ಹಂತಹಂತವಾಗಿ ಜಿಲ್ಲೆಯ ಕೆರೆಗಳಿಗೆ ವೇಳಾಪಟ್ಟಿ ಯಂತೆ ನೀರು: ಮಾಧುಸ್ವಾಮಿ

ತುಮಕೂರು
   ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಿದ್ದು, ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೆರೆಗಳು ಹಾಗೂ ಇನ್ನಿತರೆ ಕೆರೆಗಳಿಗೆ ವೇಳಾಪಟ್ಟಿ ನಿಗಧಿ ಮಾಡಿಕೊಂಡು ನೀರು ಪೂರೈಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.
    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಚಿವರು, ಮೊದಲ ಹಂತದಲ್ಲಿ ಕುಡಿಯುವ ನೀರಿಗಾಗಿ ಕುಡಿಯುವ ನೀರಿನ ಕೆರೆಗಳಿಗೆ ಪೂರೈಸಲಾಗಿದೆ. ಎರಡನೆ ಹಂತದಲ್ಲಿ ವೇಳಾಪಟ್ಟಿಯಂತೆ ಶಿರಾ ಹಾಗೂ ಗುಬ್ಬಿ ತಾಲೂಕು ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ ಹಂತಹಂತವಾಗಿ ಇತರೆ ತಾಲೂಕಿನ ಕೆರೆಗಳಿಗೂ ಸಮಯ ನಿಗಧಿ ಮಾಡಿ ನೀರು ಪೂರೈಕೆ ಮಾಡಲಾಗುವುದು. ಈ ಬಾರಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಿದ್ದು ನೀರಿನ ಬಗ್ಗೆ ಆತಂಕ ಬೇಡ ಎಂದರು.
    ಪಿಂಚಣಿಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಒಳಗೊಂಡಂತೆ ಉಪ ವಿಭಾಗ ಅಧಿಕಾರಿಗಳು ಪಿಂಚಣಿ ಅದಾಲತ್‍ಗಳನ್ನು ನಡೆಸಿ ಪಿಂಚಣಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
    ಕುಣಿಗಲ್ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯನ್ನು ರದ್ದುಪಡಿಸಲಾಗಿದ್ದು, ಯೋಜನೆಗೆ ಮೀಸಲಿಟ್ಟಿದ್ದ 600 ಕೋಟಿ ರೂ. ಹಣವನ್ನು ಹೇಮಾವತಿ ಮುಖ್ಯ ನಾಲೆಯನ್ನು ಆಧುನೀಕರಣಗೊಳಿಸಲು ವರ್ಗಾಯಿಸಲಾಗಿದೆ. ಯೋಜನೆಯನ್ನು ರೂಪಿಸುವಾಗ ಜಿಲ್ಲೆಯ ಆಗಿನ ಇಬ್ಬರು ಸಚಿವರು ಹಾಗೂ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಈ ಯೋಜನೆಗೆ ಯಾವುದೇ ಟೆಂಡರನ್ನೂ ಆಹ್ವಾನಿಸಿರಲಿಲ್ಲ ಎಂದು ಕುಣಿಗಲ್ ಶಾಸಕ ಡಾ|| ಹೆಚ್ ಡಿ ರಂಗನಾಥ್ ಪ್ರಶ್ನೆಗೆ ಸಚಿವರು ಉತ್ತರಿಸಿದರು.
    ಅರಣ್ಯ ಇಲಾಖೆಯು ತಮ್ಮ ವ್ಯಾಪ್ತಿಯಲ್ಲಿನ ಅರಣ್ಯದಲ್ಲಿ ರಸ್ತೆ,  ಚರಂಡಿ ನಿರ್ಮಾಣ ಹಾಗೂ ದುರಸ್ತಿಗೆ ಅನುಮತಿ ನೀಡಲು ಏಕೆ ತಕರಾರು ಮಾಡುತ್ತೀರಿ? ಜನರಿಗೆ ಅನುಕೂಲವಾಗುವ ರಸ್ತೆಗಳನ್ನು ನಿರ್ಮಾಣ ಮಾಡಲು ತೊಂದರೆ ನೀಡಬಾರದು. ಒಂದು ವೇಳೆ ರಸ್ತೆಗಳನ್ನು ನಿರ್ಮಿಸಿದರೆ ನಿಮ್ಮ ಇಲಾಖೆ ವತಿಯಿಂದ ನಿರ್ಮಾಣ ಮಾಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.
     ಜಿಲ್ಲೆಯಲ್ಲಿ ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ 25 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿದ್ದು, 265 ಕೋಟಿ ರೂ. ಜಿಲ್ಲಾ ಪಂಚಾಯಿತಿಗೆ ಬರಬೇಕಾಗಿದೆ. ಸ್ವಚ್ಛ ಭಾರತ್ ಅಭಿಯಾನದಡಿ ಅಂಗನವಾಡಿ ಶೌಚಾಲಯ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಯನ್ನು ಬರುವ ಮೂರು ವಾರದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್, ಜಿಲ್ಲೆಯಲ್ಲಿರುವ 24 ಸಮುದಾಯ ಶೌಚಾಲಯಗಳು ನಿರ್ಮಾಣದ  ಪ್ರಸ್ತಾವನೆಯನ್ನು ಬರುವ ಒಂದು ವಾರದೊಳಗೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಂತೆ ತಾಲೂಕು ಪಂಚಾಯಿತಿ ಇಓಗಳಿಗೆ ಸೂಚಿಸಿದರು.
      ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುರುವೇಕೆರೆ ಮತ್ತು ತುಮಕೂರು ತಾಲೂಕುಗಳಲ್ಲಿ ಪೂರ್ವ ಮುಂಗಾರಿನಲ್ಲಿ ಮಳೆ ಬಾರದೆ ಉದ್ದು, ಅಲಸಂದೆ, ಎಳ್ಳು ಬೆಳೆಗಳ ಬಿತ್ತನೆ ಕುಂಠಿತವಾಗಿದ್ದು, ಬಿತ್ತನೆಯಾದ ಪೂರ್ವ ಮುಂಗಾರು ಬೆಳೆಗಳು ಕಟಾವಾಗಿದ್ದು, ಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗಿದೆ. ಪಾಗವಡ ಮತ್ತು ಮಧುಗಿರಿ ತಾಲೂಕುಗಳಲ್ಲಿ ಶೇ.50ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ಅಲ್ಲದೇ ಮುಂಗಾರು ಹಂಗಾಮಿಗೆ ಒಟ್ಟು 417780 ಹೆಕ್ಟೇರ್ ಪ್ರದೇಶದ ಗುರಿಗೆ, ಇಲ್ಲಿಯವರೆಗೂ 261577 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಉಮೇಶ್ ಸಭೆಗೆ ಮಾಹಿತಿ ನೀಡಿದರು.
      ಋತುಮಾನಕ್ಕನುಗುಣವಾಗಿ ಬೆಳೆಯುವ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸಲಾಗುತ್ತಿದೆ. ಅಲ್ಲದೇ ಬಿತ್ತಿಪತ್ರ, ಬಿತ್ತನೆ ಬೀಜದೊದಿಗೆ ಕರಪತ್ರ ವಿತರಿಸಿ ರೈತರಿಗೆ ಸಂಪೂರ್ಣ ಮಾಹಿತಿ ಒದಗಿಸಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಿದರು.  ರೈತರಿಗೆ ಬೆಳೆಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಖುದ್ದು ಅವರ ಮೊಬೈಲ್ ನಂಬರ್‍ಗೆ ಯೋಜನೆಯ ಮಾಹಿತಿ ಕಳಹಿಸಬೇಕು.
      ಕೃಷಿ ಇಲಾಖೆಯಡಿ ನೀಡುತ್ತಿರುವ ಬೀಜ ವಿತರಣೆಯು ರೈತರಿಗೆ ತಲುಪುವ ಬಗ್ಗೆ ಖುದ್ದು ಪರಿಶೀಲಿಸಬೇಕು ಅಲ್ಲದೇ ಉತ್ತಮ ಗುಣಮಟ್ಟ ಬೀಜ ವಿತರಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಾರ್ಶಿ ಡಾ|| ಶಾಲಿನಿ ರಜನೀಶ್ ಸೂಚಿಸಿದರು.ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 2 ಹೆಕ್ಟೇರಿಗಿಂತ ಕಡಿಮೆ ಭೂ ಒಡೆತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 6 ಸಾವಿರ ಹಣವನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 310699 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿದ್ದು, 299373 ರೈತ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಯೋಜನೆಯ ವಾರ್ಷಿಕ ಗುರಿ 505910 ಇದ್ದು, ಸಮಸ್ಯೆಯಿದ್ದರೆ ಅದನ್ನು ಬಗೆಹರಿಸಿಕೊಂಡು ಅಕ್ಟೊಬರ್ ಮಾಹೆಯೊಳಗೆ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಒದಗಿಸಬೇಕೆಂದು ಸಚಿವರು ಸೂಚಿಸಿದರು. 
       ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಮಾತನಾಡಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಯಂತ್ರೋಪಕರಣ ಖರೀದಿಸಲು ಸಹಾಯಧನ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದ್ದು,  ತಾಂತ್ರಿಕ  ಕಾರಣದಿಂದ ರೈತರಿಗೆ ಸಹಾಯ ಸೌಲಭ್ಯ ಒದಗಿಸಲು ತಡವಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
       ಪಶುಪಾಲನಾ ಇಲಾಖೆಯಡಿ ಈಗಾಗಲೇ 16ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಆರಂಭವಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಬರುವ ರೋಗದ ಬಗ್ಗೆ ಹಾಗೂ ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು  ನೀಡಲಾಗುತ್ತಿದೆ ಎಂದು ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್ ಸಭೆಗೆ ಮಾಹಿತಿ ನೀಡಿದರು.
      ಶಾಸಕ ಡಾ|| ರಂಗನಾಥ್ ಮಾತನಾಡಿ ಕುಣಿಗಲ್ ತಾಲೂಕಿನ 2 ಹಳ್ಳಿಗಳಲ್ಲಿ ಸುಮಾರು 60 ಹಸುಗಳು ವಿರಳ ಖಾಯಿಲೆಯಿಂದ ಮರಣ ಹೊಂದಿದ್ದು, ಮರಣ ಹೊಂದಿದ ಹಸುಗಳ ವಿಮೆ ರೈತರಿಗೆ ಇನ್ನೂ ಬಂದಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ರೋಗದಿಂದ ಮರಣ ಹೊಂದಿರುವ ಜಾನುವಾರಗಳ ವಿಮೆ ಹಣವನ್ನು ಕೂಡಲೇ ಜಮಾ ಮಾಡುವಂತೆ ತಿಳಿಸಿದರಲ್ಲದೇ, ಇನ್ನೂ ಮುಂದೆ ರೋಗದಿಂದ ಬಳಲುವ ಜಾನುವಾರುಗಳಿಗೆ ಖುದ್ದು ಮನೆಗೆ ಭೇಟಿ ನೀಡಿ ಲಸಿಕೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೇವು ಬ್ಯಾಂಕ್‍ಗಳಲ್ಲಿ ಮೇವು ಸರಬರಾಜು ಮಾಡಲು ಆಯಾ ತಾಲೂಕಿನಲ್ಲಿ ಟೆಂಡರ್ ಕರೆದು ಮೇವು ಸರಬರಾಜು ಮಾಡಲಾಗುತ್ತಿದೆ. ಜಾನುವಾರು ಸಂಖ್ಯೆಗಳಿಗನುಣವಾಗಿ ಮೇವು ವಿತರಣಾ ಕಾರ್ಡ್‍ಗಳನ್ನು ವಿತರಿಸಿ ಪ್ರತಿ ಜಾನುವಾರಿಗೆ ಪ್ರತಿ ದಿನಕ್ಕೆ ಕೆ.ಜಿ.ಗೆ 2 ರೂ.ಗಳಂತೆ ಮೇವನ್ನು ವಿತರಿಸಲಾಗುತ್ತಿದೆ ಎಂದರು.
       ಜಿಲ್ಲೆಯಲ್ಲಿ ಕಳೆದ ವರ್ಷ 96, ಈ ಬಾರಿ 540 ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಸಚಿವರು ಪ್ರಶ್ನಿಸಿದರು.  ಇದಕ್ಕೆ ಉತ್ತರಿಸಿದ ಡಿಡಿಪಿಐ ಕಾಮಾಕ್ಷಮ್ಮ ಅವರು  ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಆಂದೋಲನವನ್ನು ಪ್ರತಿ ತಾಲೂಕಿನಲ್ಲಿ ನಡೆಸಲಾಗುತ್ತಿದ್ದು, ಮಕ್ಕಳ ಪೋಷಕರ ಜೊತೆ ಚರ್ಚಿಸಿ ಮಕ್ಕಳನ್ನು ಶಾಲೆಗೆ ಸೇರಿಸಲು ಕ್ರಮಕೈಗೊಳ್ಳಲಾಗಿದೆ. ಕೂಡಲೇ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಮಕ್ಕಳಿಗೆ ಉತ್ತಮ ಗುಣಮಟ್ಟವಿರುವ ಶೂ ಮತ್ತು ಸಾಕ್ಸ್‍ಗಳನ್ನು ವಿತರಿಸಬೇಕು ಎಂದು ಸಚಿವರು ಸೂಚಿಸಿದರು. 
      ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಮೊದಲ ಸ್ಥಾನವನ್ನು ಕಾಯ್ದುಕೊಳ್ಳಬೇಕು. ಅದಕ್ಕಾಗಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ ಉತ್ತಮ ಅಂಕಗಳಿಸುವಂತೆ ಪ್ರಯತ್ನಿಸಬೇಕು. ಅಲ್ಲದೇ ಮೂಲಭೂತ ಸೌಕರ್ಯವುಳ್ಳ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಅಲ್ಲದೇ ದುಸ್ಥಿತಿಯಲ್ಲಿರುವ ಶೌಚಾಲಯಗಳನ್ನು ದುರಸ್ಥಿಗೊಳಿಸಬೇಕು ಎಂದು ಶಾಸಕ ವೈ.ಎ ನಾರಾಯಣಸ್ವಾಮಿ ಅವರು ಸಭೆಯಲ್ಲಿ ತಿಳಿಸಿದರು.
     ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಸತ್ಯನಾರಾಯಣ, ನಾಗೇಶ್, ಜಯರಾಮ್, ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.   
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link