ನಾಯಿ ಕಡಿತ ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ 

ಚಿತ್ರದುರ್ಗ
       ರೇಬೀಸ್ ಅಥವಾ ಹುಚ್ಚು ನಾಯಿ ರೋಗಕ್ಕೆ ಒಳಗಾಗುವ ವ್ಯಕ್ತಿಗೆ ಬಹುತೇಕ ಸಾವು ಸಂಭವಿಸುತ್ತದೆ, ಹೀಗಾಗಿ ನಾಯಿ ಸೇರಿದಂತೆ ಯಾವುದೇ ಪ್ರಾಣಿಯ ಕಡಿತವನ್ನು ನಿರ್ಲಕ್ಷಿಸದೆ, ಸೂಕ್ತ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹಿರಿಯ ತಜ್ಞ ಡಾ. ನಿಡಘಟ್ಟ ಗಂಗಾಧರ್ ಅವರು ಹೇಳಿದರು.
      ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ ಪ್ರಾಣಿ ಜನ್ಯ ರೋಗ- ರೇಬೀಸ್ (ಹುಚ್ಚು ನಾಯಿ ರೋಗ) ಕುರಿತು ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.
     ರೇಬೀಸ್ ಒಂದು ಭಯಾನಕ ರೋಗವಾಗಿದ್ದು,  ಖ್ಯಾತ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರು ರೇಬೀಸ್ ನಿರೋಧಕ ಲಸಿಕೆಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು, ಅವರನ್ನು ನಾವು ಸ್ಮರಿಸಬೇಕಿದೆ.  ರೇಬೀಸ್ ರೋಗದಿಂದ ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು 70 ಸಾವಿರ ಜನ ಸಾವನ್ನಪ್ಪುತ್ತಿದ್ದು, ವಿಪರ್ಯಾಸದ ಸಂಗತಿ ಎಂದರೆ, ಜಗತ್ತಿನಲ್ಲಿಯೇ ಭಾರತದಲ್ಲಿ ರೇಬೀಸ್ ರೋಗದ ಪ್ರಮಾಣ ಹೆಚ್ಚಾಗಿದೆ.  ಅದರಲ್ಲೂ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅತಿ ಹೆಚ್ಚು ರೇಬೀಸ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದರು
 
     ಫ್ರಾನ್ಸ್, ಅರ್ಜೆಂಟೈನಾ ನಂತಹ ದೇಶಗಳಲ್ಲಿ ರೇಬೀಸ್ ರೋಗ ಪ್ರಮಾಣ ಶೂನ್ಯ.  ಜಪಾನ್ ದೇಶದಲ್ಲಿ ಮಕ್ಕಳ ಸಂಖ್ಯೆಗಿಂತಲೂ ನಾಯಿಗಳ ಸಂಖ್ಯೆಯೇ ಹೆಚ್ಚಾಗಿದ್ದರೂ, ಅಲ್ಲಿ ರೇಬೀಸ್ ಪ್ರಕರಣಗಳು ಇಲ್ಲವೇ ಇಲ್ಲ.  ಇದಕ್ಕೆ ಕಾರಣ ಮುಂದುವರೆದ ದೇಶಗಳಲ್ಲಿ ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಇದೆ.  ಭಾರತದಲ್ಲಿ ಜನಸಂಖ್ಯೆ ಹೆಚ್ಚಳ, ಬೀದಿ ನಾಯಿಗಳ ವಿಪರೀತ ಹಾವಳಿ, ಮಾಂಸದ ಅಂಗಡಿಗಳ ಅಸಮರ್ಪಕ ನಿರ್ವಹಣೆ ಹಾಗೂ ರೇಬೀಸ್ ರೋಗದ ಬಗ್ಗೆ ಜನರಲ್ಲಿ ಅರಿವು ಇಲ್ಲದಿರುವುದರಿಂದ, ನಮ್ಮಲ್ಲಿ ರೋಗ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.  
    ಬೆಂಗಳೂರು ಒಂದರಲ್ಲಿಯೇ ನಿತ್ಯ ಕನಿಷ್ಟ 100 ನಾಯಿ ಕಡಿತ ಸಂಭವಿಸುತ್ತಿದೆ.  ಐಟಿ, ಬಿಟಿ ನಲ್ಲಿ ಬೆಂಗಳೂರು ಮುಂದುವರೆದಿದರೂ, ನಾಯಿಯಿಂದ ಮಕ್ಕಳು, ವೃದ್ಧರ ಮೇಲೆ ನಾಯಿ ದಾಳಿ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗದಿರುವುದು ವಿಷಾದಕರ ಸಂಗತಿಯಾಗಿದೆ.  ನಾಯಿ ಕಡಿತಕ್ಕೆ ಒಳಗಾದವರು ಬಹುತೇಕ ನಿರ್ಲಕ್ಷ್ಯ ತೋರುವುದು ಹೆಚ್ಚಾಗಿರುವುದರಿಂದ, ಮುಂದೆ ಅದು ರೇಬೀಸ್ ರೋಗಕ್ಕೆ ಕಾರಣವಾಗಲಿದೆ ಎಂದು ಹೇಳಿದರು
   
     ರೇಬೀಸ್ ವೈರಸ್ ನಾಯಿ ಕಡಿತದ ಮೂಲಕ ಮನುಷ್ಯನ ದೇಹ ಪ್ರವೇಶಿಸಿದರೂ, ವರ್ಷಗಟ್ಟಲೆ ದೇಹದೊಳಗೆ ಬದುಕಿರುತ್ತದೆ.  ಹೀಗಾಗಿ ಯಾವ ಸಂದರ್ಭದಲ್ಲಿ ಅದು ತನ್ನ ಲಕ್ಷಣಗಳನ್ನು ತೋರಲಾರಂಭಿಸುತ್ತದೆ ಎಂದು ನಿಖರವಾಗಿ ಹೇಳಲು ಕಷ್ಟಸಾಧ್ಯ ಎಂದರು
    18 ರಿಂದ 25 ವರ್ಷಗಳ ಬಳಿಕವೂ ರೇಬೀಸ್ ರೋಗ ತನ್ನ ಪ್ರಭಾವ ಬೀರಿರುವ ಅನೇಕ ನಿದರ್ಶನಗಳು ನಮ್ಮ ದೇಶದಲ್ಲಿವೆ.  ಹೀಗಾಗಿ ಯಾವುದೇ ನಾಯಿ ಕಡಿತವನ್ನು ಯಾರೂ ನಿರ್ಲಕ್ಷಿಸದೆ, ನಾಯಿ ಕಡಿದ ತಕ್ಷಣ, ಕನಿಷ್ಟ 10 ನಿಮಿಷಗಳ ಕಾಲ ನೀರು ಹಾಗೂ ಸೋಪಿನಿಂದ ನಿರಂತರವಾಗಿ ಆ ಭಾಗವನ್ನು ತೊಳೆಯಬೇಕು.  ಬಳಿಕ ಆಸ್ಪತ್ರೆಗೆ ತೆರಳಿ ರೇಬೀಸ್ ನಿರೋಧಕ ಲಸಿಕೆಯನ್ನು ಹಾಕಿಸಿಕೊಳ್ಳಲೇಬೇಕು.  ಸಾಕು ನಾಯಿಗಳಿಗೂ ಸಹ ತಪ್ಪದೆ ಕಾಲಕಾಲಕ್ಕೆ ಲಸಿಕೆಯನ್ನು ಹಾಕಿಸಬೇಕು ಎಂದು ಡಾ. ನಿಡಘಟ್ಟ ಗಂಗಾಧರ್ ಹೇಳಿದರು.
 
     ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ನಾಯಿಗಳನ್ನು ಅತಿ ಹೆಚ್ಚು ಪ್ರೀತಿಯಿಂದ ಸಾಕುವವರು ಇದ್ದಾರೆ.  ಆದರೆ ಇವುಗಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸಲು ನಿರ್ಲಕ್ಷ್ಯ ತೋರುತ್ತಾರೆ.  ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಚಿಕಿತ್ಸೆ ಕೊಡಿಸುವುದನ್ನು ಮರೆಯಬಾರದು.  ನಾವು ಸಾಕುವ ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನುಡಿದರು
 
    ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಪಟ್ಟ ನಗರಸಭೆ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.  ಅಲ್ಲದೆ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಲು ಮುಂದಾಗಬೇಕು.  ಜಿಲ್ಲೆಯಲ್ಲಿ ನಾಯಿಗಳನ್ನು ಸಾಕಿದವರು, ತಪ್ಪದೆ ಕಾಲಕಾಲಕ್ಕೆ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಬೇಕು ಎಂದರು.
 
     ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರೇಣುಪ್ರಸಾದ್ ಮಾತನಾಡಿ, ರೇಬೀಸ್ ರೋಗ ಬಂದರೆ ಸಾವು ಖಚಿತ, ರೇಬೀಸ್ ರೋಗ ನಿರೋಧಕ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಇಡಲು ಕ್ರಮ ಕೈಗೊಳ್ಳಲಾಗಿದೆ ಎಂದರು
 
     ಲಸಿಕೆಗೆ ಬಿಪಿಎಲ್ ನವರಿಗೆ ಉಚಿತವಾಗಿದ್ದರೆ, ಎಪಿಎಲ್ ನವರಿಗೆ 100 ರೂಲ ಶುಲ್ಕ ನಿಗದಿಪಡಿಸಲಾಗಿದೆ.  ತುರ್ತು ಅಗತ್ಯವಿದ್ದಲ್ಲಿ ಸ್ಥಳೀಯ ಆರೋಗ್ಯ ರಕ್ಷಾ ಸಮಿತಿಯಿಂದಲೇ ಖರೀದಿಗೆ ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿದೆ.  ಜಿಲ್ಲೆಯಲ್ಲಿ ಈ ವರ್ಷ 4998 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದರೆ, ಇದರಲ್ಲಿ ಚಿತ್ರದುರ್ಗ-1300 ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ 1400 ಅತಿ ಹೆಚ್ಚು ಪ್ರಕರಣ ವರದಿಯಾಗಿವೆ ಎಂದರು.
      ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಕೃಷ್ಣಪ್ಪ, ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಹನುಮಂತರಾಯರೆಡ್ಡಿ ಉಪಸ್ಥಿತರಿದ್ದರು.  ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು, ಪಶು ವೈದ್ಯಾಧಿಕಾರಿಗಳು, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದ ಅಂಗವಾಗಿ ಶ್ವಾನ ಮಾಲೀಕರು ಕರೆತಂದ ಸಾಕು ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆಯನ್ನು ಹಾಕಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link