ಚಿತ್ರದುರ್ಗ:
ಕೇಂದ್ರ ಸರ್ಕಾರ ಆಸಿಯನ್ ಹದಿನೈದು ದೇಶಗಳೊಂದಿಗೆ ಸೇರಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವುದಕ್ಕೆ ಸಿಡಿದೆದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಎ.ಪಿ.ಎಂ.ಸಿ.ಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹದಿನೈದು ದೇಶಗಳ ಜೊತೆ ಮಾತುಕತೆ ಮೂಲಕ ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಆರ್.ಸಿ.ಇ.ಪಿ. ಮೂಲಕ ಸಹಿ ಹಾಕಲು ಹೊರಟಿರುವುದರಿಂದ ರೈತ ದಿವಾಳಿಯಾಗುವುದರಲ್ಲಿ ಅನುಮಾನವಿಲ್ಲ. ಪಿ.ವಿ.ನರಸಿಂಹರಾವ್ ದೇಶದ ಪ್ರಧಾನಿಯಾಗಿದ್ದಾಗ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಒಂದು ದಿನ ತಿಹಾರ್ ಜೈಲಿನಲ್ಲಿದ್ದು ಬಂದೆವು. ಅಂದಿನಿಂದ ಇಲ್ಲಿಯತನಕ ರೈತ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುವಂತಾಗಿರುವುದರ ವಿರುದ್ದ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದರು.
ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದೆ ಕೃಷಿಗಾಗಿ ಮಾಡಿದ ಸಾಲ ತೀರಿಸಲು ಆಗದೆ ಲಕ್ಷೋಪ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಇದ್ಯಾವುದನ್ನು ಲೆಕ್ಕಿಸದ ಕೇಂದ್ರ ಅವಿವೇಕಿ ಸರ್ಕಾರ ತನ್ನ ಒಪ್ಪಂದದಿಂದ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಅಸಂಬಂದ್ದವಾದ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ಮೂಲಕ ರೈತನ ಬದುಕನ್ನು ಮೂರಾಬಟ್ಟೆಯಾಗಿಸುತ್ತಿದೆ. ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತೆರಡು ವರ್ಷಗಳಾಗಿದ್ದರೂ ಇನ್ನು ಜಿಲ್ಲೆಯಲ್ಲಿ ಒಂದು ಎಕರೆ ಭೂಮಿಯನ್ನು ನೀರಾವರಿ ಮಾಡಲು ಆಗದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡುತ್ತ ಅನ್ನದಾತ ರೈತನನ್ನು ವಂಚಿಸುತ್ತ ಬರುತ್ತಿವೆ. ವಕ್ಕಲುತನದಿಂದ ರೈತ ಹಿಂದೆ ಸರಿಯುತ್ತಿದ್ದು, ತೋಟಗಳು ಒಣಗಿ ನಿಂತಿವೆ. ಭದ್ರಾಮೇಲ್ದಂಡೆ ಯೋಜನೆ ಇನ್ನು ಮರೀಚಿಕೆಯಾಗಿ ಉಳಿದಿದೆ. ಮುಂಬರುವ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಹಳ್ಳಿ ಹಳ್ಳಿಗಳಲ್ಲಿ ಬಹಿಷ್ಕರಿಸುವ ಬೆದರಿಕೆ ಹಾಕಿದರು.
ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡುತ್ತ ಕೇಂದ್ರ ಸರ್ಕಾರದ ಆರ್.ಸಿ.ಇ.ಪಿ.ಒಪ್ಪಂದ ಗ್ಯಾಟ್‍ಗಿಂತಲೂ ಘನಘೋರ ಗಂಭೀರ ಸಮಸ್ಯೆಯಾಗಿದೆ. ಅಡಿಕೆ, ಹೈನುಗಾರಿಕೆ, ಮೆಣಸನ್ನು ರೈತ ಕೈಬಿಡುವ ಕಾಲ ದೂರವಿಲ್ಲ. ಕೃಷಿ ಉತ್ಪಾದನೆ ನಿಂತು ರೈತರ ಜಮೀನುಗಳಲ್ಲಿ ಪಾರ್ಥೇನಿಯಂ ಬೆಳೆಯುತ್ತದೆ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ತಳೆಯುತ್ತಿರುವುದರ ವಿರುದ್ದ ಹೋರಾಟಕ್ಕೆ ಸಿದ್ದರಾಗಬೇಕಿದೆ ಎಂದು ರೈತರನ್ನು ಜಾಗೃತಿಗೊಳಿಸಿದರು.
2012 ರಿಂದ ಇಲ್ಲಿಯತನಕ ಭಾರತ ಹದಿನೈದು ರಾಷ್ಟ್ರಗಳ ಜೊತೆ ಸೇರಿ ಚರ್ಚಿಸಿ ವಿದೇಶಿ ಉತ್ಪನ್ನಗಳನ್ನು ತಂದು ನಮ್ಮ ದೇಶದಲ್ಲಿ ತೆರಿಗೆ ಇಲ್ಲದಂತೆ ಮಾರಿಕೊಳ್ಳಲು ಅವಕಾಶ ನೀಡಲು ಮುಂದಾಗಿದೆ. ಇದರಿಂದ ಕೃಷಿಕರು ಕರಾಳ ದಿನವನ್ನು ಎದುರಿಸಬೇಕಾಗುತ್ತದೆ. ರೈತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಕೃಷಿ ಜಮೀನು ನಾಶವಾಗಿ ನಿಂತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವೈಜ್ಞಾನಿಕ ಬೆಲೆಯನ್ನು ನೀಡದ ಕಾರಣ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ನ.ನಾಲ್ಕರಂದು ಕೇಂದ್ರ ತನ್ನ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದಲ್ಲಿ ಇಡೀ ರೈತ ಸಮೂಹ ಭಾರತ ಸರ್ಕಾರವನ್ನು ಧಿಕ್ಕರಿಸುತ್ತದೆ ಎಂದು ಗುಡುಗಿದರು.
ಜಿಲ್ಲಾಧ್ಯಕ್ಷ ಹಿರೇಕಬ್ಬಿಗೆರೆ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಲ್.ಮಲ್ಲಿಕಾರ್ಜುನ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಜೊತೆ ರೈತರ ಜಟಾಪಟಿ
ರೈತ ಸಂಘದ ಮುಖಂಡರು ಹಾಗೂ ಜಿಲ್ಲಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ಜರುಗಿತು ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ನೀವು ರೈತರಿಗೆ ಭಾಷಣ ಮಾಡಿಕೊಳ್ಳಿ ಮೊದಲು ಮನವಿ ಕೊಡಿ ಎಂದು ಅವಸರ ಮಾಡಿದ್ದರಿಂದ ಕುಪಿತಗೊಂಡ ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಮೊದಲು ನಮ್ಮ ಸಮಸ್ಯೆಗಳನ್ನು ಕೇಳಿ ನಂತರ ಮನವಿ ನೀಡುತ್ತೇನೆ ಎಂದು ಏರು ಧ್ವನಿಯಲ್ಲಿ ಮಾತನಾಡಿದಾಗ ತಾಳ್ಮೆ ಕಳೆದುಕೊಂಡ ಜಿಲ್ಲಾಧಿಕಾರಿ ರೈತರೊಡನೆ ಮಾತಿನ ಜಟಾಪಟಿಗಿಳಿದರು.
ಆಗ ನೆರೆದಿದ್ದ ನೂರಾರು ರೈತರು ಹಸಿರು ಶಾಲುಗಳನ್ನು ತಿರುಗಿಸುತ್ತಾ ರೈತ ಸಂಘಕ್ಕೆ ಜೈಕಾರಗಳನ್ನು ಕೂಗಿದರು. ಪ್ರತಿಭಟನಾ ನಿರತರ ಬಳಿ ಆಗಮಿಸಿದ ತಕ್ಷಣವೇ ನೀವು ಆ ಮೇಲೆ ರೈತರಿಗೆ ಭಾಷಣ ಮಾಡಿ ಮೊದಲು ಮನವಿ ಕೊಡಿ ಎಂದು ಜಿಲ್ಲಾಧಿಕಾರಿ ಹೇಳಿದರು. ಅದಕ್ಕೆ ಮುಖಂಡರು ಸ್ವಲ್ಪ ತಾಳ್ಮೆಯಿಂದ ನಮ್ಮ ಅಹವಾಲುಗಳನ್ನು ಕೇಳಿಸಿಕೊಂಡು ನಂತರ ಮನವಿ ಸ್ವೀಕರಿಸಿ ಎಂದು ಪ್ರತ್ಯುತ್ತರ ನೀಡಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
