ಬೀದಿ ವ್ಯಾಪರಿಗಳ ಸಂರಕ್ಷಣೆ ಸರ್ಕಾರದ ಕರ್ತವ್ಯ

ದಾವಣಗೆರೆ:

     ಬೀದಿ ವ್ಯಾಪಾರಿಗಳಿಗೆ ಕಾನೂನಿನ ರಕ್ಷಣೆ ನೀಡಿ, ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕಾಗಿರುವುದು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಮತ್ತು ಸರ್ಕಾರದ ಕರ್ತವ್ಯವಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ ತಿಳಿಸಿದರು.

     ನಗರದ ರೋಟರಿ ಬಾಲ ಭವನದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ್ಲಂ ಜನಾಂದೋಲನ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಬೀದಿ ವ್ಯಾಪಾರಿಗಳ ಅಧಿನಿಯಮ-2014ರ ಕುರಿತು ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      ನಗರ ಪ್ರದೇಶಗಳಲ್ಲಿನ ಬೀದಿ ವ್ಯಾಪಾರಿಗಳ ಹಕ್ಕು ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ಚಟುವಟಿಕೆಗಳನ್ನು ನಿಯಂತ್ರಿಸಲು ಬೀದಿ ವ್ಯಾಪಾರಿಗಳ ಅಧಿನಿಯಮ-2014 ಅಸ್ತಿತ್ವದಲ್ಲಿದೆ. ಇತ್ತೀಚೆಗೆ ಇದಕ್ಕೆ ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ. ಈ ಕಾಯ್ದೆಯಡಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸುವುದು ಮತ್ತು ಅವರನ್ನು ಒಕ್ಕಲೆಬ್ಬಿಸದಂತೆ ರಕ್ಷಣೆ ನೀಡಲಾಗಿದೆ ಎಂದರು.

      ಸ್ಥಳೀಯ ಸಂಸ್ಥೆಗಳು ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ, ಅವರ ವ್ಯಾಪಾರಕ್ಕೆ ಅನುಕೂಲ ಆಗುವಂತೆ ವ್ಯಾಪಾರದ ಪ್ರಮಾಣಪತ್ರ ನೀಡುವುದರ ಜೊತೆಗೆ ಅವರಿಗೆ ರಕ್ಷಣೆ ನೀಡಿ, ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದ ಅವರು, ಪ್ರತಿಯೊಬ್ಬರು ಕಾನೂನು ತಿಳಿದುಕೊಳ್ಳುವುದರ ಮೂಲಕ ಅನ್ಯಾಯಗಳ ವಿರುದ್ಧ ಹೋರಾಡಿ ನ್ಯಾಯ ಪಡೆಯಬೇಕೆಂದು ಕಿವಿಮಾತು ಹೇಳಿದರು.

     ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್.ಬಡಿಗೇರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಒಬ್ಬರನ್ನೊಬ್ಬರು ಗೌರವಿಸುವುದರ ಮೂಲಕ ಸುಸ್ಥಿರ ಮತ್ತು ಶಾಂತಿಯುತ ಸಮಾಜ ಕಟ್ಟಲು ಶ್ರಮಿಸಬೇಕು, ಇಡೀ ದಿನ ತಮ್ಮ ಜೀವನ ನಿರ್ವಹಣೆಗಾಗಿ ದುಡಿಯುವ ಬೀದಿ ವ್ಯಾಪಾರಿಗಳ ಸಂರಕ್ಷಣೆ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಪ್ರಗತಿಪರ ಕಾಯ್ದೆಯನ್ನು ಜಾರಿಗೆ ತಂದಿದ್ದು, ಕಾಯ್ದೆಯಡಿಯಲ್ಲಿ ಬೀದಿ ವ್ಯಾಪಾರಿಗಳ ಸರ್ವತೋಮುಖ ಅಭಿವೃದ್ಧಿಗೆ ನಿಯಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

    ಪ್ರಾಸ್ತಾವಿಕ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಬೀದಿ ವ್ಯಾಪಾರ ಜನರ ಹಕ್ಕಾಗಿದ್ದು, ಉದ್ಯೋಗವಂಚಿತ ಜನರು ತಮ್ಮ ಜೀವನೋಪಾಯಕ್ಕಾಗಿ ಬೀದಿ ವ್ಯಾಪಾರ ಅವಲಂಬಿಸುವುದು ಅನಿವಾರ್ಯವಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ.20ರಷ್ಟು ಜನ ತಮ್ಮ ಜೀವನ ನಿರ್ವಹಣೆಗೆ ಬೀದಿ ವ್ಯಾಪಾರವನ್ನೇ ಅವಲಂಬಿಸಿದ್ದಾರೆ. ಬೀದಿ ವ್ಯಾಪಾರಿಗಳ ವಿರುದ್ಧ ದೌರ್ಜನ್ಯ ಎಸಗುವುದು ಕಾಯ್ದೆಯ ಪ್ರಕಾರ ಅಕ್ಷಮ್ಯವಾಗಿದೆ ಎಂದರು.

   ಬೀದಿ ವ್ಯಾಪಾರಿಗಳ ಅಧಿನಿಯಮದಡಿಯಲ್ಲಿ ವ್ಯಾಪಾರಿಗಳ ಹಕ್ಕುಗಳನ್ನು ಚಲಾಯಿಸಲು, ತಡೆಯೊಡ್ಡಲು ಯಾವುದೇ ಪ್ರಾಧಿಕಾರ ಮತ್ತು ಸರ್ಕಾರದ ಇಲಾಖೆಗಳಿಗೆ ಅನುಮತಿ ನೀಡಲಾಗಿಲ್ಲ. ಬೀದಿ ವ್ಯಾಪಾರಿಗಳಿಗೆ ಸಹಾಯಧನ, ವಸತಿ ಮತ್ತು ಅವರ ಅಭಿವೃದ್ಧಿಗಾಗಿ ಅಧಿನಿಯಮದಡಿಯಲ್ಲಿ ಹಲವು ನಿಯಮಗಳನ್ನು ರೂಪಿಸಲಾಗಿದ್ದು, ಅರಿವಿನ ಕೊರತೆಯಿಂದ ಬೀದಿವ್ಯಾಪಾರಿಗಳು ತಮಗಿರುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಲಾಗಿಲ್ಲ. ಆದ್ದರಿಂದ ಅವರಿಗೆ ಕಾನೂನಿನ ಅರಿವು ಮೂಡಿಸುವುದು ಅತ್ಯವಶ್ಯ ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್‍ಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ ಕಾರ್ಯದರ್ಶಿ ಮಹ್ಮದ್ ಮೋಸಿನ್, ಸಂಚಾಲಕಿ ರೇಣುಕಾ ಯಲ್ಲಮ್ಮ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಸ್. ಲಿಂಗರಾಜ್, ಕೆಎಸ್‍ಡಿಬಿ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಲ್.ಆನಂದಪ್ಪ, ಬೆಂಗಳೂರಿನ ಜನಸಹಯೋಗದ ಯೋಜನಾ ನಿರ್ದೇಶಕಿ ಕಾವೇರಿ, ಸ್ಲಂ ಜನಾಂದೋಲನ ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ್ ಆರ್. ಮಾನ್ವಿ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶಬ್ಬೀರ್ ಸಾಬ್, ಯಾಸ್ಮೀನ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link