ಅತಿವೇಗ ಮತ್ತು ಅಜಾಗರೂಕತೆಗೆ ಕಟ್ಟುನಿಟ್ಟಿನ ಕಾನೂನು ಕ್ರಮ : ಮಂಜುನಾಥ

ಕೊರಟಗೆರೆ

   ಆಟೋಚಾಲಕರು ಸಾರಿಗೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಅಪಘಾತ ತಡೆಗೆ ಸಹಕರಿಸಬೇಕು. ಅತಿವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡುವ ಆಟೋಚಾಲಕರ ವಿರುದ್ದ ಪೋಲೀಸ್ ಇಲಾಖೆ ಕಟ್ಟುನಿಟ್ಟಿನ ಕಾನೂನು ಕೈಗೊಳ್ಳಲಿದೆ ಎಂದು ಕೊರಟಗೆರೆ ಆರಕ್ಷಕ ವೃತ್ತಉಪನಿರೀಕ್ಷಕ ಬಿ.ಸಿ.ಮಂಜುನಾಥ ಎಚ್ಚರಿಕೆ ನೀಡಿದರು.

   ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಪೋಲೀಸ್ ಇಲಾಖೆ ಮತ್ತು ಆಟೋಚಾಲಕರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸಾರಿಗೆ ನಿಯಮದ ಅರಿವು ಕಾರ್ಯಕ್ರಮ ಹಾಗೂ ಅಪಘಾತ ತಡೆಗೆ ಮುಂಜಾಗ್ರತಾ ಕ್ರಮದ ಸಭೆಯನ್ನು ಕುರಿತು ಮಾತನಾಡಿದರು.

    ಸಾರ್ವಜನಿಕ ಸೇವೆಗೆ ಸದಾ ಸಿದ್ದರಿರುವ ಆಟೋ ಚಾಲಕರು ವಾಹನ ಚಲಾಯಿಸುವ ವೇಳೆ ಕಡ್ಡಾಯವಾಗಿ ಖಾಕಿ ಬಟ್ಟೆಯನ್ನು ಧರಿಸಬೇಕು. ಆಟೋ ಮತ್ತು ವಿಮಾ ದಾಖಲೆ ಸೇರಿ ಚಾಲನಾ ಪರವಾನಗಿ ತಮ್ಮ ಜೊತೆಯಲ್ಲಿರಲಿ. ರಸ್ತೆಯಲ್ಲಿ ಅಪಘಾತ ಆದ ವೇಳೆ ತಕ್ಷಣ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿ. ಸಮಯ ಪ್ರಜ್ಞೆ ಮೆರೆದು ಗಾಯಗೊಂಡ ವ್ಯಕ್ತಿಗಳಿಗೆ ಸಹಾಯ ಮಾಡಿ ಎಂದು ತಿಳಿಸಿದರು.

    ಕಾನೂನನ್ನು ನೀವು ಗೌರವಿಸಿದರೆ ಕಾನೂನು ನಿಮ್ಮನ್ನು ಗೌರವಿಸಲಿದೆ. ಪಟ್ಟಣದ ಆಸ್ಪತ್ರೆ, ಶಾಲಾ, ಕಾಲೇಜು ಬಳಿ ಆಟೋಚಾಲಕರು ಅವೈಜ್ಞಾನಿಕವಾಗಿ ಶಬ್ದ ಮಾಲಿನ್ಯ ಮಾಡಬಾರದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹಿಳಾ ಪಡೆಯನ್ನು ರಚಿಸಲಾಗಿದೆ. ಅನುಚಿತ ವರ್ತನೆ ಮಾಡಿದರೆ ಕ್ಷಣಾರ್ಧದಲ್ಲಿ ಅಂತಹ ಸ್ಥಳಕ್ಕೆ ಬಂದು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಕೊರಟಗೆರೆ ಆಟೋಚಾಲಕರ ಸಂಘದ ಅಧ್ಯಕ್ಷ ಆಟೋಕುಮಾರ್ ಮಾತನಾಡಿ, ಪ್ರತಿನಿತ್ಯ ಹಗಲುರಾತ್ರಿ ಎನ್ನದೆ ಸಾರ್ವಜನಿಕರ ಸೇವೆ ಮಾಡುವ ಆಟೋಚಾಲಕರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿಯಿದೆ. ಅತಿವೇಗ ಮತ್ತು ಅಜಾಗರೂಕತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಕುಟುಂಬದ ಜವಾಬ್ದಾರಿ ಇರುವ ನೀವು ಎಚ್ಚರಿಕೆಯಿಂದ ಆಟೋ ಚಾಲನೆ ಮಾಡಿ ಸಾರಿಗೆ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.

     ಕಾನೂನು ಅರಿವು ಸಭೆಗೆ ಕೊರಟಗೆರೆ ಪಟ್ಟಣ, ವಡ್ಡಗೆರೆ, ಗೊರವನಹಳ್ಳಿ, ಜಿ.ನಾಗೇನಹಳ್ಳಿ, ಬುಕ್ಕಾಪಟ್ಟಣ, ಜಂಪೇನಹಳ್ಳಿ , ಕಾಲನಿ, ತಣ್ಣೇನಹಳ್ಳಿ, ಬೋಡಬಂಡೇನಹಳ್ಳಿ, ತುಂಬಾಡಿ, ದಾಸರಹಳ್ಳಿ ವ್ಯಾಪ್ತಿಯ ನೂರಾರು ಆಟೋಚಾಲಕರು ಆಗಮಿಸಿದ್ದರು . ಸಭೆ ಮುಗಿದ ಬಳಿಕ ಆಟೋಚಾಲಕರ ಸಂಘದಿಂದ ಕಾನೂನಿನ ಅರಿವು ಮೂಡಿಸಿದ ಪಿಎಸ್‍ಐ ಮಂಜುನಾxರನ್ನು ಸನ್ಮಾನಿಸಿ ಗೌರವಿಸಲಾಯಿತು.

     ಸಭೆಯಲ್ಲಿ ಪೊಲೀಸ್ ಇಲಾಖೆಯ ಮಲ್ಲಿಕಾರ್ಜುನ್, ಸದಾನಂದ, ಆಟೋಚಾಲಕರಾದ ಪುಟ್ಟಣ್ಣ, ಪ್ರಕಾಶ್, ರಾಮಲಿಂಗ, ಗೋಪಿನಾಥ್, ನಾಗರಾಜು, ಮಂಜುನಾಥ, ಶಾಂತಕುಮಾರ, ದೊಡ್ಡಪ್ಪ, ಮಹೇಶ, ಮಲ್ಲೇಶ್, ಮೂರ್ತಿ, ಕೃಷ್ಣಪ್ಪ, ಕಿರಣಕುಮಾರ್, ಮಲ್ಲೇಶಪ್ಪ, ಉಮೇಶ, ಗೋವಿಂದರಾಜು, ನಟರಾಜು, ಉಮಾಶಂಕರ ಸೇರಿದಂತೆ ನೂರಾರು ಆಟೋ ಚಾಲಕರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link