ಹುಳಿಯಾರು:
ಹುಳಿಯಾರು ಪಪಂ ವ್ಯಾಪ್ತಿಯ ತಿಮ್ಲಾಪುರ ಕೋಡಿಗೆ ನೀರು ಸರಬರಾಜು ಮಾಡುವ ಕೊಳವೆ ಬಾವಿಯ ಮೋಟ್ರು ಕೆಟ್ಟು 15 ದಿನಗಳಾದರೂ ರಿಪೇರಿ ಮಾಡಿಸದೆ ನಿರ್ಲಕ್ಷ್ಯಿಸಿದ್ದ ಪಪಂ ಅಧಿಕಾರಿ ಪತ್ರಿಕೆಯ ವರದಿಯಿಂದ ಎಚ್ಚೆತ್ತುಕೊಂಡು ಮೋಟ್ರು ರೆಡಿ ಮಾಡಿಸಿ ಅಂತೂ 20 ದಿನಗಳ ನಂತರ ನೀರು ಕೊಟ್ಟಿದ್ದಾರೆ.
ಹುಳಿಯಾರು ಪಟ್ಟಣಕ್ಕೆ ಹತ್ತಾರು ವರ್ಷಗಳ ಕಾಲ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕೊಳವೆಬಾಯಿಯ ಅಂತರ್ಜಲ ಕಡಿಮೆಯಾದ ಪರಿಣಾಮ ಈ ಹಿಂದೆಯಿದ್ದ ಕೈ ಪಂಪು ತೆಗೆದು ಮೋಟರ್ ಬಿಟ್ಟು ಇರುವ ನೀರನ್ನು ಸಿಸ್ಟನ್ ಮೂಲಕ ತಿಮ್ಲಪುರ ಕೋಡಿಯ ನಿವಾಸಿಗಳಿಗೆ ನೀಡಲಾಗುತ್ತಿತ್ತು.
ಎರಡ್ಮೂರು ವರ್ಷ ಇಲ್ಲಿನ ನಿವಾಸಿಗಳು ನೀರಿನ ಸಮಸ್ಯೆಯಿಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ನಂತರ ಕೊಳವೆಬಾವಿಗೆ ಬಿಟ್ಟಿದ್ದ ಮೋಟರ್ ಕೆಡಲು ಆರಂಭವಾಯಿತು. ಗ್ರಾಪಂಗೆ ಎಷ್ಟು ಹೇಳಿದರೂ ಕೇಳದಿದ್ದಾಗ ಸ್ಥಳೀಯರೆ ಮನೆಗಿಷ್ಟು ಎಂದು ಹಣ ಹಾಕಿ ರೆಡಿ ಮಾಡಿಸಿ ಬಿಡುತ್ತಿದ್ದರು. ಹೀಗೆ ಮೂರ್ನಾಲ್ಕು ಬಾರಿ ರೆಡಿ ಮಾಡಿಸಿದ್ದರು.
ಈ ಮೋಟರು ಕಳೆದ 20 ದಿನಗಳ ಹಿಂದೆ ಪುನಃ ಕೆಟ್ಟಿತ್ತು. ಹೀಗೆ ಪದೇಪದೇ ರೆಡಿ ಮಾಡಿಸಿ ಸೋತಿರುವ ಸ್ಥಳೀಯರು ಪಟ್ಟಣ ಪಂಚಾಯ್ತಿಯವರೇ ಒಳ್ಳೆಯ ಕಡೆ ರೆಡಿ ಮಾಡಿಸಲಿ ಅಥವಾ ಮೋಟರ್ ಬದಲಾಯಿಸಲೆಂದು ಮನವಿ ಸಲ್ಲಿಸಿದರು. ಆದರೆ ಯಾರೊಬ್ಬರೂ ಇತ್ತ ಗಮನ ಹರಿಸದೆ ನಿರ್ಲಕ್ಷ್ಯಿಸಿದ ಪರಿಣಾಮ ನೀರಿನ ಹಾಹಾಕಾರ ಆರಂಭವಾಯಿತು.
ಮುಂಜಾನೆ ತ್ರಿಫೇಸ್ ಕರಂಟ್ ಕೊಟ್ಟಾಗ ಅಕ್ಕಪಕ್ಕದ ಜಮೀನಿಗೆ ಹೋಗಿ ಅಲ್ಲಿನ ಮಾಲೀಕರನ್ನು ಕಾಡಿಬೇಡಿ ನೀರು ತರುವ ಅನಿವಾರ್ಯತೆ ಸೃಷ್ಟಿಯಾಗಿತ್ತು, ಅವರೂ ಬಿಡದಿದ್ದರೆ ಮೂರ್ನಲ್ಕು ಕಿ.ಮೀ.ದೂರಕ್ಕೆ ಹೋಗಿ ನೀರನ್ನು ತರಬೇಕಿತ್ತು. ಒಟ್ಟಾರೆ ದಿನಬೆಳಗಾದರೆ ಇಲ್ಲಿನ ಮಹಿಳೆಯರಿಗೆ ನೀರು ತರುವುದೇ ಗೋಳಾಗಿ ಪರಿಣಮಿಸಿತ್ತು.
ಈ ಭಾಗದ ಜನರ ಧ್ವನಿಯಾಗಿ ಪತ್ರಿಕೆ ನೀರಿನ ಸಮಸ್ಯೆಯ ಬಗ್ಗೆ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಪತ್ರಿಕಾ ವರದಿ ದಿನವೇ ಕೆಟ್ಟು ಹೋಗಿದ್ದ ಮೋಟರ್ ಎತ್ತಿ ದುರಸ್ಥಿಗೆ ಕೊಟ್ಟಿದ್ದರು. ಸೋಮವಾರ ದುರಸ್ಥಿಯಾದ ಮೋಟರ್ ಕೊಳವೆಬಾವಿಗೆ ಬಿಟ್ಟು ಇಲ್ಲಿನ ಸಿಸ್ಟನ್ಗೆ ನೀರು ಬಿಟ್ಟರು. ಇದರಿಂದ ಕಳೆದ 20 ದಿನಗಳಿಂದ ನೀರಿಲ್ಲದೆ ಪರದಾಡಿದ ಇಲ್ಲಿನ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ