ಹುಳಿಯಾರು:
ಹುಳಿಯಾರು ಪಟ್ಟಣ ಪಂಚಾಯ್ತಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆರಿಸಲು ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇಲ್ಲಿನ ಪಪಂ ಕಾಂಗ್ರೆಸ್ ಸದಸ್ಯ ನಾಪತ್ತೆಯಾಗಿದ್ದು, ಆಪರೇಷನ್ ಕಮಲದ ಶಂಕೆ ವ್ಯಕ್ತವಾಗಿದೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಪರಿಣಾಮ ಹುಳಿಯಾರು ಪಪಂ ಅಧ್ಯಕ್ಷರ ಚುನಾವಣೆ ದಿನಕ್ಕೊಂದು ತಿರುವು ಪಡೆಯುವ ಮೂಲಕ ಕುತೂಹಲ ಸೃಷ್ಠಿಸುತ್ತಿದೆ. ಅಲ್ಲದೆ ದಿನಕ್ಕೊಂದು ಊಹಾಪೋಹಗಳು ಹರಿದಾಡುತ್ತಿದ್ದು, ಯಾವ ಪಕ್ಷ ಮೇಲುಗೈ ಸಾಧಿಸಲಿದೆ ಎಂಬುದು ಊಹಿಸಲು ಅಸಾಧ್ಯ ಎನ್ನುವಂತಾಗಿದೆ.
ಬಿಜೆಪಿಗೆ ನೆಮ್ಮದಿ, ನಿದ್ದೆಗೆಟ್ಟ ಕಾಂಗ್ರೆಸ್ :
16 ಸಂಖ್ಯಾ ಬಲವುಳ್ಳ ಹುಳಿಯಾರು ಪಪಂ ಗಾದಿ ಹಿಡಿಯಲು ಶಾಸಕರು, ಸಂಸದರು, ಪರಿಷತ್ ಸದಸ್ಯರ ಮತಗಳು ಸೇರಿ 10 ಮತಗಳನ್ನು ಪಡೆಯಬೇಕಿದೆ. 6 ಸದಸ್ಯ ಬಲವುಳ್ಳ ಬಿಜೆಪಿಗೆ ಈ ಮೊದಲು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಗಾದಿ ಹಿಡಿಯುವ ವಿಶ್ವಾಸ ಮನೆ ಮಾಡಿತ್ತು. ನಂತರದ ಅಚ್ಚರಿ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ್ದ ಪಕ್ಷೇತರ ಅಭ್ಯರ್ಥಿ ಜಹೀರ್‍ಸಾಬ್ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ಸೂಚಿಸಿ ಅಧಿಕಾರದ ಕನಸು ಕಂಡಿದ್ದ ಬಿಜೆಪಿಗೆ ನಿರಾಸೆ ಮೂಡಿಸಿದರು. ಆದರೆ ಏ.29 ರ ಗುರುವಾರ ನಡೆಯಬೇಕಿದ್ದ ಚುನಾವಣೆಯನ್ನು ಸರ್ಕಾರ ಕೊರೊನಾ ನೆಪವೊಡ್ಡಿ ಮುಂದೂಡಿತ್ತು. ಇದರಿಂದ ಬಿಜೆಪಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ ಕಾಂಗ್ರೆಸ್, ಜೆಡಿಎಸ್‍ಗೆ ನಿದ್ದೆ ಗೆಡುವಂತಾಗಿತ್ತು.
ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡ ಸದಸ್ಯ :
ಸದ್ಯ ಕೊರೊನಾ ಹತೋಟಿಗೆ ಬಂದ ಪರಿಣಾಮ ಅ.1 ರಂದು ಚುನಾವಣೆ ನಡೆಸಲು ವೇಳಾಪಟ್ಟಿ ಹಾಕಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದಿದ್ದ ರಾಜುಬಡಗಿ ಅವರು ತಮ್ಮ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡಿರುವುದು, ಪಪಂ ಗದ್ದುಗೆ ಏರಲು ತುದಿಗಾಲಿನಲ್ಲಿ ನಿಂತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ತೀವ್ರ ಮುಖಭಂಗವಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಸದಸ್ಯರೂ ಸಹ ಪ್ರವಾಸದಲ್ಲಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಪಪಂಗೂ ಆಪರೇಷನ್ ಕಮಲ ವಿಸ್ತರಿಸಿದ್ದು, ಸದಸ್ಯ ರಾಜುಬಡಗಿ ಪೋನ್ ಸ್ವಿಚ್ ಆಫ್‍ಗೆ ಬಿಜೆಪಿಯ ಹಣ ಕಾರಣ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ.
ದಿನಕ್ಕೊಂದು ತಿರುವು ಪಡೆಯುತ್ತಿರುವ ರಾಜಕೀಯ :
ರಾಜುಬಡಗಿ ಮನೆಯಲ್ಲಿ ಪ್ರಸ್ತುತ ಯಾರೊಬ್ಬರೂ ಇಲ್ಲದ ಕಾರಣ ಚುನಾವಣಾ ನೋಟಿಸ್ ತಹ ತಲುಪಿಸಲಾಗಿಲ್ಲ. ಹೀಗಿರುವಾಗ ಚುನಾವಣೆಯಲ್ಲಿ ರಾಜುಬಡಗಿ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ. ಇದು ಸಹಜವಾಗಿ ಬಿಜೆಪಿಗೆ ವರದಾನವಾಗಲಿದ್ದು, ಬಿಜೆಪಿ ಅನಾಯಾಸವಾಗಿ ಅಧಿಕಾರ ಹಿಡಿಯಲಿದೆ ಎನ್ನಲಾಗುತ್ತಿದೆ. ಆದರೆ ಹುಳಿಯಾರು ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಯಾವ ಕ್ಷಣದಲ್ಲಿ ಏನಾಗುತ್ತದೆಯೂ ಹೇಳದಾಗಿದೆ. ರಾಜುಬಡಗಿ ಚುನಾವಣೆಯಲ್ಲಿ ಭಾಗವಹಿಸಿದರೆ ಎರಡೂ ಬಣಕ್ಕೂ ಸಮಸಮ ಮತಗಳು ಚಲಾವಣೆಯಾಗಿ ಲಾಟರಿ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಬೇಕಾಗುತ್ತದೆ. ಯಾವುದಕ್ಕೂ ಅ.1 ರ ಶುಕ್ರವಾರದವರೆವಿಗೂ ಕಾದು ನೋಡಬೇಕಿದೆ.
ರಾಜುಬಡಗಿ ಮನೆಗೆ ವಿಪ್ ಅಂಟಿಸಲಾಗುವುದು
ಆ.23 ರಿಂದಲೂ ಪಪಂ ಸದಸ್ಯ ರಾಜುಬಡಗಿ ಮತ್ತವರ ಪತ್ನಿಯ ಪೋನ್ ಸ್ವಿಚ್‍ಆಫ್ ಆಗಿದೆ. ಹಾಗಾಗಿ ಅವರ ಮನೆಗೆ ಪಕ್ಷದ ವಿಪ್ ಅಂಟಿಸಿ ಬರುತ್ತೇವೆ. ಚುನಾವಣೆಯಲ್ಲಿ ಭಾಗಿಯಾಗದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಅವರ ಸದಸ್ಯತ್ವ ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
-ವೈ.ಸಿ.ಸಿದ್ಧರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹುಳಿಯಾರು.
-ಎಚ್.ಬಿ.ಕಿರಣ್‍ಕುಮಾರ್
