ಸರ್ಕಾರಿ ವಸತಿ ನಿರ್ಮಾಣ ಕಾಮಗಾರಿಗಳಿಗೆ ಮರಳು ಉಪಯೋಗಿಸಲು ಅನುಮತಿ ನೀಡಿ : ಜೆ.ಸಿ.ಮಾಧುಸ್ವಾಮಿ

ತುಮಕೂರು
     ಆಶ್ರಯ, ಜನತಾ ಮನೆ ಸೇರಿದಂತೆ ಸರ್ಕಾರಿ ವಸತಿ ನಿರ್ಮಾಣ ಕಾಮಗಾರಿಗಳಿಗೆ  ಮರಳು ಉಪಯೋಗಕ್ಕೆ ಅನುಮತಿ ನೀಡಲು ಕ್ರಮ  ಕೈಗೊಳ್ಳಬೇಕೆಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪಂಕಜಾ ಅವರಿಗೆ ಸೂಚನೆ ನೀಡಿದರು.
    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲೆಯ ವಿವಿಧ ಶಾಸಕರು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಜಿಲ್ಲಾ ಖನಿಜ ಪ್ರತಿಷ್ಠಾಪನೆ, ನರೇಗಾ ಯೋಜನೆ ಪ್ರಗತಿ, ಪ್ರವಾಸಿ ಟ್ಯಾಕ್ಸಿ ವಿತರಣೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವ್ಯಾಪಕವಾಗಿ ಮರಳು ದಂಧೆ ನಡೆಯುತ್ತಿದೆ.  ಮರಳನ್ನು ಲಾರಿಗಳಲ್ಲಿ ಬೆಂಗಳೂರು, ಮೈಸೂರಿಗೆ ಸಾಗಿಸುತ್ತಿರುವವರಿಗೆ ಅಕ್ರಮವಾಗಿ ಅನುಮತಿ ನೀಡಲಾಗುತ್ತಿದೆ.  ಆದರೆ ಸೈಕಲ್ ಮೇಲೆ ಚೀಲದಲ್ಲಿ ಮರಳು ತುಂಬಿಕೊಂಡು ಹೋಗುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು   ಅಸಮಾಧಾನ ವ್ಯಕ್ತಪಡಿಸಿದರು.  
     ಕೊರಟಗೆರೆಯಲ್ಲಿ 1 ರಾತ್ರಿಗೆ 200 ಲಾರಿಗಳು ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದು, ಅಧಿಕಾರಿಗಳು ಕ್ರಮಕೈಗೊಳ್ಳದೆ ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.  ಮರಳು ದಂಧೆಯಿಂದ ಸರ್ಕಾರಕ್ಕೂ ಆದಾಯವಿಲ್ಲ. ತೆರಿಗೆಗೂ ಕತ್ತರಿ ಬೀಳುತ್ತಿದೆ.  ಇನ್ನಾದರೂ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಬೇಕೆಂದು ಎಚ್ಚರಿಸಿದರು.
     ಗಣಿಬಾಧಿತ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ಡಿಎಂಎಫ್‍ಟಿ(ಜಿಲ್ಲಾ ಖನಿಜ ಪ್ರತಿಷ್ಠಾಪನಾ ಟ್ರಸ್ಟ್)ನಿಧಿಯಲ್ಲಿರುವ 18 ಕೋಟಿ ರೂ.ಗಳಲ್ಲಿ ಉಂಬಳಿ(ದತ್ತಿ)ಗಾಗಿ ಶೇ. 10ರಷ್ಟು, ಆಡಳಿತ ವೆಚ್ಚಕ್ಕಾಗಿ ಶೇ.5ರಷ್ಟು ಹಣವನ್ನು ವಿನಿಯೋಗಿಸಬೇಕು.  ಉಳಿದ ಶೇ. 85ರಷ್ಟು ಹಣದಲ್ಲಿ ಶೇ. 60ರಷ್ಟು ಹಣವನ್ನು ಗಣಿಗಾರಿಕೆಯಿಂದ ನೇರವಾಗಿ ಬಾಧೆಗೊಳಗಾದ ಪ್ರದೇಶಗಳಲ್ಲಿ ಕುಡಿಯುವ ನೀರು, ಆರೋಗ್ಯ ಸೇವೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಯೋವೃದ್ಧರ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಶೌಚಾಲಯ ನಿರ್ಮಾಣ, ಪರಿಸರ ಸಂರಕ್ಷಣೆಗಾಗಿ ಹಾಗೂ ಶೇ.40ರಷ್ಟು ಹಣವನ್ನು ಇತರೆ ಆದ್ಯತೆಗಳಾದ ಮೂಲಭೂತ ಸೌಕರ್ಯ, ನೀರಾವರಿ, ವಾಟರ್‍ಶೆಡ್ ಅಭಿವೃದ್ಧಿಗಾಗಿ ವಿನಿಯೋಗಿಸಬೇಕೆಂದು ನಿರ್ದೇಶನ ನೀಡಿದರು.
      ಶಾಸಕ ಗೌರಿಶಂಕರ್ ಮಾತನಾಡಿ ಗಣಿಬಾಧಿತ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಮಳೆನೀರು ಕಾಲುವೆಗಳು ಮುಚ್ಚಿಹೋಗಿ ಅಂತರ್ಜಲ ಬತ್ತಿಹೋಗುತ್ತಿದೆ.  ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ ಎಂದರಲ್ಲದೆ ಇಲಾಖೆ ಗುರುತಿಸಿರುವ ಜಲ್ಲಿ ಕ್ರಷರ್‍ಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
      ನಂತರ ಮಾತನಾಡಿದ ಮಾಧುಸ್ವಾಮಿ ನಿಯಮಾವಳಿಯನ್ವಯ ಜಿಲ್ಲೆಯಲ್ಲಿರುವ ಗಣಿಬಾಧಿತ ಪ್ರದೇಶ, ಚಾಲ್ತಿಯಲ್ಲಿರುವ ಕಲ್ಲುಗಣಿ ಗುತ್ತಿಗೆ ಮತ್ತು ಕ್ರಷರ್ ಘಟಕಗಳನ್ನು ಗುರುತಿಸಿ ಮತ್ತೊಮ್ಮೆ ಪರಿಶೀಲಿಸಿ ಪಟ್ಟಿ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಸಿ ಟ್ಯಾಕ್ಸಿ ವಿತರಣೆಯಲ್ಲಿ ಮೆರಿಟ್ ಗಣನೆ ಬೇಡ:
       ಪ್ರವಾಸೋದ್ಯಮ ಇಲಾಖೆಯಿಂದ ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನ ಒದಗಿಸುವ ಬಗ್ಗೆ ಸಭೆ ನಡೆಸಿದ ಸಚಿವ ಮಾಧುಸ್ವಾಮಿ ಅವರು ಸಹಾಯಧನ ಸೌಲಭ್ಯ ಆಯ್ಕೆಗೆ ನಿಗಧಿಪಡಿಸಿರುವ ಕನಿಷ್ಠ ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆಯಲ್ಲಿ ಮೆರಿಟ್ ಅನ್ನು ಪರಿಗಣಿಸದೆ   ಹಿಂದುಳಿದ ಅರ್ಹ ಬಡ ಅಭ್ಯರ್ಥಿಗಳಿಗೆ ಮಾತ್ರ ದೊರೆಯುವಂತೆ ಮಾಡಿ.  ಐಎಎಸ್ ಹುದ್ದೆಗೆ ಆಯ್ಕೆ ಮಾಡುವ ರೀತಿಯಲ್ಲಿ ಮೆರಿಟ್ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಬೇಡಿ. ನಿಯಮವನ್ನು ಸಡಿಲಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಅವರಿಗೆ ಸಲಹೆ   ನೀಡಿದರು.
     ಜಿಲ್ಲಾಧಿಕಾರಿಗಳು ಮಾತನಾಡಿ ಕಳೆದ 2016 ರಿಂದ ಪ್ರವಾಸಿ ಟ್ಯಾಕ್ಸಿ ಸಹಾಯಧನ ಸೌಲಭ್ಯಕ್ಕೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.  ತಮ್ಮ ಸೂಚನೆಯಂತೆ ನಿಯಮಗಳನ್ನು ಸಡಿಲಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರಲ್ಲದೆ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ  ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಹೈಡೆಫಿನೇಷನ್ ವಿಡಿಯೋ  ಹಾಗೂ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿ ವ್ಯಾಪಕ ಪ್ರಚಾರಗೊಳಿಸಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
ನರೇಗಾ ಯೋಜನೆಗೆ ನಿರ್ಧಿಷ್ಠ ಗುರಿಯಿಲ್ಲ:
      ನಂತರ ನಡೆದ ನರೇಗಾ ಯೋಜನೆ ಪ್ರಗತಿ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 28ಲಕ್ಷ ಜನಸಂಖ್ಯೆಯಿದ್ದು,  6ಲಕ್ಷ ಕುಟುಂಬಗಳಿವೆ.  ಈವರೆಗೂ ನರೇಗಾ ಯೋಜನೆಯಡಿ 174048 ಉದ್ಯೋಗ ಚೀಟಿಗಳನ್ನು ವಿತರಿಸಿ ಶೇ. 98ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.
      ಸಚಿವ ಮಾಧುಸ್ವಾಮಿ ಅವರು ನರೇಗಾ ಯೋಜನೆಯ ವರದಿಯನ್ನು ಅವಲೋಕಿಸಿ ಮಾತನಾಡುತ್ತಾ ಜಿಲ್ಲೆಯಲ್ಲಿ ನರೇಗಾ ಯೋಜನೆ ಅನುಷ್ಠಾನ ನನಗೆ ತೃಪ್ತಿ ತಂದಿಲ್ಲ.  ನರೇಗಾ ಯೋಜನೆ ಅನುಷ್ಠಾನಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಗೆ 40ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ, ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.  ಈ ಯೋಜನೆ ಅನುಷ್ಠಾನ ಹಾಗೂ ಅನುದಾನ ಬಳಕೆಗೆ ಸರ್ಕಾರದಿಂದ ಯಾವುದೇ ಗುರಿ ನಿಗಧಿಯಾಗಿರುವುದಿಲ್ಲ.  ಬಡ ಗ್ರಾಮೀಣರಿಗೆ ಉದ್ಯೋಗ ಒದಗಿಸಲು ಜಾರಿ ಮಾಡಿರುವ ನರೇಗಾ ಯೋಜನೆಯು ಜಿಲ್ಲೆಯಲ್ಲಿ ಅಧಿಕಾರಿಗಳ ನಿರ್ಲಕ್ಷತೆಯಿಂದ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ.  ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿದ್ದರೂ ನಿರೀಕ್ಷಿತ ಮಾನವ ದಿನಗಳನ್ನು ಸೃಜಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
     ನಂತರ ಅರಣ್ಯ, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಮತ್ತಿತರ ಇಲಾಖೆಗಳಲ್ಲಿ ನರೇಗಾ ಪ್ರಗತಿ ಪರಿಶೀಲಿಸಿದ ಅವರುಜಿಲ್ಲೆಯಲ್ಲಿ ಮಳೆಯಿಂದ ಅಡಿಕೆ, ಮಾವು, ತೆಂಗು ಬೆಳೆ ಅಪಾರ ಹಾನಿಯಾಗಿದ್ದರೂ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ. ನೆರೆಯ ಹಾಸನ ಜಿಲ್ಲೆಯಲ್ಲಿ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಬಗ್ಗೆ ಪ್ರಶಂಸಿಸಿದ ಸಚಿವರು ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾದರಿಯಾಗಿ ಕಾರ್ಯನಿರ್ವಹಿಸಬೇಕೆಂದರಲ್ಲದೆ ಬೆಳೆ ಹಾನಿಯಾದಾಗ ಗಿಡ ಬೆಳೆಸಿ 3 ವರ್ಷ ನಿರ್ವಹಣೆಗಾಗಿ ಅರಣ್ಯ ಇಲಾಖೆಯಿಂದ ಸಹಾಯಧನ ಒದಗಿಸುವ ಸೌಲಭ್ಯವಿದ್ದು,  ಈ ಸೌಲಭ್ಯದ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಅಧಿಕಾರಿಗಳು ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಜನರಿಗೆ ಅರಿವು ಮೂಡಿಸಬೇಕೆಂದರು. 
    ಸಂಸದ ಜಿ.ಎಸ್. ಬಸವರಾಜು ಮಾತನಾಡಿ ಜಿಲ್ಲೆಯಲ್ಲಿ ತೋಟಗಾರಿಕೆ ಸಂಪೂರ್ಣ ಹಾಳಾಗಿದೆ. ತೋಟಗಾರಿಕೆ ಬೆಳೆಗಳಿಗೆ ತಗಲುವ ವಿವಿಧ ರೋಗಗಳ ಹತೋಟಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.  ಜಿಲ್ಲೆಯಲ್ಲಿ ವಿತರಣೆ ಮಾಡಿರುವ ಪಾಲಿಹೌಸ್, ಹಸಿರು ಮನೆ ಫಲಾನುಭವಿಗಳ ಆಯ್ಕೆಯಲ್ಲಿ ಲೋಪವಾಗಿರುವ ಬಗ್ಗೆ ದೂರುಗಳಿವೆ.  ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರಿಗೆ ವಿತರಿಸಲಾಗುವ ಯೋಜನೆಗಳ ಅನುದಾನವನ್ನು ಏಜೆನ್ಸಿಗಳು ಲೂಟಿ ಮಾಡುತ್ತಿದ್ದು, ತನಿಖೆಯಾಗಬೇಕು ಎಂದು ಪಟ್ಟು ಹಿಡಿದರು.ಸಭೆಯಲ್ಲಿ ಸಂಸದ ಎ. ನಾರಾಯಣಸ್ವಾಮಿ, ಶಾಸಕರಾದ ಜ್ಯೋತಿಗಣೇಶ್,    ಬಿ.ಸಿ. ನಾಗೇಶ್,   ಮಸಾಲ ಜಯರಾಂ,  ಬಿ. ಸತ್ಯನಾರಾಯಣ,  ವಿಧಾನಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜ್ ಹಾಗೂ ತಿಪ್ಪೇಸ್ವಾಮಿ,  ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link