ದುಸ್ಥಿತಿಯ ಜೀವನ ನಡೆಸುತ್ತಿರುವ ಸಾರ್ವಜನಿಕರು
ತುಮಕೂರು
ವಿಶೇಷ ವರದಿ : ರಾಕೇಶ್.ವಿ
ತುಮಕೂರು ಮಹಾನಗರ ಪಾಲಿಕೆಯ 6ನೇ ವಾರ್ಡ್‍ಗೆ ಸೇರುವ ಭೀಮಸಂದ್ರ ಗ್ರಾಮವು ನಿತ್ಯ ಒಂದಲ್ಲಾ ಒಂದು ಸಮಸ್ಯೆಗಳಿಂದ ಪರದಾಡುತ್ತಿದೆ. ಮಳೆ ಬಂದರೆ ರೈಲ್ವೇ ಕೆಳ ಸೇತುವೆ ನೀರು ತುಂಬಿಕೊಂಡು ರಸ್ತೆ ಸಂಚಾರ ಬಂದ್ ಆಗುತ್ತಿತ್ತು. ಇದೀಗ ಮನೆಗಳು ಇರುವ ಕಡೆಗಳಲ್ಲಿ ಕೂಡ ಮಳೆ ನೀರು ನಿಂತು ಸಾರ್ವಜನಿಕರು ಪರದಾಡುವಂತಾಗಿದೆ.
ತುಮಕೂರು ನಗರದಿಂದ 6 ಕಿಮೀ ದೂರದಲ್ಲಿರುವ ಭೀಮಸಂದ್ರ ಗ್ರಾಮವು ಮೊದಲು ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಆದರೆ ಅದನ್ನು ಮಹಾನಗರ ಪಾಲಿಕೆ ಸೇರ್ಪಡಿಸಿದ್ದು ಇದೀಗ 6ನೇ ವಾರ್ಡ್‍ನ ವ್ಯಾಪ್ತಿಗೆ ಒಳಪಟ್ಟಿದೆ. ಆದರೂ ಇಲ್ಲಿಯವರೆಗೆ ಅಲ್ಲಲ್ಲಿ ಸಿಸಿ ರಸ್ತೆಗಳನ್ನು ಹೊರತುಪಡಿಸಿದರೆ ಇತರೆ ಯಾವುದೇ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ.
ಕಳೆದ ಹಲವಾರು ವರ್ಷಗಳಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮನವಿ ಕೊಟ್ಟು, ಸ್ಥಳೀಯ ಪಾಲಿಕೆ ಸದಸ್ಯರಿಗೆ ಮಾಹಿತಿ ತಿಳಿಸಿದರೂ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಭೀಮಸಂದ್ರ ಹಳೆ ಗ್ರಾಮದೊಳಗೆ ಪ್ರವೇಶಿಸಿದಾಗ ಕಂಡು ಬರುವುದು ಸಿಸಿ ರಸ್ತೆಗಳು ಮಾತ್ರ. ಸಿಸಿ ರಸ್ತೆ ಬಿಟ್ಟರೆ ಇನ್ನೊಂದು ಮೂಲಭೂತ ಸೌಲಭ್ಯವಾಗಲಿ, ಅಭಿವೃದ್ಧಿ ಕಾಮಗಾರಿಯಾಗಲಿ ಮಾಡಿಲ್ಲ.
ಅಂಡರ್‍ಪಾಸ್ ಇದ್ದು ವ್ಯರ್ಥ
ಭೀಮಸಂದ್ರ ಹಳೆ ಗ್ರಾಮಕ್ಕೆ ಪ್ರವೇಶಿಸಲು ಇರುವ ಅಂಡರ್‍ಪಾಸ್ ಮುನ್ನೂರು ಮೀಟರ್ ಉದ್ದವಿದ್ದು, ಎರಡು ಕಡೆಗಳಿಂದಲೂ ಸುತ್ತುವರೆದುಕೊಂಡು ಬರಬೇಕಿದೆ. ಮಳೆ ಬಂದರೆ ಈ ಸೇತುವೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ವಿದ್ಯುತ್ ಸೌಲಭ್ಯವಿಲ್ಲದ ಕಾರಣ ರಾತ್ರಿವೇಳೆ ಒಂಟಿಯಾಗಿ ಓಡಾಡಲು ಭಯಭೀತರಾಗುವ ಪರಿಸ್ಥಿತಿ. ಮಳೆ ನೀರು ನಿಂತುಕೊಂಡರೆ ಅಲ್ಲಿನ ಪರಿಸ್ಥಿತಿ ನೋಡತೀರದಾಗಿದೆ.
ಮನೆಗಳ ಮುಂದಿನ ಚರಂಡಿ ಬಂದ್
ಭೀಮಸಂದ್ರದ ಹಳೆ ಗ್ರಾಮದಲ್ಲಿ ಮೊದಲನೇ ಅಡ್ಡರಸ್ತೆಯಲ್ಲಿ ತೆರಳಿದರೆ ಮುಂದಕ್ಕೆ ನಿವೃತ್ತ ಶಿಕ್ಷಕ ಚಲುವಯ್ಯರವರ ಮನೆಯ ಬರುತ್ತದೆ. ಅಲ್ಲಿನ ರಸ್ತೆ ಕಾಮಗಾರಿ ಮಾಡುವಾಗ ನಿರ್ಮಾಣ ಮಾಡಿದ್ದ ಚರಂಡಿಯನ್ನು ಮಾಜಿ ಪಾಲಿಕೆ ಸದಸ್ಯರೇ ಮುಚ್ಚಿಸಿದ್ದು, ಜೋರಾದ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಚರಂಡಿಯ ಅಲ್ಲಲ್ಲಿ ಮಣ್ಣನ್ನು ಹಾಕಿಸಿ ಬಂದ್ ಮಾಡಲಾಗಿದ್ದು, ಇಲ್ಲಿಯವರೆಗೆ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಚರಂಡಿ ನೀರಿನಿಂದ ದುರ್ವಾಸನೆ
ಮನೆಗಳ ಮುಂದೆ ಇರುವ ಚರಂಡಿಯಲ್ಲಿ ನೀರು ಹರಿಯದೆ ನಿಂತುಕೊಂಡಿರುವುದರಿಂದ ದುರ್ವಾಸನೆ ಬೀರುತ್ತಿದೆ. ಚರಂಡಿ ಕಾಮಗಾರಿಯನ್ನು ಪೂರ್ಣ ಮಾಡಿಲ್ಲ. ಜೊತೆಗೆ ಚರಂಡಿ ನೀರು ಹರಿಯುವುದನ್ನು ನಿಲ್ಲಿಸಲಾಗಿದ್ದು. ನೀರು ಹರಿಯಲು ಸಾಧ್ಯವಾಗದೆ, ನಿಂತಲ್ಲೇ ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದರಿಂದ ಸುತ್ತಮುತ್ತಲಿನ ಮಕ್ಕಳಿಗೆ, ಹಿರಿಯರಿಗೆ ವಿವಿಧ ರೀತಿಯ ಕಾಯಿಲೆಗಳು ಬಂದು ಆಸ್ಪತ್ರೆ ಪಾಲಾಗುತ್ತಿದ್ದಾರೆ.
ಮನೆಗಳಲ್ಲಿ ಹಾವುಗಳ ಪ್ರತ್ಯಕ್ಷ
ಚೆಲುವಯ್ಯ ಮೇಷ್ಟ್ರು ರಸ್ತೆಯಲ್ಲಿರುವ ಮನೆಗಳಿಗೆ ಮಳೆಯ ಜೊತೆ ಹಾವುಗಳು ಕೂಡ ಭೇಟಿ ನೀಡುತ್ತಿವೆಯಂತೆ. ಇತ್ತೀಚೆಎ ಸುರಿದ ಭಾರಿ ಮಳೆಗೆ ಮನೆಗೆ ನುಗ್ಗಿದ ಮಳೆ ನೀರಿನ ಜೊತೆಗೆ ನಾಗರಹಾವೊಂದು ಮನೆಯೊಳಗೆ ಬಂದು ಅಡುಗೆ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿಂತೆ. ಹಾವು ಇರುವುದನ್ನು ನೋಡಿದ ಮನೆಯವರು ಇಡೀ ರಾತ್ರಿ ನಿದ್ದೆ ಮಾಡದೆ ಜಾಗರಣೆ ಮಾಡಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ರಸ್ತೆಗೆ ಅಡ್ಡವಾಗಿದೆ ವಿದ್ಯುತ್ ಕಂಬ
ರೈಲ್ವೇ ಹಳಿಗೆ ಅಂಟಿಕೊಂಡಂತೆ ಇದ್ದಂತಹ ಮನೆಗಳಿಗೆ ಈ ಮುಂಚೆ ರಸ್ತೆ, ಚರಂಡಿ ಸೌಲಭ್ಯ ಇತ್ತು. ಆದರೆ ರೈಲ್ವೇ ಹಳಿಗಳನ್ನು ಹಾಕುವಾಗ ಅಲ್ಲಿನ ಜಾಗವನ್ನು ರೈಲ್ವೇ ಇಲಾಖೆಯವರು ಬಳಸಿಕೊಂಡಾಗ ಅಡ್ಡ ಬಂದ ವಿದ್ಯುತ್ ಕಂಬಗಳನ್ನು ಮನೆಗಳ ಪಕ್ಕ ಹಾಕಿದ್ದಾರೆ. ಆ ವೇಳೆ ರಸ್ತೆ ಇರುವುದನ್ನು ಗಮನಿಸದೆ ವಿದ್ಯುತ್ ಕಂಬವನ್ನು ಅಳವಡಿಸಿದ್ದು, ಇದೀಗ ಇದ್ದ ರಸ್ತೆ ಇಲ್ಲದಂತಾಗಿದೆ. ಇಲ್ಲಿ ಕೇವಲ ಕಾಲುದಾರಿ ಮಾತ್ರ ಇದ್ದು, ಇದು ಕೂಡ ಸರಿಯಾಗಿಲ್ಲದೆ ಓಡಾಡಲು ತೀವ್ರ ಸಮಸ್ಯೆಯಾಗಿದೆ.
ಬಾರದ ಕಸದ ವಾಹನ
ಭೀಮಸಂದ್ರವು ಪಾಲಿಕೆ ವ್ಯಾಪ್ತಿಗೆ ಸೇರಿದ್ದರಿಂದ ಕಸದ ವಾಹನಗಳು ಸಂಚರಿಸಬೇಕು. ಆದರೆ ಇಲ್ಲಿಗೆ ಬರುವ ಕಸದ ವಾಹನವು ಕೇವಲ ಮುಖ್ಯ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿದ್ದು, ಅಡ್ಡ ರಸ್ತೆಗಳಲ್ಲಿ ಬರುವುದಿಲ್ಲ. ಇದರಿಂದ ಕಸವನ್ನು ಎಲ್ಲಿ ಹಾಕಬೇಕು ಎಂಬ ಗೊಂದಲಗಳಿವೆ. ಈ ಬಗ್ಗೆ ಹಲವು ಬಾರಿ ಪಾಲಿಕೆ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.ಭೀಮಸಂದ್ರ ಗ್ರಾಮವು ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳ ಕೂಪವಾಗಿದ್ದು, ಅಧಿಕಾರಿಗಳು, ಪಾಲಿಕೆ ಸದಸ್ಯರುಗಳು ಗಮನ ಹರಿಸಿ ಸೂಕ್ತ ಗಮನ ಹರಿಸಿ ಸಮಸ್ಯೆಗಳನ್ನು ಪರಿಹರಿಸಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ.
ನಮಗೆ ಓಡಾಡಲು ಬಹಳ ತೊಂದರೆಯಾಗುತ್ತಿದ್ದು, ಸಮರ್ಪಕವಾದ ರಸ್ತೆಯಿಲ್ಲ. ಇಲ್ಲಿರುವ ಮನೆಗಳಲ್ಲಿನ ವಾಹನಗಳನ್ನು ಎಲ್ಲಿ ಬಿಡಬೇಕು ಎಂಬುದು ತಿಳಿಯುತ್ತಿಲ್ಲ. ಒಂದು ವೇಳೆ ಮನೆಯ ಮುಂದೆ ಬಿಟ್ಟುಕೊಳ್ಳಲು ಇರುವ ಸಣ್ಣ ರಸ್ತೆಯಲ್ಲಿ ಬಂದು ಕೆಳಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.
ಸಾವಿತ್ರಮ್ಮ, ಸ್ಥಳೀಯ ನಿವಾಸಿ
ಆರನೇ ವಾರ್ಡ್‍ಗೆ ಸೇರುವ ಭೀಮಸಂದ್ರದಲ್ಲಿ ಕೆಲವು ಕಡೆಗಳಲ್ಲಿ ರಸ್ತೆ ಸರಿಯಿಲ್ಲ. ನಮ್ಮ ಮನೆಯ ಬಳಿಯಲ್ಲಿ ಇದ್ದಂತಹ ಸಣ್ಣ ರಸ್ತೆಯ ನಡುವೆ ವಿದ್ಯುತ್ ಕಂಬವನ್ನು ನಿಲ್ಲಿಸಿದ್ದಾರೆ. ಇದರಿಂದ ಓಡಾಡುವುದು ತುಂಬಾ ಕಷ್ಟಕರವಾಗಿದೆ. ಅಲ್ಲದೆ ಕಸದ ವಾಹನ ಬಾರದೇ ಇರುವುದರಿಂದ ಕಸವನ್ನು ರೈಲ್ವೇ ಹಳಿಗಳ ಬಳಿಗೆ ಎಸೆಯಲಾಗುತ್ತಿದೆ. ಇದರಿಂದ ದುರ್ವಾಸನೆ ಬರುತ್ತಿದ್ದು, ತೀವ್ರತರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.
ಮಂಜುನಾಥ್ ಸ್ವಾಮಿ, ಸ್ಥಳೀಯ ನಿವಾಸಿ
ಮಳೆ ಬಂದರೆ ಈ ವಾರ್ಡ್‍ನಲ್ಲಿನ ಮನೆಗೆಳಿಗೆ ನೀರು ನುಗ್ಗುತ್ತದೆ. ಮಳೆ ಹೆಚ್ಚಾದರೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಅಲ್ಲದೆ ಇದ್ದಂತಹ ಚರಂಡಿಯನ್ನು ಮಾಜಿ ಕಾರ್ಪೋರೇಟರ್ ಮುಚ್ಚಿಸಿದ್ದಾರೆ. ಇದರಿಂದ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈ ಬಗ್ಗೆ ಹಾಲಿ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡಿದರೂ ಗಮನ ಹರಿಸುತ್ತಿಲ್ಲ.
ಚೆಲುವಯ್ಯ , ನಿವೃತ್ತ ಶಿಕ್ಷಕ