ಕೋಟಿ ವೆಚ್ಚದ ಮೂಲ ಸೌಕರ್ಯಗಳು ಹಾನಿಯಾಗಿರುವ ಕುರಿತಂತೆ ವರದಿ ಸಲ್ಲಿಸಿವೆ.
   ಜಿಲ್ಲೆಯಲ್ಲಿ 7384 ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 46 ಕೋಟಿ ರೂ. ಪರಿಹಾರ ಅಗತ್ಯವಾಗಿದೆ. 126 ರಾಸುಗಳ ಜೀವಹಾನಿಯಾಗಿದ್ದು 14.20 ಲಕ್ಷ ರೂ. ಪರಿಹಾರ ನೀಡಬೇಕಾಗಿದೆ. ಬೆಳೆಹಾನಿಯ ನಿಖರ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. 
  ಜಿಲ್ಲೆಯ  ಹಿರೇಕೆರೂರು ತಾಲೂಕಿನ ಮಾಸೂರ, ಶಿಗ್ಗಾಂವ ತಾಲೂಕು ಚಟಾಪುರ ಹಾಗೂ ಹಾವೇರಿ ತಾಲೂಕಿನ ವರದಾಹಳ್ಳಿ ತಲಾ ಒಂದರಂತೆ ಮೂರು ಗೋಶಾಲೆಗಳನ್ನು ಸ್ಥಾಪಿಸಲಾಗಿದೆ ಹಾಗೂ 72 ಜಾನುವಾರಿಗಳಿಗೆ ಆಶ್ರಯ ನೀಡಲಾಗಿದೆ. 
ಸಹಜ ಬದುಕಿಗೆ ಕೃಷಿಕರು:
   ವಾರದಿಂದ ಪ್ರವಾಹ, ಅತಿವೃಷ್ಠಿಯಿಂದ ಮನೆಸೇರಿದ್ದ ಜನತೆ ಕಳೆದ ಎರಡು ದಿನಗಳಿಂದ ಸಣ್ಣ ಬಿಸಿಲಿಗೆ ತೆರೆದುಕೊಂಡ ರೈತರು ಸಹಜ ಬದುಕಿಗೆ ಮರಳಿದ್ದಾರೆ. ಜಿಲ್ಲೆಯ ಅಲ್ಲಲ್ಲಿ ಬೆಳೆಗೆ ಗೊಬ್ಬರ ಹಾಕುವ ಹಾಗೂ ಇತರ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ಸಹಜವಾಗಿತ್ತು. ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ಮಾರ್ಗ ಮಧ್ಯದ ಜಮೀನೊಂದರಲ್ಲಿ ರೈತರು ಗೋವಿನಜೋಳಕ್ಕೆ ಗೊಬ್ಬರ ಹಾಕುತ್ತಿರುವುದು ಎಲ್ಲರ ಗಮನ ಸೆಳೆಯಿತು.
ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ:  
 
   ಆಗಸ್ಟ್ 13ರ ಮಂಗಳವಾರದಿಂದ ಶಾಲಾ-ಕಾಲೇಜುಗಳು ಎಂದಿನಂತೆ ನಡೆಯಲಿವೆ ರಜೆ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಅವರು ತಿಳಿಸಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link