ಬೆಂಗಳೂರು:
ಸ್ಥಳೀಯರಲ್ಲಿ ಭಯ ಹುಟ್ಟಿಸಿ ಕೊಲೆಯತ್ನ, ಸರ ಅಪಹರಣ, ಬೆದರಿಕೆ, ಸುಲಿಗೆ, ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ರೌಡಿಗಳಾದ ವಿಜಯಾ ಅಲಿಯಾಸ್ ದಡಿಯಾ ವಿಜಿ ಹಾಗೂ ಹನುಮಂತ ಅಲಿಯಾಸ್ ಮೋರಿ ಕಾಲಿಗೆ ಭಾನುವಾರ ಮುಂಜಾನೆ ಗುಂಡು ಹೊಡೆದು, ಜಾಲಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ನಂದಿನಿ ಲೇಔಟ್‌ನ ವಿಜಯಾ ಅಲಿಯಾಸ್ ದಡಿಯಾ ವಿಜಿ (೨೫),ಹನುಮಂತ ಅಲಿಯಾಸ್ ಮೋರಿ (೨೪) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ .ಇವರಿಬ್ಬರನ್ನು ಬೆನ್ನಟ್ಟಿ ಹೋಗಿ ಹಲ್ಲೆಗೊಳಗಾಗಿರುವ ನಂದಿನಿ ಲೇಔಟ್‌ನ ಮುಖ್ಯಪೇದೆ ಶ್ರೀನಿವಾಸ್ ಮೂರ್ತಿ ಹಾಗೂ ನರೇಶ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಅವರಿಬ್ಬರೂ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ.
ಇತ್ತೀಚೆಗಷ್ಟೇ ಲಕ್ಷ್ಮಿದೇವಿನಗರದಲ್ಲಿ ನಾಗರತ್ನ ಎಂಬುವವರ ಮಾಂಗಲ್ಯಸರ ಕಸಿದು ಪರಾರಿಯಾಗಿದ್ದ ಇಬ್ಬರೂ ರೌಡಿಗಳ ಕೃತ್ಯವು ಸ್ಥಳದಲ್ಲಿ ಹಾಕಲಾಗಿದ್ದ ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿತ್ತು ಕೃತ್ಯದಿಂದ ಇವರಿಬ್ಬರು ಉತ್ತರ ವಿಭಾಗದ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದರು ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ
ನಂದಿನಿ ಲೇಔಟ್ ರೌಡಿ ಪಟ್ಟಿಯಲ್ಲಿದ್ದ ವಿಜಯಾ ಅಲಿಯಾಸ್ ದಡಿಯಾ ವಿಜಿ, ರಾಜಗೋಪಾಲನಗರ, ಮಹಾಲಕ್ಷ್ಮಿ ಲೇಔಟ್, ಆರ್.ಎಂ.ಸಿ. ಯಾರ್ಡ್, ಬಸವೇಶ್ವರನಗರ, ಪೀಣ್ಯ, ಇನ್ನಿತರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಕೊಲೆಯತ್ನ, ಸುಲಿಗೆ, ಬೆದರಿಕೆ, ಅಪಹರಣ ಸೇರಿದಂತೆ, ೧೫ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಕೆಲವು ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದರೂ, ಮತ್ತೆ ಹಳೆಚಾಳಿ ಮುಂದುವರೆಸುತ್ತ, ಸಹಚರರ ಗುಂಪು ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತ, ಸ್ಥಳೀಯರಲ್ಲಿ ಭಯಭೀತಿ ಉಂಟುಮಾಡಿ, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ.
ಮತ್ತಿ ಸಹಚರರು
ಮತ್ತೊಬ್ಬ ರೌಡಿ ಹನುಮಂತ ಅಲಿಯಾಸ್ ಮೋರಿ, ಕೂಡ ಸುಲಿಗೆ, ಕಳವು, ದರೋಡೆ ಯತ್ನ, ಸರಕಳವು, ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ಸೇರಿದ್ದ. ಹನುಮಂತ ಹಾಗೂ ವಿಜಿ ಇಬ್ಬರೂ ಸೇರಿ, ಇತ್ತೀಚೆಗೆ ಲಕ್ಷ್ಮಿದೇವಿನಗರದಲ್ಲಿ ನಾಗರತ್ನ ಎಂಬುವವರ ಸರಕಳವು ಮಾಡಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಚಿಸಲಾಗಿದ್ದ ಜಾಲಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಯಶ್‌ವಂತ್, ಸಬ್‌ಇನ್ಸ್‌ಪೆಕ್ಟರ್ ಲೇಪಾಕ್ಷಿ, ಮತ್ತವರ ತಂಡ ಕಾರ್ಯಾಚರಣೆ ಕೈಗೊಂಡಾಗ ಸರಕಳವು ಮಾಡಿದ ಹನುಮಂತ ಹಾಗೂ ವಿಜಿ ಭಾಗಿಯಾಗಿರುವುದು ಪತ್ತೆಯಾಯಿತು. ಇವರಿಬ್ಬರೂ ಜೈಲಿನಲ್ಲಿರುವ ರೌಡಿ ಅಶೋಕ್ ಅಲಿಯಾಸ್ ಸಂಪತ್ ಮತ್ತಿ ಸಹಚರರಾಗಿರುವುದು ಪತ್ತೆಯಾಯಿತು.
ಕಾರ್ಯಾಚರಣೆ ಕೈಗೊಂಡ ಇನ್ಸ್‌ಪೆಕ್ಟರ್ ಯಶ್‌ವಂತ್ ಹಾಗೂ ಸಬ್‌ಇನ್ಸ್‌ಪೆಕ್ಟರ್ ಲೇಪಾಕ್ಷಿ ಅವರು, ರೌಡಿಗಳಾದ ಹನುಮಂತ ಹಾಗೂ ವಿಜಿ, ಕೂಲಿನಗರದ ಬಳಿ ಅಡಗಿರುವುದು ಪತ್ತೆಯಾಯಿತು. ಕೂಡಲೇ ಅಲ್ಲಿಗೆ ಬೆಳಿಗ್ಗೆ ೬.೩೦ರ ವೇಳೆ ಧಾವಿಸಿ ಪೊಲೀಸ್ ವಾಹನವನ್ನು ಕಂಡ ತಕ್ಷಣ ಓಡುತ್ತಿದ್ದ ವಿಜಿ ಹಾಗೂ ಹನುಮಂತನನ್ನು ಮುಖ್ಯಪೇದೆಗಳಾದ ಶ್ರೀನಿವಾಸ್ ಮೂರ್ತಿ ಹಾಗೂ ನರೇಶ್ ಅವರು ಬೆನ್ನಟ್ಟಿ ಹಿಡಿಯಲು ಹೋಗಿದ್ದಾರೆ.
ವರ್ಷದಿಂದ ಹಾವಳಿ
ಆದರೆ ಅವರಿಬ್ಬರೂ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದಾಗ, ಯಶ್‌ವಂತ್ ಹಾಗೂ ಲೇಪಾಕ್ಷಿ ಅವರು ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಅವುಗಳು ಇಬ್ಬರ ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.ಇಬ್ಬರನ್ನೂ ಬಂಧಿಸಿ, ಆಸ್ಪತ್ರೆಗೆ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ನಾಲ್ಕೈದು ವರ್ಷಗಳಿಂದ ಹಾವಳಿ ನಡೆಸುತ್ತಿದ್ದ ಈ ಇಬ್ಬರೂ ರೌಡಿಗಳಿಗೆ ತಕ್ಕಪಾಠ ಕಲಿಸಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮಹಿಳೆಯೊಬ್ಬರ ಸರಕಳವು ಕೃತ್ಯದಲ್ಲಿ ಕುಖ್ಯಾತ ರೌಡಿ ಅಶೋಕ್ ಅಲಿಯಾಸ್ ಸಂಪತ್ ಮತ್ತಿಯ ಸಹಚರರಾದ್ದ ರೌಡಿಗಳಾದ ವಿಜಯಾ ಅಲಿಯಾಸ್ ದಡಿಯಾ ವಿಜಿ ಹಾಗೂ ಹನುಮಂತ ಅಲಿಯಾಸ್ ಮೋರಿ ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಜಾಲಹಳ್ಳಿ, ಮತ್ತಿತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳನ್ನು ನಡೆಸುತ್ತ, ಸ್ಥಳೀಯರಲ್ಲಿ ಭಯಭೀತಿ ಉಂಟುಮಾಡುತ್ತಿದ್ದ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದರು.
ಇವರಿಬ್ಬರ ಪತ್ತೆಗಾಗಿ ರಚಿಸಲಾಗಿದ್ದ ಜಾಲಹಳ್ಳಿ ಪೊಲೀಸರ ತಂಡ ಭಾನುವಾರ ಮುಂಜಾನೆ ಕಾರ್ಯಾಚರಣೆ ನಡೆಸಿ ಕೂಲಿನಗರದ ಬಳಿ ಅಡಗಿರುವ ಖಚಿತ ಮಾಹಿತಿ ಆಧರಿಸಿ ಗುಂಡು ಹೊಡೆದು, ಬಂಧಿಸಲಾಗಿದೆ. ಕಾರ್ಯಾಚರಣೆ ಕೈಗೊಂಡ ಜಾಲಹಳ್ಳಿ ಪೊಲೀಸರನ್ನು ಅಭಿನಂದಿಸಿ ಸೂಕ್ತ ಬಹುಮಾನಕ್ಕೆ ಶಿಫಾರಸ್ಸು ಮಾಡಲಾಗುವುದು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








