ಅ.1 ರಿಂದ `ಜಲಶಕ್ತಿ ಅಭಿಯಾನ`

ತುಮಕೂರು

ವಿಶೇಷ ವರದಿ:ಆರ್.ಎಸ್.ಅಯ್ಯರ್

    ಮಳೆ ನೀರು ಕೊಯ್ಲು, ಸಂಸ್ಕರಿಸಿದ ಕೊಳಚೆ ನೀರಿನ ಮರುಬಳಕೆ, ನೀರಿನ ಮೂಲಗಳ ಜೀರ್ಣೋದ್ಧಾರ/ಪುನಶ್ಚೇತನ, ಹಸಿರೀಕರಣ/ಗಿಡನೆಡುವುದು -ಈ ನಾಲ್ಕು ಮಹತ್ವದ ಅಂಶಗಳನ್ನು ಕೇಂದ್ರೀಕರಿಸಿಕೊಂಡು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಮಂತ್ರಾಲಯವು ದೇಶಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ “ಜಲಶಕ್ತಿ ಅಭಿಯಾನ” ಹಮ್ಮಿಕೊಳ್ಳಲು ಮಾರ್ಗಸೂಚಿ ಹೊರಡಿಸಿದ್ದು, ಅದರನ್ವಯ  ರಾಜ್ಯ ಸರ್ಕಾರವೂ ರಾಜ್ಯಾದ್ಯಂತ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ  ಅಕ್ಟೋಬರ್ 1 ರಿಂದ ನವೆಂಬರ್ 30 ರವರೆಗೆ ಪರಿಣಾಮಕಾರಿಯಾಗಿ “ಜಲಶಕ್ತಿ ಅಭಿಯಾನ” ಕೈಗೊಳ್ಳುವಂತೆ ಸೂಚನೆ ನೀಡಿದೆ.
ಏಕೆ ಈ ಅಭಿಯಾನ?
    ಪ್ರಸ್ತುತ ಭಾರತವು ಪ್ರಪಂಚದ ಶೇ.17 ರಷ್ಟು ಜನಸಂಖ್ಯೆ ಹೊಂದಿದೆ. ಪ್ರಪಂಚದ ಶೇ.4 ರಷ್ಟು ಸಿಹಿನೀರಿನ ಮೂಲ ಹೊಂದಿದೆ. ಇವುಗಳ ನಡುವಿನ ವ್ಯತ್ಯಾಸದ ನಿರ್ವಹಣೆ ಸವಾಲಾಗಿದೆ.
 
    ಭಾರತವನ್ನು “ವಾಟರ್ ಸ್ಟ್ರೆಸ್ಡ್ ನೇಷನ್” ಎಂದು ಗುರುತಿಸಲಾಗಿದ್ದು, ದೇಶದಲ್ಲಿ ಶೇ. 10 ರಷ್ಟು ಮಾತ್ರ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಅಸಮಾನ ನೀರಿನ ಬಳಕೆ, ಅಪರಿಮಿತ ಅಂತರ್ಜಲ ಬಳಕೆ, ಕಳೆದ ಕೆಲ ವರ್ಷಗಳಿಂದ ಮಾನ್ಸೂನ್ ಮಳೆ ಕೊರತೆ -ಇವುಗಳಿಂದ ನೀರಿನ ಬೇಡಿಕೆ ಮತ್ತು ಬಳಕೆಯಲ್ಲಿನ ವ್ಯತ್ಯಾಸವು ನಿರ್ಣಾಯಕ ಹಂತವನ್ನು ತಲುಪಿದೆ. ನೀತಿ ಆಯೋಗದ ವರದಿಯನ್ವಯ  ದೇಶದ ಶೇ. 50 ರಷ್ಟು ಜನರು ನೀರಿನ ಕೊರತೆ ಅನು`Àವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೀರಿನ ಕೊರತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ನೀರಿನ ಸಂರಕ್ಷಣೆ, ಪುನಃಶ್ಚೇತನ, ಮರುಪೂರಣ ಹಾಗೂ ಮರುಬಳಕೆಯು ಅತಿ ಮುಖ್ಯವಾಗಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರವು “ಜಲಶಕ್ತಿ ಅಭಿಯಾನ”ವನ್ನು ಸಂಯೋಜಿಸಿದೆ.
ಮಾರ್ಗಸೂಚಿ ಮುಖ್ಯಾಂಶಗಳು
    “ಜಲಶಕ್ತಿ ಅಭಿಯಾನ”ಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿದೆ. ಅವುಗಳ ಮುಖ್ಯಾಂಶಗಳು ಈ ಕೆಳಕಂಡಂತಿವೆ:-
ಮಳೆ ನೀರು ಕೊಯ್ಲು :- ಪ್ರತಿ ನಗರ ಸ್ಥಳೀಯ ಸಂಸ್ಥೆಯು “ಮಳೆ ನೀರು ಕೊಯ್ಲು ಕೋಶ” ತೆರೆಯಬೇಕು. ಈ ಕೋಶವು ಮಳೆ ನೀರು ಕೊಯ್ಲು ಕಾರ್ಯದ ಪರಿಣಾಮಕಾರಿ ಅನುಷ್ಥಾನಕ್ಕೆ, ಅಂತರ್ಜಲ ಬಳಕೆ ಮತ್ತು ಮರುಪೂರಣ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು. ಎಲ್ಲ ಸರ್ಕಾರಿ ಕಟ್ಟಡಗಳು, ಆಡಳಿತ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ಅಪಾರ್ಟ್‍ಮೆಂಟ್‍ಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಅನುಷ್ಠಾನವಾಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ನಿರ್ಮಾಣಗೊಂಡು ಕೆಟ್ಟುಹೋಗಿದ್ದರೆ ಸರಿಪಡಿಸಲು ಆಂದೋಲನ ರೂಪಿಸಬೇಕು. ಸಾರ್ವಜನಿಕ ಪ್ರದೇಶಗಳಾದ ರಸ್ತೆ ಬದಿ, ಉದ್ಯಾನಗಳಲ್ಲಿ ಕಾಂಕ್ರಿಟ್‍ನಿಂದ ನಿರ್ಮಾಣ ಮಾಡಲಾದ ಪಾದಚಾರಿ ಮಾರ್ಗಗಳಲ್ಲಿರುವ ಮರಗಿಡಗಳ ಬುಡದ ಸುತ್ತ ಕಾಂಕ್ರೀಟನ್ನು ತೆರವುಗೊಳಿಸಿ, ಕಾಂಕ್ರೀಟ್ ಬ್ಲಾಕ್‍ಗಳ ಬದಲು ರಂದ್ರಿತ ಪೇವರ್ ಬ್ಲಾಕ್ ಗಳನ್ನು ಬಳಸಬೇಕು. ಈಗಾಗಲೇ ಇರುವ ನಿಯಮದ ಪ್ರಕಾರ 100 ಚ.ಮೀ. ಮೇಲ್ಪಟ್ಟ ಎಲ್ಲ ಕಟ್ಟಡ ನಿರ್ಮಾಣಕ್ಕೆ ಮಳೆ ನೀರು ಕೊಯ್ಲು ಕಡ್ಡಾಯವಾಗಿದ್ದು, ಅದನ್ನು ಅನುಷ್ಠಾನಗೊಳಿಸಬೇಕು. ಇನ್ನುಮುಂದೆ ಎಲ್ಲ ಹೊಸ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಇರುವಂತೆ ಮಾಡಬೇಕು.
ಕೊಳಚೆ ನೀರು ಮರುಬಳಕೆ:-
       ರಾಷ್ಟ್ರೀಯ ನಗರ ನೈರ್ಮಲ್ಯ ನೀತಿಯು ಕನಿಷ್ಟ ಶೇ.20 ರಷ್ಟು ಸಂಸ್ಕರಿಸಿದ ಕೊಳಚೆ ನೀರಿನ ಪುನರ್ ಬಳಕೆಯನ್ನು ಅಧ್ಯದೇಶಿಸಿದೆ. ರಾಜ್ಯ ಸರ್ಕಾರ ಸಹ 2017 ರಲ್ಲಿ ತ್ಯಾಜ್ಯ ನೀರಿನ ಮರು ಬಳಕೆ ಕಾರ್ಯನೀತಿಗೆ ಅನುಮೋದನೆ ನೀಡಿದೆ. ಇದರಂತೆ 2020 ರೊಳಗೆ ರಾಜ್ಯದ 10 ಪ್ರಮುಖ ನಗರಗಳು ಹಾಗೂ 2030 ರ ಹೊತ್ತಿಗೆ ಎಲ್ಲ ಪ್ರಮುಖ ನಗರ/ಪಟ್ಟಣಗಳು ಈ ನೀತಿಯನ್ನು ಜಾರಿಗೊಳಿಸಬೇಕು. ಸಂಸ್ಕರಿಸಿದ ಕೊಳಚೆ ನೀರಿನ ಮರುಬಳಕೆಗೆ ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳು ಕೊಳಚೆ ನೀರಿನ ಸಂಸ್ಕರಣೆ ಘಟಕ ಹೊಂದಿದ್ದಲ್ಲಿ, ಸಂಸ್ಕರಿತ ನೀರನ್ನು ಕೃಷಿ, ತೋಟಗಾರಿಕೆ, ಅಗ್ನಿಶಾಮಕ, ದೊಡ್ಡಪ್ರಮಾಣದ ನಿರ್ಮಾಣ ಕಾಮಗಾರಿಗಳು (ಸರ್ಕಾರಿ/ಖಾಸಗಿ), ಕೈಗಾರಿಕೆಗಳ ಬಳಕೆಗೆ ಉತ್ತೇಜಿಸಬೇಕು. 
ಜಲ ಮೂಲಗಳ ಪುನಶ್ಚೇತನ:-
       ಕೆರೆ, ಕೊಳ, ಪುಷ್ಕರಣಿ, ಬಾವಿಗಳನ್ನು ಪುನಶ್ಚೇತನಗೊಳಿಸಬೇಕು. ಈ ಅಭಿಯಾನದ ಅವಧಿಯಲ್ಲಿ ಪ್ರತಿ ನಗರ ಸ್ಥಳೀಯ ಸಂಸ್ಥೆಯು ಕನಿಷ್ಟ ಒಂದು ಜಲ ಮೂಲವನ್ನಾದರೂ ಪುನಶ್ಚೇತನಗೊಳಿಸಬೇಕು. ನೀರಿನ ಮೂಲಗಳು ಅತಿಕ್ರಮಣವಾಗದಂತೆ ತಡೆಯಲು ಬೇಲಿ ನಿರ್ಮಿಸಬೇಕು. ಪ್ರತಿ ನೀರಿನ ಮೂಲಗಳನ್ನು ಜಿಯೋ ಟ್ಯಾಗ್ ಆಧಾರಿತ ಫೋಟೋಗಳ ದಾಖಲೀಕರಣ ಮಾಡಬೇಕು. ನೀರಿನ ಮೂಲಗಳ ಜಲಾನಯನ ಪ್ರದೇಶ, ಮಳೆ ನೀರು ಕಾಲುವೆಗಳನ್ನು ಉತ್ತಮಪಡಿಸಬೇಕು.
ಹಸಿರೀಕರಣ:
 
        ಈಗಾಗಲೇ ಸರ್ಕಾರ ದಿನಾಂಕ 19-07-2019 ರಂದು ಹೊಡಿಸಿರುವ ಆದೇಶಕ್ಕೆ ಅನುಸಾರವಾಗಿ ನಗರ ಹಸಿರೀಕರಣಕ್ಕೆ ಕ್ರಮ ಕೈಗೊಳ್ಳಬೇಕು.ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹ`Áಗಿತ್ವದಲ್ಲಿ, ಜನಪ್ರತಿನಿಧಿಗಳ ಸಹಕಾರದಲ್ಲಿ ಈ ಆಂದೋಲನವನ್ನು ನಡೆಸಬೇಕೆಂದು ಸೂಚಿಸಲಾಗಿದೆಯಲ್ಲದೆ, ಆಂದೋಲನಕ್ಕೆ ಅಗತ್ಯವಿರುವ ಆರ್ಥಿಕ ಮೂಲಗಳ ಬಗ್ಗೆಯೂ ಸ್ಪಷ್ಟಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap