ಜಿಲ್ಲಾ ಕಾಂಗ್ರೆಸ್‍ನಲ್ಲಿ ಅಸಮಧಾನದ ಹೊಗೆ…!

ಚಿತ್ರದುರ್ಗ:

       ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್‍ನಲ್ಲಿ ಮತ್ತೆ ಅಸಮಧಾನದ ಹೊಗೆ ಕಾಣಿಸುತ್ತಿದೆ. ಗುಂಪುಗಾರಿಕೆ, ಪ್ರತಿಷ್ಠೆ ಮತ್ತು ಜಾತಿಕಾರಣಕ್ಕಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಈ ಮೊದಲೇ ನೆಲಕಚ್ಚಿದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲೂ ಹಿನಾಯ ಸೋಲು ಕಂಡಿದೆ.

       ಇಲ್ಲಿ ಒಬ್ಬರಿಗೊಬ್ಬರು ಆಗದಂತಹ ವಾತಾವರಣ ಸೃಷ್ಠಿಯಾಗಿದ್ದು, ಇನ್ನೂ ಮೀಸೆ ಮೂಡದ ಯುವಕರು, ಪಕ್ಷದೊಳಗಿದ್ದು ಬೇರೊಂದು ಪಕ್ಷದ ಬಗ್ಗೆ ಹೆಚ್ಚಿನ ಒಲವು ತೋರುವ ಹಾಗೂ ಪಕ್ಷದಿಂದ ಅಧಿಕಾರ ಅನುಭವಿಸಿ ಕೊನೆಗೆ ಪಕ್ಷಕ್ಕೆ ವಿರುದ್ದವಾಗಿ ನಡೆದುಕೊಂಡವರು ಇಲ್ಲಿ ನಾವೇ ನಾಯಕರು ಎನ್ನುವಂತೆ ಪ್ರತಿಬಿಂಬಿಸಿಕೊಳ್ಳುವವರೂ, ಪ್ರಚಾರಕ್ಕಾಗಿ ಮುಗಿಬೀಳುವ ಹೀಗೆ ತರಾವರಿಯ ನಾಯಕರು, ಕಾರ್ಯಕರ್ತರುಗಳಿಂದಾಗಿ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

      ರಾಜ್ಯ ಮತ್ತು ಕೇಂದ್ರದಲ್ಲಿಯೂ ಪಕ್ಷಕ್ಕೆ ಭಾರೀ ಹಿನ್ನಡೆಯುಂಟಾದ ಕಾರಣದಿಂದಾಗಿ ವರಿಷ್ಟರು ನಾಯಕತ್ವ ಬದಲಾವಣೆಗೆ ಮುಂದಾಗಿದೆ. ಜಿಲ್ಲೆಯಲ್ಲಿಯೂ ಈಗಾಗಲೇ ನಾಯಕತ್ವ ಬದಲಾವಣೆಯಾಗಿದ್ದು, ಅಧಿಕಾರ ಕೈಗೆ ಸಿಗುವ ಮುನ್ನವೇ ಪಕ್ಷದಲ್ಲಿ ದೊಡ್ಡಮಟ್ಟದಲ್ಲಿ ಅಸಮಧಾನ ಕಾಣಿಸಿಕೊಂಡಿದೆ.

      ನಾಯಕರುಗಳ ಪ್ರತಿಷ್ಠೆಯಿಂದಾಗಿ ಮನೆಯೊಂದು ಮೂರು ಬಾಗಿಲು ಎನ್ನುವ ಸ್ಥಿತಿ ಈ ಪಕ್ಷದ್ದು. ಇಂತವೊತ್ತಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯಾಗಿದೆ. ಅಲ್ಪಸಂಖ್ಯಾತರಿಗೆ ಇಲ್ಲಿ ಪಕ್ಷದ ಜವಾಬ್ದಾರಿ ನೀಡಿರುವ ವರಿಷ್ಟರು, ಅದರ ಬೆನ್ನಲೇ ಮತ್ತೊಂದು ಕಾರ್ಯಾದ್ಯಕ್ಷರ ಹುದ್ದೆ ಸೃಷ್ಟಿಸಿ ಆ ಹುದ್ದೆಗೆ ಯಾದವ ಸಮಾಜಕ್ಕೆ ಸೇರಿದ ಶಿವುಯಾದವ್ ಅವರನ್ನು ನೇಮಕ ಮಾಡಿದ್ದಾರೆ.

     ಈ ಬೆಳವಣಿಗೆಯಿಂದ ಕಾರ್ಯಕರ್ತರಲ್ಲಿ ಭವಿಷ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಕೋಟೆ ನಿರ್ಮಾಣವಾಗಬಹುದೆನ್ನುವ ಸಣ್ಣದೊಂದು ಭರವಸೆ ಹುಟ್ಟಿಕೊಂಡಿತ್ತು. ಆದರೆ ಕಳೆದ ವಾರದಿಂದ ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿರಾಸೆ ಮೂಡಿಸಿದೆ. ನಾನಾ ಕಾರಣಗಳಿಂದ ಒಡೆದ ಮನೆಯಂತಾದ ಕಾಂಗ್ರೇಸ್‍ನ ಯಜಮಾನಿಕೆಗಾಗಿ ತರಾವರಿಯ ಕಸರತ್ತು ಕೂಡ ನಡೆದಿತ್ತು. ಜಿಲ್ಲಾಧ್ಯಕ್ಷರ ಹುದ್ದೆಗೆ ಸಮರ್ಥರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪಕ್ಷದ ವರಿಷ್ಠರು ವೀಕ್ಷಕರನ್ನು ಕಳುಹಿಸಿ ವರದಿ ತರಿಸಿಕೊಂಡಿದ್ದರು. ವೀಕ್ಷಕರು ಬೇಟಿ ನೀಡಿದ್ದ ವೇಳೆ ಸುಮಾರು 25ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು.

     ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರುಗಳು, ಹಿರಿಯ ಮುಖಂಡರುಗಳು ಸೇರಿದಂತೆ ಹಲವರು ತಮ್ಮ ನಾಯಕರುಗಳ ಮೂಲಕ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದರು. ಅಂತಿಮವಾಗಿ ವರಿಷ್ಠರು ಎಂ.ಕೆ.ತಾಜ್‍ಪೀರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ನೀಡಿದ್ದರು. ಇದಾದ ಮೂರೇ ದಿನಕ್ಕೆ ಜಿಲ್ಲಾ ಕಾಂಗ್ರೆಸ್ ಕಾರ್ಯಾದ್ಯಕ್ಷರನ್ನಾಗಿ ಶಿವುಯಾದವ್ ಅವರನ್ನು ಕೆಪಿಸಿಸಿ ನೇಮಿಸಿತು

ಕಾರ್ಯಕರ್ತರ ವಿರೋಧ

      ಜಿಲ್ಲಾ ಕಾಂಗ್ರೆಸ್ ಕಾರ್ಯದ್ಯಕ್ಷರ ಹುದ್ದೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಲ್ಲ. ಚಿತ್ರದುರ್ಗ ಜಿಲ್ಲೆಗೆ ಮಾತ್ರ ವಿಶೇಷವಾಗಿ ಸೃಷ್ಠಿಸಿರುವುದು ಏಕೆ ಎನ್ನುವ ಪ್ರಶ್ನೆ ಬಹುತೇಕ ಕಾರ್ಯಕರ್ತರು ಎತ್ತಿದ್ದಾರೆ. ಕಾರ್ಯಾದ್ಯಕ್ಷ ಹುದ್ದೆಯನ್ನು ರದ್ದು ಪಡಿಸಬೇಕು ಇಲ್ಲವೇ ಇನ್ನೂ ಕನಿಷ್ಟ ನಾಲ್ಕು ಮಂದಿಗೆ ಇದೇ ಹುದ್ದೆ ನೀಡಬೇಕು ಎನ್ನುವ ಬೇಡಿಕೆಯನ್ನು ಹಿರಿಯ ಮುಖಂಡರು ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಬೇಡಿಕೆಯಾಗಿದೆ

      ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು ಅವರಿಗೆ ಹಲವು ಮಂದಿ ಮುಖಂಡರು ಜಿಲ್ಲೆಯಲ್ಲಿ ಕಾರ್ಯಾದ್ಯಕ್ಷ ಹುದ್ದೆ ಬೇಡ. ಮಾಡುವುದಾರೆ ಇನ್ನೂ ನಾಲ್ಕು ಮಂದಿಗೆ ನೇಮಕ ಮಾಡಲು ಹೈಕಮಾಂಡ್ ಮೇಲೆ ಒತ್ತಡ ಹಾಕಬೇಕು ಎನ್ನುವ ಮನವಿಯನ್ನು ಸಲ್ಲಿಸಿದರು

     ಜಿಲ್ಲೆಯಲ್ಲಿ ನಾನಾ ಕಾರಣಗಳಿಂದ ಕಾಂಗ್ರೆಸ್ ಭಾರೀ ಹಿನ್ನಡೆಯಾಗಿದೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಪಕ್ಷಕ್ಕೆ ನಿಷ್ಟೆಯಿಂದ ದುಡಿದಿರುವ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಮನ್ನಣೆ ಸಿಗಬೇಕು. ಅದಕ್ಕಾಗಿ ಈ ಬದಲಾವಣೆ ಅನಿವಾರ್ಯ ಎಂದು ಪಟ್ಟು ಹಿಡಿದರು

    ಜೊತೆಗಿದ್ದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಕಾರ್ಯಕರ್ತರಿಗೆ ಸಮಾಧಾನ ಪಡಿಸಿದರು. ಇದು ಕಾಂಗ್ರೆಸ್ ಪಕ್ಷದ ತೀರ್ಮಾನ.ಯಾವುದೇ ಅಸಮಧಾನವಿದ್ದರೆ ಬಹಿರಂಗವಾಗಿ ಚರ್ಚೆ ಮಾಡುವುದು ಬೇಡ. ಕಾರ್ಯಕರ್ತರ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ರಘುಮೂರ್ತಿ ಹಾಗೂ ಮಂಜುಳಾ ನಾಯ್ಡು ಹೇಳಿದರು

     ಮುಖಂಡರಾದ ಡಿ.ಟಿ.ವೆಂಕಟೇಶ್, ಜಿ.ಎಸ್.ಕುಮಾರ್ ಗೌಡ, ಮಹಿಳಾ ಕಾಂಗ್ರೆಸ್‍ನ ಮೀನಾಕ್ಷಿ, ನಜ್ಮತಾಜ್, ಮೋಕ್ಷಾ, ನಾಗರಾಜ್, ಎಂ.ಅಜ್ಜಪ್ಪ, ಲಕ್ಷ್ಮಿಕಾಂತ್, ರಾಜಪ್ಪ, ಮರುಳಾರಾಧ್ಯ, ಅಂಜಿನಪ್ಪ, ಅಪ್ಸರ್ ಕರೀಂ,ಶಬ್ಬೀರ್, ಇನ್ನಿತರರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link