ಬೆಂಗಳೂರು
ಕಾರು, ಮನೆ ಬೇಕಾದವರು ಮತ್ತು ಅರ್ಜೆಂಟ್ ಇರೋವರು ವಿರೋಧ ಪಕ್ಷದ ನಾಯಕರಾಗಲಿ. ನನಗೆ ಯಾವುದೇ ಅಧಿಕಾರವೂ ಬೇಡ. ನನಗೆ ಸ್ವಂತ ಮನೆ ಸಾಕು ಎಂದು ಹೇಳುವ ಮೂಲಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಲವು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸ್ಥಾನ ಸೇರಿದಂತೆ ಯಾವುದೇ ಅಧಿಕಾರ ನನಗೆ ಬೇಡ. ಸದ್ಯಕ್ಕೆ ನನ್ನನ್ನು ನನ್ನ ಪಾಡಿಗೆ ಫ್ರೀಯಾಗಿರಲು ಬಿಟ್ಟರೆ ಸಾಕು. ಬಹಳಷ್ಟು ಮಂದಿಗೆ ಅರ್ಜೆಂಟ್ ಇದೆ. ಏನೇನೋ ಬೇಕು ಎಂಬ ತುಡಿತ ಇದೆ. ಅಂಥವರು ಹೋಗಿ ಅವಕಾಶ ಗಿಟ್ಟಿಸಿಕೊಳ್ಳಲಿ ಎಂದರು.
ಕಾರು, ಮನೆ ಬೇಕಾದವರು ಪ್ರಯತ್ನ ಮಾಡಲಿ. ನನಗಂತೂ ಸ್ವಂತ ಮನೆ ಇದೆ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ಇಂದು ಹೈಕಮಾಂಡ್‍ನಿಂದ ವೀಕ್ಷಕರು ಬಂದು ಎಲ್ಲರ ಜೊತೆ ಸಮಾಲೋಚನೆ ಮಾಡಿ, ವಿರೋಧ ಪಕ್ಷದ ನಾಯಕನ ಆಯ್ಕೆ ವಿಷಯವಾಗಿ ಪಕ್ಷಕ್ಕೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಸಮ್ಮಿಶ್ರ ಸರ್ಕಾರ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರುಗಳು ಏನೇನೋ ಮಾತನಾಡಿದ್ದಾರಂತೆ. ನನಗೆ ಅದ್ಯಾವುದೂ ಗೊತ್ತಿಲ್ಲ. ಸದ್ಯಕ್ಕೆ ನಾನು ಪೇಪರ್ ಓದುವುದನ್ನೇ ಬಿಟ್ಟಿದ್ದೇನೆ.
ಕೆಲವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಹೇಳಿದರು. ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿಯವರ ಹೇಳಿಕೆಗಳಿಗೆ ಉತ್ತರ ನೀಡುವಷ್ಟು ಸಮಯ ನನ್ನ ಬಳಿಯಿಲ್ಲ ಎಂದು ಪ್ರತಿಕ್ರಿಯಿಸಿ, ಹದಿನಾಲ್ಕು ತಿಂಗಳ ಕಾಲ ಮುಖ್ಯಮಂತ್ರಿಯ ಕೈಕೆಳಗೆ ನಾನು ಸಚಿವನಾಗಿ ಇಲಾಖೆಯ ಜವಾಬ್ದಾರಿ ನಿಭಾಯಿಸಿದ್ದೇನೆ. ನಾನು ನಿರ್ವಹಿಸಿದ ಇಲಾಖೆ ವಿಷಯಗಳ ಕುರಿತಂತೆ ಯಾವುದೇ ಚರ್ಚೆಗಳು ಬಂದರೂ ಅದಕ್ಕೆ ಪ್ರತಿಕ್ರಿಯಿಸಲು ನಾನು ಬದ್ಧ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








