ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ: ಆರೋಪಿ ಬಂಧನ

ಬೆಂಗಳೂರು

    ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ ಶಾಸಕ ಭೈರತಿ ಸುರೇಶ್ ಅವರನ್ನು ಇರಿದು ಹತ್ಯೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ವರದಿಯಾಗಿದೆ.

    ಬೆಂಗಳೂರು ಉತ್ತರ ಭಾಗದ ಕೊತ್ತನೂರಿನ ಅವರ ಸ್ವಂತ ಊರು ಭೈರತಿಯಲ್ಲಿ ಸುರೇಶ್ ಅವರನ್ನು ಗ್ರಾಮದ ಶಿವ ಎಂಬಾತ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಆದರೆ, ಭೈರತಿ ಸುರೇಶ್ ಬೆಂಬಲಿಗರು ಈ ಪ್ರಯತ್ನವನ್ನು ವಿಫಲಗೊಳಿಸಿ ಆತನನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

     ಜನರ ಗುಂಪಿನೊಂದಿಗೆ ಭೈರತಿ ಸುರೇಶ್ ಮಾತನಾಡುವಾಗ ಶಿವು ಎಂಬಾತ ಏಕಾಏಕಿ ಚಾಕು ಹಿಡಿದು ಮುಂದೆ ಬಂದ ಎನ್ನಲಾಗಿದೆ. ಆದರೆ, ಈತನ ಈ ಕೃತ್ಯಕ್ಕೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಕೊತ್ತನೂರು ಪೊಲೀಸರು ಆರೋಪಿ ಶಿವುನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

    ಆರೋಪಿ ಶಿವಕುಮಾರ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ಈತನ ತಂದೆ ನಾಟಕ ಮೇಷ್ಟ್ರು ಎನ್ನಲಾಗಿದೆ. ಭೈರತಿ ಸುರೇಶ್ ಅವರಿಗೆ ಈತನ ಪರಿಚಯ ಕೂಡ ಇದೆ. ಕಳೆದ 2 – 3 ದಿನಗಳಿಂದಲೂ ಈತ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ. ಭೈರತಿ ಸುರೇಶ್ ಗಮನಕ್ಕೆ ಇದು ಬಂದಿತ್ತು. ಈ ಹಿನ್ನೆಲೆಯಲ್ಲಿ ಭೈರತಿ ಸುರೇಶ್ ಬೆಂಬಲಿಗರು ಆತನ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ.

    ಭೈರತಿ ಸುರೇಶ್ ಅವರು ಆರೋಪಿ ಶಿವಕುಮಾರ್ ಅವರಿಗೆ ಮನೆಯೊಂದನ್ನು ಕಟ್ಟಿಕೊಡಲು ನೆರವಾಗಿದ್ದರು. ಆದರೆ, ಆ ಮನೆ ಅಪೂರ್ಣಗೊಂಡಿತ್ತು. ಶಿವು ಈ ವಿಚಾರವನ್ನು ಮುಂದಿಟ್ಟುಕೊಂಡು ಭೈರತಿ ಸುರೇಶ್ ಮೇಲೆ ಕೋಪಗೊಂಡು ಈ ಕೃತ್ಯ ಎಸಗಲು ಮುಂದಾಗಿದ್ದ ಎನ್ನಲಾಗಿದೆ. ಆರೋಪಿ ಶಿವಕುಮಾರ್ ನನ್ನು ಬಂಧಿಸಿರುವ ಕೊತ್ತನೂರು ಪೊಲೀಸರು, ಕೊಲೆಯತ್ನ ಪ್ರಕರಣ ದಾಖಲು ಮಾಡಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಭೈರತಿ ಸುರೇಶ್, ಶಿವು ನನಗೆ ಬಹಳ ದಿನದಿಂದ ಪರಿಚಯ ಇರುವ ಹುಡುಗ. ಅವರ ತಂದೆ ಕಾಲದಿಂದಲೂ ನನಗೆ ಆತ ಗೊತ್ತು.

    ಅವರ ತಂದೆ ನಾಟಕದ ಮೇಷ್ಟ್ರು. ಮನೆ ಕಟ್ಟಿಕೊಳ್ಳಲು ಅವರ ತಾಯಿಗೆ 2 ಲಕ್ಷ ಹಣ ನೀಡಿದ್ದೆ. ಆದರೆ, ಯಾವ ಕಾರಣಕ್ಕೆ ಶಿವು ಈ ರೀತಿ ಮಾಡಿದ ಎಂದು ಗೊತ್ತಿಲ್ಲ. ಕಾರು ಡಿಕ್ಕಿ ಹೊಡೆದು ಏಕಾಏಕಿ ಚಾಕು ಹಿಡಿದು ಬಂದ. ನಮ್ಮ ಗನ್ ಮ್ಯಾನ್ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನಿಗೆ ಯಾರಾದರೂ ಹೇಳಿಕೊಟ್ಟು ಈ ಕೆಲಸ ಮಾಡಿಸಿರಬಹುದು. ಈ ಬಗ್ಗೆ ತಮ್ಮಲ್ಲಿ ಮಾಹಿತಿ ಇಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link