ನೆರೆ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗದ ರಾಜ್ಯ ಸರ್ಕಾರ
ತುಮಕೂರು
ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದಿಂದ ಜೀವ ಹಾನಿ, ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ, ರಾಜ್ಯವಾಗಲೀ, ಕೇಂದ್ರ ಸರ್ಕಾರವಾಗಲೀ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಿಲ್ಲ. ಹಸಿರು ಶಾಲು ಹೊದ್ದು ತಾವು ರೈತ ನಾಯಕ ಎಂದು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ನೆರವು ಕೋರುವ ಧೈರ್ಯವಿಲ್ಲ, ಕೇಂದ್ರದಲ್ಲಿ ಪ್ರಯೋಜನವಿಲ್ಲದ ಬೂಟಾಟಿಕೆ ಸರ್ಕಾರವಿದೆ ಎಂದು ಕೆಪಿಸಿಸಿ ವಕ್ತಾರ ಮುರಳಿಧರ ಹಾಲಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರನಟರು, ಕ್ರೀಡಾಪಟುಗಳ ಹುಟ್ಟು ಹಬ್ಬಕ್ಕೆ, ಅವರ ಮನೆಯಲ್ಲಿ ಮಗುಹುಟ್ಟಿದರೆ ಪ್ರಧಾನಿ ಕಚೇರಿಯಿಂದ ಟ್ವಿಟ್ ಮಾಡಿ ಅಭಿನಂದನೆ ಸಲ್ಲಿಸಲಾಗುತ್ತದೆ, ಆದರೆ ರಾಜ್ಯದಲ್ಲಿ ನೆರೆ ಪ್ರವಾಹದಲ್ಲಿ 87 ಜನ ಮೃತಪಟ್ಟು, ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡವರ ಬಗ್ಗೆ ಒಂದು ಸಂತಾಪವಿಲ್ಲ ಎಂದು ಆಪಾದಿಸಿದರು.
ಪ್ರವಾಹ ನಷ್ಟದಿಂದ 38 ಸಾವಿರ ಕೋಟಿ ರೂ. ನಷ್ಟವಾಗಿದೆ, ಈ ಪೈಕಿ ಸರ್ಕಾರ ಕೇವಲ 413 ಕೋಟಿ ರೂ. ಬಿಡುಗಡೆ ಮಾಡಿದೆ.
22 ಜಿಲ್ಲೆಗಳ 103 ತಾಲ್ಲೂಕುಗಳಲ್ಲಿ 2.47 ಲಕ್ಷ ಮನೆಗಳು ಹಾನಿಯಾಗಿವೆ, 10 ಸಾವಿರ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ, 7 ಲಕ್ಷ ಜನ ನೆಲೆ ಕಳೆದುಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳಾದ ಶಾಲೆ, ರಸ್ತೆ, ಸೇತುವೆ, ವಿದ್ಯುತ್ ಕಂಬ, ಲೈನು, ರೈಲ್ವೇ ಹಳಿ, ಸರ್ಕಾರಿ ಕಟ್ಟಡಗಳು, ಕೆರೆಕಟ್ಟೆ ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದ್ದು ಎಲ್ಲೆಡೆ ಪುನರ್ವಸತಿ ಕಾರ್ಯ ಕೈಗೊಳ್ಳಬೇಕಾಗಿದೆ. ಆದರೆ ಎರಡೂ ಸರ್ಕಾರಗಳು ನಿರ್ಲಕ್ಷ ಮಾಡಿವೆ ಎಂದು ಮುರಳಿಧರ ಹಾಲಪ್ಪ ಹೇಳಿದರು.
ರಾಜ್ಯದಲ್ಲಿ ಇಷ್ಟು ಭೀಕರ ಹಾನಿ ಸಂಭವಿಸಿದ್ದರೂ ಪ್ರಧಾನಿ ಮೋದಿ ಪರಿಸ್ಥಿತಿ ವೀಕ್ಷಣೆಗೆ ಏಕೆ ಬರಲಿಲ್ಲ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ತಂಡದ ಪ್ರವಾಹ ವೀಕ್ಷಣೆಯ ಫಲ ಏನು, ಈ ಭೀಕರ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಏಕೆ ಘೋಷಿಸಿಲ್ಲ, ತಕ್ಷಣ ಪರಿಹಾರ ಬಿಡುಗಡೆಗಾಗಿ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಏಕೆ ಒತ್ತಡ ಹೇರಿಲ್ಲ. ನಷ್ಟ 35,160 ಕೋಟಿ ರೂ. ಎಂದು ಅಂದಾಜಿಸಿ ರಾಜ್ಯವು 1500 ಕೋಟಿ ರೂ. ಬಿಡುಗಡೆ ಮಾಡಿರುವುದು ಸಂತ್ರಸ್ತರಿಗೆ ಮಾಡಿರುವ ಅನ್ಯಾಯವಲ್ಲವೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಹರಿಜನ ಕೇರಿ ಸ್ವಚ್ಚತೆ
ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್‍ನಿಂದ ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅಕ್ಟೋಬರ್ 2ರಂದು ಪಕ್ಷದ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಿ ನಂತರ ನಗರದ ಹರಿಜನ ಕಾಲೋನಿಯೊಮದರಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಸೇರಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಹೇಳಿದರು.
ಎಲ್ಲಾ ಬ್ಲಾಕ್‍ಗಳ ವ್ಯಾಪ್ತಿಯಲ್ಲಿ ಗಾಂಧಿಜಯಂತಿ ಆಚರಣೆ ಮಾಡುವಂತೆ ಸೂಚಿಸಲಾಗಿದೆ ಎಂದ ಅವರು, ಶೀಘ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ತಾಲ್ಲೂಕುವಾರು ಪ್ರವಾಸ ಮಾಡಿ, ಪಕ್ಷಸಂಘಟನೆ ಹಾಗೂ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಪ್ರಚಾರ ಆರಂಭಿಸಲಾಗುವುದು ಎಂದರು.ಮುಖಂಡರಾದ ಚಂದ್ರಶೇಖರಗೌಡ, ವೈ. ಎನ್. ನಾಗರಾಜ್, ರೇವಣ್ಣಸಿದ್ದಯ್ಯ, ಟಿ. ಎಸ್ ತರುಣೇಶ್, ಆಟೋರಾಜು, ಮುಸ್ತಾಕ್ ಅಹಮದ್ ಮೊದಲಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








