ಸಿ.ಟಿ.ಗಣಪತಿ ಯುವಕ ಸಂಘದ ಗಣೇಶೋತ್ಸವ

0
7

ಚಳ್ಳಕೆರೆ

     ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಸೆ.13ರಿಂದ ಇಲ್ಲಿನ ಸಿ.ಟಿ.ಗಣಪತಿ ಯುವಕ ಸಂಘದ ವತಿಯಿಂದ ಇದೇ ಮೊದಲ ಬಾರಿ ಗಣೇಶ ಉತ್ಸವವನ್ನು ಭಕ್ತಿ ಮತ್ತು ಶ್ರದ್ದೆಯಿಂದ ಆಚರಣೆ ಮಾಡುತ್ತಿದ್ದು, ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ ಇತ್ತೀಚೆಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

     ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ಗಣೇಶ ಉತ್ಸವ ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ಯಾವುದೇ ಲೋಪವಿಲ್ಲದೆ ಆಚರಣೆ ಮಾಡುತ್ತಾ ಬಂದಿದ್ದು, ಈ ವರ್ಷವೂ ಸಹ ಹೆಚ್ಚಿನ ಸಂಖ್ಯೆಯ ಭಕ್ತರು ಗಣೇಶನ ದರ್ಶನ ಪಡೆದು ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಣೆ ಮಾಡುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ನಾನು ಸಹ ಈ ಬರದ ನಾಡಿಗೆ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆಂದರು.

       ಸಿ.ಟಿ.ಗಣಪತಿ ಯುವಕ ಸಂಘದ ಗೌರವಾಧ್ಯಕ್ಷರೂ, ಶಾಸಕರೂ ಆದ ಟಿ.ರಘುಮೂರ್ತಿ ಮಾತನಾಡಿ, ಶ್ರೀಗಣೇಶನ ಉತ್ಸವನ್ನು ಎಲ್ಲಾ ಸಮುದಾಯದವರೂ ವಿಶೇಷ ಆಸಕ್ತಿಯಿಂದ ಆಚರಣೆ ಮಾಡುತ್ತಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಮಹಿಳೆಯರು ಗಣೇಶನ ಉತ್ಸವ ಆಚರಣೆಯಲ್ಲಿ ಹೆಚ್ಚು ಉತ್ಸಾಹ ತೋರಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ಈ ದೇವರ ಉತ್ಸವ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಾ ಬಂದಿದೆ. ಸಿ.ಟಿ.ಗಣಪತಿ ಯುವಕ ಸಂಘ ವ್ಯವಸ್ಥಿತವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಸಂತಸ ತಂದಿದೆ ಎಂದರು.

     ಸಂಘದ ಅಧ್ಯಕ್ಷ ಜಿ.ಯಶವಂತಕುಮಾರ್ ಮಾತನಾಡಿ, ಕಳೆದ ಸುಮಾರು 40 ವರ್ಷಗಳಿಂದ ದಿವ್ಯಜ್ಯೋತಿ ಯುವಕ ಸಂಘದ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಾ ಬಂದಿತ್ತು. ಆದರೆ, ಈ ಬಾರಿ ದಿವ್ಯಜ್ಯೋತಿ ಯುವಕ ಸಂಘದವರು ಗಣೇಶ ಉತ್ಸವ ಮಾಡುವ ಕಾರ್ಯಕ್ಕೆ ಹೆಚ್ಚು ಉತ್ಸಾಹ ತೋರಲಿಲ್ಲ. ಆದರೆ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆದಿರುವ ಈ ಉತ್ಸವವನ್ನು ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬ ದೃಷ್ಠಿಯಿಂದ ಸಿ.ಟಿ.ಗಣಪತಿ ಯುವಕ ಸಂಘವನ್ನು ಸ್ಥಾಪಿಸಿ ಅದರ ಮೂಲಕ ಈ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಂಡು ಯಶಸ್ಸಿಯಾಗಿ ನಡೆಸಲಾಗುತ್ತಿದೆ.

     ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕೆ.ಎಸ್.ನಾಗರಾಜ, ಕೃಷ್ಣಾರೆಡ್ಡಿ, ಟಿ.ರವಿವರ್ಮ, ಶಶಿಧರ, ಆರ್.ಪ್ರಸನ್ನಕುಮಾರ್, ಕರೀಕೆರೆ ನಾಗರಾಜು, ವಿ.ಎಂ.ಮಂಜುನಾಥ, ವೀರೇಂದ್ರ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here