
ಬೆಂಗಳೂರು: ವಿಧಾನಸಭೆಯಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮೂವರು ಶಾಸಕರು ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ್ದಾರೆ ಎನ್ನಲಾದ ಬೆಳವಣಿಗೆ ರಾಷ್ಟç ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಬಿಜೆಪಿ ವರಿಷ್ಠರು ತೀವ್ರ ಮುಜುಗರಕ್ಕೊಳಗಾಗಿದ್ದಾರೆ. ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ಕಾರ್ಯವೈಖರಿಯ ವಿರುದ್ಧ ಪಕ್ಷದೊಳಗೇ ಅಸಮಾಧಾನ ಭುಗಿಲೆದ್ದಿದೆ. ನಾಯಕತ್ವದ ಬದಲಾವಣೆ ಕುರಿತು ಬಿಜೆಪಿ ಒಳ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ವಿಧಾನಪರಿಷತ್ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ಬಿಜೆಪಿ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಪಕ್ಷದ ಕೆಲ ಶಾಸಕರು ವಿಪ್ ಉಲ್ಲಂಘಿಸಿ ಅಡ್ಡಮತದಾನ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಬೆಳವಣಿಗೆ ಪಕ್ಷದ ಸಂಘಟನಾ ಸಾಮರ್ಥ್ಯ ಮತ್ತು ನಾಯಕತ್ವದ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ವಿಜಯೇಂದ್ರ ಮತ್ತು ಯಕ ಆರ್. ಅಶೋಕ್ ಅವರ ನಾಯಕತ್ವ ಬದಲಾವಣೆ ಮಾಡುವ ಕುರಿತು ಪಕ್ಷದೊಳಗೇ ಚರ್ಚೆಗಳು ನಡೆಯುತ್ತಿವೆ.
ಚುನಾವಣೆಯಲ್ಲಿ ಪಕ್ಷದ ಶಾಸಕರು ವಿಪ್ ಪಾಲಿಸುವುದು ಅತ್ಯಂತ ಮಹತ್ವದ್ದಾಗಿದೆ. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮತಗಳು ದೊರೆಯದ ಹಿನ್ನೆಲೆಯಲ್ಲಿ ಕೆಲ ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಈ ಆರೋಪಗಳು ನಿಜವೇ ಎಂಬುದನ್ನು ಪಕ್ಷದ ಆಂತರಿಕ ಪರಿಶೀಲನೆ ಮತ್ತು ಅಧಿಕೃತ ಕ್ರಮಗಳು ಸ್ಪಷ್ಟಪಡಿಸಬೇಕಿದೆ. ಯಾವುದೇ ರಾಜಕೀಯ ಪಕ್ಷದಲ್ಲಿ ಶಾಸಕರನ್ನು ಒಗ್ಗೂಡಿಸಿ, ಪಕ್ಷದ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವುದು ನಾಯಕತ್ವದ ಪ್ರಮುಖ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಅವರು ಶಾಸಕರ ನಡುವೆ ಸಮನ್ವಯ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಅಭಿಪ್ರಾಯ ಪಕ್ಷದ ಕೆಲವು ವಲಯಗಳಲ್ಲಿ ವ್ಯಕ್ತವಾಗುತ್ತಿದೆ.
ಬಿಜೆಪಿಯಲ್ಲಿ ಹಲವು ವರ್ಷಗಳಿಂದ ವಿವಿಧ ಬಣಗಳ ಅಸ್ತಿತ್ವದ ಬಗ್ಗೆ ಚರ್ಚೆಗಳಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗರು, ಇತರ ಹಿರಿಯ ನಾಯಕರ ಬೆಂಬಲಿಗರು ಸೇರಿದಂತೆ ವಿವಿಧ ಗುಂಪುಗಳ ನಡುವಿನ ಸಮನ್ವಯವನ್ನು ಬಲಪಡಿಸುವುದು ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ. ವಿಧಾನಪರಿಷತ್ ಚುನಾವಣೆ ಬಳಿಕ ಕೇಳಿಬಂದಿರುವ ಅಸಮಾಧಾನದ ಧ್ವನಿಗಳು ಈ ಆಂತರಿಕ ರಾಜಕೀಯದ ಪ್ರತಿಫಲನವೇ ಎಂಬ ಪ್ರಶ್ನೆಯೂ ಮೂಡಿದೆ.
ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಮುಂದುವರಿದರೆ ಅದರ ರಾಜಕೀಯ ಲಾಭವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಡೆದುಕೊಳ್ಳುವ ಸಾಧ್ಯತೆ ಇದೆ. ವಿಧಾನಮಂಡಲ ಚುನಾವಣೆಗಳಲ್ಲಿ ಪಕ್ಷದ ಏಕತೆ ಅತ್ಯಂತ ಪ್ರಮುಖವಾಗಿರುವುದರಿಂದ, ನಾಯಕತ್ವ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಅಡ್ಡಮತದಾನದ ಆರೋಪಗಳ ಕುರಿತು ಸತ್ಯಾಂಶ ತಿಳಿದುಕೊಳ್ಳುವುದು, ಅಗತ್ಯವಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ. ವಿಧಾನಪರಿಷತ್ ಚುನಾವಣೆಯು ಕೇವಲ ಒಂದು ಸ್ಥಾನಕ್ಕಾಗಿ ನಡೆದ ಚುನಾವಣೆಯಷ್ಟೇ ಅಲ್ಲ, ಅದು ಪಕ್ಷದ ಆಂತರಿಕ ಸಂಘಟನೆ, ನಾಯಕತ್ವದ ಸಾಮರ್ಥ್ಯ ಮತ್ತು ಶಾಸಕರ ನಡುವಿನ ಸಮನ್ವಯದ ಪರೀಕ್ಷೆಯಾಗಿ ಪರಿಣಮಿಸಿದೆ. ಆರೋಪಗಳು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತನಿಖೆ ಮತ್ತು ಪಕ್ಷದ ಅಧಿಕೃತ ನಿಲುವಿನಿಂದ ಸ್ಪಷ್ಟವಾಗಬೇಕಿದೆ. ಆದರೆ ಈ ಬೆಳವಣಿಗೆ ರಾಜ್ಯ ಬಿಜೆಪಿಯು ಸಂಘಟನಾ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವನ್ನು ಒತ್ತಿ ಹೇಳುತ್ತಿದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕತ್ವ ಆಂತರಿಕ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಶಾಸಕರು ಮತ್ತು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾಗಿದೆ. ಅದುವೇ ಪಕ್ಷದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ. ಪಕ್ಷದ ಕೆಲ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ನಾಯಕತ್ವದ ವೈಫಲ್ಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣಾ ಫಲಿತಾಂಶದ ಬೆನ್ನಲ್ಲೇ, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಕೆಲವು ನಾಯಕರು ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು ಎಂಬ ಚರ್ಚೆ ನಡೆಸಿದ್ದಾರೆ. 2023ರ ವಿಧಾನಸಭಾ ಚುನಾವಣೆ ನಂತರ ಪ್ರತಿಪಕ್ಷದ ನಾಯಕರ ಆಯ್ಕೆಯ ಸಂದರ್ಭದಲ್ಲೇ ಪಕ್ಷದೊಳಗೆ ಭಿನ್ನಮತ ಉಂಟಾಗಿತ್ತು. ಅಂದಿನಿAದಲೂ ಪಕ್ಷದ ಆಂತರಿಕ ನಿರ್ಧಾರಗಳ ಕುರಿತು ಕೆಲ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ.
ಯಾವ ಶಾಸಕರ ಮೇಲೆ ಕ್ರಮ?
• ಉದಯ ಗರುಡಚಾರ್( ಚಿಕ್ಕಪೇಟೆ)
• ಬೈರತಿ ಬಸವರಾಜ್ ( ಕೆ.ಆರ್ ಪುರಂ)
• ದಿನಕರ್ ಶೆಟ್ಟಿ( ಕುಮಟ)
• ಹೆಚ್.ಕೆ ಸುರೇಶ್ (ಬೇಲೂರು)
• ಚಂದ್ರು ಲಮಾಣಿ (ಶಿರಹಟ್ಟಿ)








