ಬೆಂಗಳೂರು
ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ರಾಜ್ಯದಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇಂದಿಲ್ಲಿ ತಿಳಿಸಿದರು .ಮುಂದಗೋಳದಲ್ಲಿ ಸೋಮವಾರ ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದ್ದು ನಂತರ ಶಿವಮೊಗ್ಗ, ಹಾಸನ, ಚಿತ್ರದುರ್ಗ, ಮತ್ತಿತರ ಜಿಲ್ಲೆಗಳಲ್ಲೂ ಪ್ರತಿಭಟನೆಗಳನ್ನು ನಡೆಸಿ ನ.11ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು,
ಕೇಂದ್ರದ ತಪ್ಪು ನಿರ್ಧಾರಗಳಿಂದಾಗಿ ದೇಶದ ಅರ್ಥ ವ್ಯವಸ್ಥೆ ಐಸಿಯುಗೆ ಸೇರಿದೆ. ಉದ್ಯೋಗ ಸೃಷ್ಟಿ ವಿಚಾರ ಕೋಮಾ ಸ್ಥಿತಿ ತಲುಪಿದೆ. ಅನೇಕ ಉದ್ಯಮಗಳು ಬಂದ್ ಆಗುತ್ತಿದ್ದು, ಬ್ಯಾಂಕ್ಗಳ ಸ್ಥಿತಿಯೂ ಚಿಂತಾಜನಕವಾಗಿದೆ. ಒಂದು ರೀತಿಯಲ್ಲಿ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವನ್ನು ಕೇವಲ ವಿರೋಧ ಪಕ್ಷವಾಗಿ ಹೇಳುತ್ತಿಲ್ಲ. ದೇಶದ ಜನರು ಇದೇ ವಿಚಾರವನ್ನು ವ್ಯಾಪಕವಾಗಿ ಚರ್ಚಿಸುತ್ತಿದ್ದು, ಆತಂಕಕ್ಕೆ ಈಡಾಗುತ್ತಿದ್ದಾರೆ ಎಂದು ಹೇಳಿದರು.
ತರಾತುರಿಯಲ್ಲಿ ನೋಟು ರದ್ಧತಿ, ಜಿಎಸ್ಟಿ ಜಾರಿ ಮಾಡಿದ್ದರಿಂದ ತೆರಿಗೆ ವ್ಯವಸ್ಥೆ ಹದಗೆಟ್ಟಿದೆ. ಯಾವುದೇ ಸುಧಾರಣಾ ನೀತಿಗಳನ್ನು ಕೈಗೊಳ್ಳದಿರುವುದರಿಂದ ದಿನೇದಿನೇ ಆರ್ಥಿಕ ಸ್ಥಿತಿ ಪಾತಾಳಕ್ಕೆ ತಲುಪುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಗೆ ಕಾಂಗ್ರೆಸ್ನವರು ಅವರಪ್ಪನ ದುಡ್ಡು ಕೊಟ್ಟಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಈ ಯೋಜನೆಗೆ ಬಿಜೆಪಿಯಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಅವರಪ್ಪನ ದುಡ್ಡನ್ನು ಕೊಟ್ಟಿಲ್ಲ. ರಾಜ್ಯದ ಜನರ ತೆರಿಗೆ ಹಣವನ್ನು ಕೊಟ್ಟಿದ್ದಾರಷ್ಟೆ ಎಂದು ತಿರುಗೇಟು ನೀಡಿದರು.
ನಳಿನ್ ಕುಮಾರ್ ಅವರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ, ಈ ಯೋಜನೆಗೆ ಯಾರೇ ಹಣ ನೀಡಿದರೂ, ಜನರ ತೆರಿಗೆಯಿಂದ ಸಂಗ್ರಹಿಸಿರುವ ಹಣವಾಗಿರುತ್ತದೆ ಎಂದು ತಿಳಿಸಿದರು.
ಒಪ್ಪಂದಕ್ಕೆ ಸಹಿ ಬೇಡ
ಮುಕ್ತ ಮಾರಾಟ ಒಪ್ಪಂದಕ್ಕೆ ವಿಶ್ವದ 16 ರಾಷ್ಟçಗಳು ಸಹಿ ಹಾಕಲು ಮುಂದಾಗಿವೆ. ಯಾವುದೇ ಕಾರಣಕ್ಕೂ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಬಾರದು. ಇದರ ಸಾಧಕ – ಬಾಧಕಗಳ ಬಗ್ಗೆ ಸಂಸತ್ ಸೇರಿದಂತೆ, ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗಿಲ್ಲ. ಒಂದು ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ದೇಶದ ಕೃಷಿ, ಕೈಗಾರಿಕೆ, ಹೈನುಗಾರಿಕೆ, ವಲಯಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲಾ ನಿರ್ಧಾರಗಳನ್ನು ಸರ್ವಾಧಿಕಾರಿಯಂತೆ ಕೈಗೊಳ್ಳುತ್ತಿರುವುದು ದೇಶದ ಇಂದಿನ ದುಸ್ಥಿತಿಗೆ ಕಾರಣವಾಗಿದೆ. ಆರ್ಥಿಕ ತಜ್ಞರೂ ಸೇರಿದಂತೆ, ಯಾವುದೇ ವಲಯದ ಪರಿಣಿತರೊಂದಿಗೆ ಚರ್ಚೆ ಮಾಡದೆ, ಏಕಾಏಕಿ ಜಾರಿಗೊಳಿಸಿರುವು ದರಿಂದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಜನರ ಮುಂದೆ ಇಡುತ್ತೇವೆ. ಮುಂದೆ ಎದುರಾಗಲಿರುವ ಉಪಚುನಾವಣೆ ಸಂದರ್ಭದಲ್ಲೂ ಈ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








