ಮ್ಯಾಟ್ರಿಮೋನಿಯಲ್ ಮೂಲಕ ವಂಚನೆ ಮಾಡುತ್ತಿದ್ದವನ ಬಂಧನ ..!

ಬೆಂಗಳೂರು

   ಮ್ಯಾಟ್ರುಮೊನಿಯಲ್ ಮೂಲಕ ವಿಧವೆಯರನ್ನು ಪರಿಚಯ ಮಾಡಿಕೊಂಡು ಇಲ್ಲಿಯವರೆಗೆ ೪ ಮದುವೆಯಾಗಿ ವಂಚಿಸಿದ್ದ ಖತರ್ನಾಕ್ ಕದೀಮನನ್ನು ಉತ್ತರ ವಿಭಾಗದ ಆರ್‌ಎಂಸಿಯಾರ್ಡ್ ಪೊಲೀಸರು ಬಂಧಿಸಿದ್ದಾರೆ.ಮೈಸೂರಿನ ಲಲಿತಾದ್ರಿಪುರದ ಎನ್.ಆರ್ ಗಣೇಶ್ (೪೫) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ವಿಕ್ರಂ, ಕಾರ್ತಿಕ್, ಹರೀಶ್ ಇನ್ನಿತರ ಹೆಸರುಗಳಲ್ಲಿ ಮ್ಯಾಟ್ರುಮೊನಿಯಲ್‌ನಲ್ಲಿ ವಿಧವೆಯರುಗಳನ್ನು ಪರಿಚಯ ಮಾಡಿಕೊಂಡು ಮೂವರನ್ನು ವಿವಾಹವಾಗಿ ವಂಚಿಸಿ ೪ನೇ ಮದುವೆಯಾದ ನಂತರ ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ.

    ಆರೋಪಿಯು ೧೦ನೇ ತರಗತಿವರೆಗೆ ಓದಿದ್ದು, ಮೊದಲಿಗೆ ರಾಜಾಜಿನಗರದ ಗಾರ್ಮೆಂಟ್ ಉದ್ಯೋಗಿ ಸವಿತಾ ಎಂಬುವರನ್ನು ವಿವಾಹವಾಗಿದ್ದು, ನಂತರ ಆಕೆಗೆ ಗೊತ್ತಾಗದಂತೆ ೭ ವರ್ಷಗಳ ಹಿಂದೆ ಮಡಿಕೇರಿ ಮೂಲದ ಗಾಯಿತ್ರಿ ಎಂಬುವರನ್ನು ವಿವಾಹವಾಗಿ ಮೈಸೂರಿನಲ್ಲಿ ಮನೆ ಮಾಡಿಕೊಟ್ಟಿದ್ದಾನೆ.

     ಇವರಿಬ್ಬರಿಗೂ ಗೊತ್ತಾಗದಂತೆ ಬ್ರಾಹ್ಮಿ ಮ್ಯಾಟ್ರುಮೊನಿಲ್‌ನಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ವಿಧವೆಯೊಬ್ಬರನ್ನು ಪರಿಚಯ ಮಾಡಿಕೊಂಡು ಕಳೆದ ವರ್ಷ ವಿವಾಹವಾಗಿ ಆಕೆಗೂ ವಿಚ್ಛೇಧನ ನೀಡಿದ್ದಾನೆ. ನಂತರ ೨೦೧೯ರಲ್ಲಿ ಬ್ರಾಹ್ಮಿ ಮ್ಯಾಟ್ರುಮೊನಿಲ್‌ನಿಂದ ಆಶಾ ಎಂಬುವರನ್ನು ವಿವಾಹವಾಗಿದ್ದ.

     ಒಬ್ಬರ ವಿಚಾರ ಮತ್ತೊಬ್ಬರಿಗೆ ಗೊತ್ತಾಗದ ರೀತಿಯಲ್ಲಿ ನಂಬಿಸಿ ೪ ಮದುವೆಯಾಗಿದ್ದು, ವಿಚ್ಛೇಧನ ಪಡೆದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ವಿಧವೆಯ ತಾಯಿ ಮಹಾಲಕ್ಷ್ಮಿ ಅವರು ನೀಡಿದ್ದ ದೂರನ್ನು ದಾಖಲಿಸಿಕೊಂಡ ಆರ್‌ಎಂಸಿಯಾರ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಿಚಾರಣೆ ವೇಳೆ ಆರೋಪಿಯು ವಧು-ವರರ ಸಮಾಲೋಚನ ಸಾಮಾಜಿಕ ತಾಣಗಳನ್ನು ಬಳಸಿಕೊಂಡು ವಿಧವೆ ಮತ್ತು ಅಸಹಾಯಕ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಬ್ಯಾಂಕ್‌ನಲ್ಲಿ ಸಾಲ ಕೊಡಿಸುವುದಾಗಿ, ನಿವೇಶನ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ಗಳನ್ನು ಕೊಡಿಸುವುದಾಗಿಯಲ್ಲದೆ, ಮಾರಾಟ ಮಾಡಿಸುವುದಾಗಿಯೂ ವಂಚನೆ ನಡೆಸಿರುವುದು ಬಾಯ್ಬಿಟ್ಟಿದ್ದಾನೆ .ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿರುವ ಇನ್ಸ್‌ಪೆಕ್ಟರ್ ಮಹೇಂದ್ರಕುಮಾರ್ ಅವರು ಆರೋಪಿಯಿಂದ ವಂಚನಗೊಳಗಾಗಿರುವವರು ಆರ್‌ಎಂಸಿಯಾರ್ಡ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link