ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ

       ಕನಕ ಶಾಖಾ ಮಠದ ಶ್ರೀ ಈಶ್ವರಾನಂದ ಸ್ವಾಮೀಜಿ ಅವರನ್ನು ಏಕವಚನದಲ್ಲಿ ನಿಂಧಿಸಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಹಾಲುಮತ ಮಹಾಸಭಾ ಪದಾಧಿಕಾರಿಗಳು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು
ಇಲ್ಲಿನ ನೀಲಕಂಠೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಮಾಧುಸ್ವಾಮಿ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು. ಮೆರವಣಿಗೆಯ ಉದ್ದಕ್ಕೂ ಮಾಧುಸ್ವಾಮಿ ವಿರುದ್ದ ಘೋಷಣೆಗಳನ್ನು ಕೂಗಿದರು

     ಹುಳಿಯಾರಿನ ಕನಕ ವೃತ್ತದ ನಾಮಫಲಕ ತೆರವುಗೊಳಿಸಿದ ಹಿನ್ನೆಲೆ ಹಾಲಮತ ಸಮಾಜದ ಈಶ್ವರಾನಂದ ಸ್ವಾಮೀಜಿ ನೇತೃತ್ವದಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಸಚಿವರು ಈ ಸಭೆಯಲ್ಲಿ ಶ್ರೀಗಳನ್ನು ಏಕವಚನದಲ್ಲಿ ಸಂಬೋಧಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು

     ಕೂಡಲೇ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಸಿಎಂ ಬಿ.ಎಸ್. ಯಡಿಯೂರಪ್ಪ ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ತಪ್ಪಿದಲ್ಲಿ ಅವರು ಭಾಗವಹಿಸುವ ಎಲ್ಲ ಸಭೆಗೂ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

      ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ಸಚಿವರಾದಂತಹ ಜೆ.ಸಿ.ಮಾಧುಸ್ವಾಮಿ ಅವರು ಜನರಿಂದ ಆಯ್ಕೆಯಾಗಿ ಸಚಿವರಾಗಿದ್ದಾರೆ. ಸಚಿವ ಸ್ಥಾನದಲ್ಲಿ ಇರುವ ವ್ಯಕ್ತಿ ತಾಳ್ಮೆಯಿಂದ ಜನರ ಮಾತುಗಳಿಗೆ ಸ್ಪಂದಿಸಬೇಕು. ಆದರೆ ತುಮಕೂರು ಜಿಲ್ಲೆಯ ಹುಳಿಯಾರ್ ನಲ್ಲಿ ಶ್ರೀ ಕನಕದಾಸರ ಸರ್ಕಲ್ ಬಗ್ಗೆ ಗೊಂದಲ ಬಗೆಹರಿಸುವ ಶಾಂತಿ ಸಭೆಯಲ್ಲಿ ಒಂದು ಕೋಮಿನ ಪರ ವಹಿಸಿ ತಮ್ಮ ಕರ್ತವ್ಯವನ್ನು ಮರೆತು ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಏರುಧ್ವನಿಯಲ್ಲಿ ಏಕವಚನದಲ್ಲಿ ನಿಂದಿಸಿ ಪ್ರಮಾದ ಎಸಗಿರುವುದು ಖಂಡನೀಯ ಎಂದು ಅಸಮಧಾನ ವ್ಯಕ್ತಪಡಿಸಿದ್ದರು.

     ಘಟನೆ ಕುರಿತು ಸಮಾಜದ ಬಂದುಗಳು ಸಚಿವರನ್ನು ದೂರವಾಣಿ ಮೂಲಕ ಸ್ವಷ್ಟಿಕರಣ ಕೇಳಿದಾಗಲೂ ಸಹ ತಾನು ಒಂದು ಸಮಾಜದ ನಾಯಕ ಬೇರೆ ಸಮಾಜದವರ ನನಗೆ ಲೆಕ್ಕಕ್ಕಿಲ್ಲ ಎಂಬಂತೆ ಉದ್ದಟತನದಿಂದ ಮಾತುಗಳನ್ನು ಆಡಿದ್ದಾರೆ. ಎಲ್ಲಾ ಸಮಾಜದವರ ಮತಗಳಿಂದ ಆಯ್ಕೆಯಾಗಿರುವ ಸಚಿವರು ಸರ್ವರನ್ನು ಸಮಾನತೆಯಿಂದ ಕಾಣುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿ ಇದೀಗ ಜಾತಿ ಜಾತಿಗಳ ಮಧ್ಯೆ ದ್ವೇಷವೆಂಬ ವಿಷ ಬೀಜವನ್ನು ಬಿತ್ತಿ ಸಮಾಜದ ಸಾಮರಸ್ಯವನ್ನು ಕದಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

      ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿರುವ ಜೆ.ಸಿ.ಮಾಧುಸ್ವಾಮಿ ಅವರನ್ನು ರಾಜ್ಯಪಾಲರು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಟಿ.ಜಗದೀಶ್, ನಿಶಾನಿ ಶಂಕರ್, ಮಂಜಪ್ಪ, ಎಂ.ಜೆ.ರಾಘವೇಂದ್ರ ಅಣ್ಣಪ್ಪ, ರವೀಂದ್ರ, ಶ್ರೀನಿವಾಸ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap