ಅನರ್ಹರ ಪ್ರಕರಣ: ಮುಂದಿನ ಕ್ರಮಕ್ಕಾಗಿ ತಜ್ಞರ ಮೊರೆಹೋದ ಕಾಂಗ್ರಸ್

ಬೆಂಗಳೂರು

     ಡಿಸೆಂಬರ್ 5ಕ್ಕೆ ನಿಗದಿಯಾಗಿರುವ ವಿಧಾನಸಭೆ ಉಪಚುನಾವಣೆಯನ್ನು ಮುಂದೂಡದಂತೆ ಕಾಂಗ್ರೆಸ್ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಲಿದ್ದು, ಈ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮಕೈಗೊಳ್ಳುವ ಸಲುವಾಗಿ ಶನಿವಾರ ಕಾಂಗ್ರೆಸ್ ನ ಕಾನೂನು ತಜ್ಞರ ಸಭೆ ನಡೆಯಲಿದೆ.

    ಈ ಸಂಂಧ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಖ್ಯಾತ ವಕೀಲ ಕಪಿಲ್ ಸಿಬಲ್ ಬೆಂಗಳೂರಿಗೆ ಆಗಮಿಸುತ್ತಿದ್ದು, ಅನರ್ಹರ ಪ್ರಕರಣ ಕುರಿತು ನ್ಯಾಯಾಲಯದಲ್ಲಿನ ಬೆಳವಣಿಗೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಉಪ ಚುನಾವಣೆ ಮುಂದೂಡುವಂತೆ ಅನರ್ಹರ ಪರ ಮುಖುಲ್ ರೋಹಟಗಿ ಮನವಿ ಮಾಡಿದ್ದರು. ಕೋರ್ಟ್ ಕೂಡ ಅವರ ಮನವಿಗೆ ಸ್ಪಂದಿಸಿದೆ. ಆದರೆ ನಾವು ಕೂಡ ನಮ್ಮದೇ ವಿಚಾರವನ್ನು ನ್ಯಾಯಪೀಠದ ಮುಂದಿಟ್ಟು ಉಪಚುನಾವಣೆ ಮುಂದೂಡದಂತೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

   ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ತೀರ್ಪು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ಅನರ್ಹ ಶಾಸಕರ ಅರ್ಜಿ ಕುರಿತಾದ ತೀರ್ಪನ್ನು ಸುಪ್ರೀಂ ತೀರ್ಪು ಮುಂದೂಡಿದೆ. ಹೀಗಿರುವಾಗ ಚುನಾವಣೆ ಮುಂದೂಡಲು ಸಾಧ್ಯವಿಲ್ಲ. 13 ರಂದು ಕೋರ್ಟ್ ತೀರ್ಪು ಪ್ರಕಟಿಸಬಹುದು ಎಂದರು.

     ಕಾಂಗ್ರೆಸ್ ಪಕ್ಷ ಶಾಸಕರನ್ನು ಬೆಳೆಸಿತ್ತು. ಅವರ ಬೆಳವಣಿಗೆಗೆ ಪಕ್ಷದ ಲಕ್ಷಾಂತರ ಕಾರ್ಯಕರ್ತರು ದುಡಿದಿದ್ದರು. ಆದರೆ ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ನಮ್ಮ ಶಾಸಕರನ್ನು ಖರೀದಿಸಿದ್ದಾರೆ. ಆದರೆ ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದು ಅನುಮಾನ. ನ್ಯಾಯಾಲಯ ತೀರ್ಪು ಹೇಗಿರುತ್ತದೆಯೋ ಗೊತ್ತಿಲ್ಲ. ತಮ್ಮನ್ನು ಬೆಳೆಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿ ಹೋದವರಿಗೆ ಬಿಜೆಪಿ ತಕ್ಕಪಾಠ ಕಲಿಸಿದೆ ಎಂದು ಅನರ್ಹ ಶಾಸಕರನ್ನು ಕುಟುಕಿದರು.

      ಅನರ್ಹರ ಕ್ಷೇತ್ರಗಳಿಗೆ ಸರ್ಕಾರದಿಂದ ಹೆಚ್ಚು ಅನುದಾನ ನೀಡಿರುವ ಹಾಗೂ ಪ್ರತಿಪಕ್ಷ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿರುವ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ನಗರೋತ್ತಾನ ಯೋಜನೆಯಲ್ಲಿ ತಾರತಮ್ಯ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರಾದ ಕೆಲಸಗಳಿಗೆ ತಡೆ ನೀಡುವುದು, ಯೋಜನೆಗಳನ್ನು ಹಿಂಪಡೆಯುವುದನ್ನು ಸರ್ಕಾರ ಮಾಡುತ್ತಿದೆ. ದ್ವೇಷದ ರಾಜಕೀಯ ಮಾಡುವುದಿಲ್ಲ ಎಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದ ದಿನದಿಂದಲೂ ಮಾಡುತ್ತಿರುವುದು ಬರೀ ದ್ವೇಷದ ರಾಜಕಾರಣವನ್ನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಯಡಿಯೂರಪ್ಪ ಅವರಿಗೆ ಅಧಿಕಾರದ ದಾಹ ಹೆಚ್ಚಾಗಿದೆ. ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಿ ಅಧಿಕಾರದಲ್ಲಿ ಮುಂದುವರೆಯುವುದಷ್ಟೇ ಇವರ ಗುರಿಯಾಗಿದೆ. ಯಡಿಯೂರಪ್ಪ ಹಾಗೂ ಬಿಜೆಪಿಯ ನಾಯಕರಿಗೆ ನೆರೆ ಸಂತ್ರಸ್ಥರ ಬಗ್ಗೆ ಕಾಳಜಿಯೇ ಇಲ್ಲ. ಅಧಿಕಾರ, ಹಣ ಮಾಡುವುದಷ್ಟೇ ಬಿಜೆಪಿ ನಾಯಕರ ಉದ್ದೇಶವಾಗಿದೆ. ಇಂತಹ ದುರ್ಗತಿ ರಾಜ್ಯಕ್ಕೆ ಹಿಂದೆಂದೂ ಬಂದಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

     ಯಡಿಯೂರಪ್ಪ ಅವರನ್ನು ಕಂಡರೆ ಬಿಜೆಪಿಯ ನಾಯಕರಿಗೆ ಅಷ್ಟಕಷ್ಟೆ. ಕೇಂದ್ರದ ನಾಯಕರಿಗೂ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಲ್ಲ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೂ ಸಹ ಯಡಿಯೂರಪ್ಪ ಅವರನ್ನು ಕಂಡರೆ ಆಗಿಬರುವುದಿಲ್ಲ. ಅನರ್ಹರ ಪರ ಓಲೈಸುವುದನ್ನು ಹೊರತಪಡಿಸಿ ಮುಖ್ಯಮಂತ್ರಿಗೆ ಬೇರೆ ದಾರಿಯಿಲ್ಲ. ಒಂದು ಕಡೆ ಬಂಡಾಯ ಎದ್ದಿರುವ ಪಕ್ಷದ ಶಾಸಕರನ್ನು ಸಮಾಧಾನ ಮಾಡಲೂ ಅವರಿಂದಾಗುತ್ತಿಲ್ಲ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಡಿಯೂರಪ್ಪ ಅವರನ್ನು ದೂರವಿಟ್ಟು ತಮ್ಮದೇ ಆದ ಪ್ರತ್ಯೇಕ ತಂಡ ಕಟ್ಟಿಕೊಂಡಿದ್ದಾರೆ. ಇದೆಲ್ಲವನ್ನು ನೋಡಿದರೆ ರಾಜ್ಯದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ದಿನೇಶ್ ಗುಂಡೂರಾವ್ ಭವಿಷ್ಯ ನುಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link