ಬೆಳಗುಂಬ ಗ್ರಾಪಂ: ಸದಸ್ಯನೇ ನೀರು ವಿತರಕ!

ಸದಸ್ಯತ್ವ -ನೌಕರಿ ವಜಾಗೊಳಿಸಲು ವರದಿ
ತುಮಕೂರು
      ಗ್ರಾಮ ಪಂಚಾಯಿತಿಯಲ್ಲಿ ನೀರು ಬಿಡುವ ಕೆಲಸ ಮಾಡುತ್ತಿದ್ದ ನೌಕರನೇ ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾಮ ಪಂಚಾಯಿತಿ ಸದಸ್ಯ ಆದ ಬಳಿಕವೂ ಎರಡೂ ಹುದ್ದೆಗಳನ್ನು ನಿಭಾಯಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕಾನೂನಿನ ಪ್ರಕಾರ ಇದು ಅಕ್ರಮವೆಂಬುದು ಬಯಲಾಗಿರುವ ಹಿನ್ನೆಲೆಯಲ್ಲಿ ಆತನನ್ನು ನೀರು ಬಿಡುವ ಕೆಲಸದಿಂದ ವಜಾ ಮಾಡಿ, ಆತನ ಸದಸ್ಯತ್ವ ರದ್ದುಗೊಳಿಸಲು ವರದಿ ಸಲ್ಲಿಸಿರುವ ಅಪರೂಪದ ಬೆಳವಣಿಗೆಯೊಂದು ವರದಿಯಾಗಿದೆ. 
     ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಈ ಪ್ರಕರಣ ನಡೆದಿದ್ದು, ಮಾರನಾಯಕನಪಾಳ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಎಂ.ಎಸ್. ಲೋಕೇಶ್ ಎಂಬ ಗ್ರಾ.ಪಂ. ಸದಸ್ಯ ಈಗ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.
     ಇವರು ಗ್ರಾಮ ಪಂಚಾಯಿತಿಯಲ್ಲಿ ನೀರು ಬಿಡುವ ಕೆಲಸ ಮಾಡುತ್ತಿದ್ದು ಅದಕ್ಕೆ ಪ್ರತಿ ತಿಂಗಳೂ ಗ್ರಾ.ಪಂ.ನಿಂದ ಅಧಿಕೃತವಾಗಿ ವೇತನ ಪಡೆಯುತ್ತಿದ್ದಾರೆ. ಈ ಮಧ್ಯ ಗ್ರಾ.ಪಂ. ಸದಸ್ಯರಾಗಿ ಆಯ್ಕೆಗೊಂಡು ಸರ್ಕಾರ ಕೊಡುವ ಮಾಸಿಕ ಗೌರವ ಧನವನ್ನೂ ಪಡೆದುಕೊಂಡಿದ್ದಾರೆ. ಈ ರೀತಿ ಏಕ ಕಾಲದಲ್ಲಿ ಎರಡು ಕರ್ತವ್ಯ ನಿರ್ವಹಣೆ ಹಾಗೂ ಎರಡೂ ಕಡೆ ಸರ್ಕಾರದ ಹಣ ಪಡೆದುಕೊಂಡಿರುವ ಆರೋಪ ಇವರ ಮೇಲೆ ಈಗ ಬಂದಿದೆ. ಈ ವಿಷಯ ಈಗ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಭಾರಿ ಸದ್ಸು ಮಾಡತೊಡಗಿದೆ. 
ಗ್ರಾ.ಪಂ. ಪ್ರಸ್ತಾವನೆ
     ಈ ವಿಷಯದಲ್ಲಿ ಬೆಳಗುಂಬ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ.) ತುಮಕೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ (ಸಂ.ಗ್ರಾಪಂಬೆ. ಗ್ರಾಪಂಸ. ವಿವ-01-2019-20, ದಿನಾಂಕ 11-07-2019) ಬರೆದಿದ್ದಾರೆ. 
    “ಬೆಳಗುಂಬ ಗ್ರಾ.ಪಂ. ನಲ್ಲಿ ನಿಯಮಬಾಹಿರವಾಗಿ ನೀರು ವಿತರಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಸ್.ಲೋಕೇಶ್‍ರವರು ದಿನಾಂಕ 30-09-2010 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸದರಿಯವರು 2015-16 ನೇ ಸಾಲಿನಲ್ಲಿ ನಡೆದ ಗ್ರಾ.ಪಂ. ಚುನಾವಣೆ ಯಲ್ಲಿ ಸ್ಪರ್ಧಿಸಿ ಚುನಾಯಿತ ಪ್ರತಿನಿಧಿಯಾಗಿ ನೀರು ವಿತರಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸದಸ್ಯತ್ವ ರದ್ಧತಿಗೆ ಪ್ರಸ್ತಾವನೆ ಸಲ್ಲಿಸಿ ನೀರು ವಿತರಕರ ಹುದ್ದೆಯಿಂದ ವಜಾ ಮಾಡಲು ವರದಿ ಸಲ್ಲಿಸಲು ತಾವು ಸೂಚಿಸಿದ್ದು, ಆ ಪ್ರಕಾರ ಅಧ್ಯಕ್ಷರು, ಬೆಳಗುಂಬ ಗ್ರಾ.ಪಂ. ರವರು ಎಂ.ಎಸ್.ಲೋಕೇಶ್‍ರವರನ್ನು ನೀರು ವಿತರಕರ ಹುದ್ದೆಯಿಂದ ವಜಾ ಮಾಡಿ, ಸದಸ್ಯತ್ವ ರದ್ಧತಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಎಂ.ಎಸ್. ಲೋಕೇಶ್ ರವರನ್ನು ನೀರು ವಿತರಕ ಹುದ್ದೆಯಿಂದ ವಜಾ ಮಾಡಿ ಸದಸ್ಯತ್ವ ರದ್ದುಪಡಿಸಲು ತಮಗೆ ಪ್ರಸ್ತಾವನೆ ಸಲ್ಲಿಸಿದೆ” ಎಂದು ಅವರು ಸದರಿ ಪತ್ರದಲ್ಲಿ ತಿಳಿಸಿದ್ದಾರೆ. 
ಸಿ.ಇ.ಓ.ಗೆ ಇ.ಓ. ವರದಿ
        ಇದರ ಮುಂದಿನ ಪ್ರಕ್ರಿಯೆ ಆಗಿ ತುಮಕೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು (ಇ.ಓ.) ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ.ಇ.ಓ,) ಅವರಿಗೆ ಪತ್ರ (ಸಂಖ್ಯೆ: ಕಾನಿಅ/ತಾಪಂತು/ ಗ್ರಾಪಂ/ವಿವ/01/19-20, ದಿನಾಂಕ: 20-07-2019) ಬರೆದಿದ್ದಾರೆ. “ಸದರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ನೀರು ವಿತರಕನ ಹುದ್ದೆಯಿಂದ ವಜಾ ಮಾಡಿ, ಸದಸ್ಯತ್ವ ರದ್ದುಪಡಿಸಲು ಅವಶ್ಯ ದಾಖಲಾತಿಗಳನ್ನು ಲಗತ್ತಿಸಿ ತಮ್ಮ ಅವಗಾಹನೆಗೆ ಈ ಮೂಲಕ ಒಪ್ಪಿಸಿದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ. 
       ಕಾನೂನಾತ್ಮಕವಾದ ಈ ಪ್ರಕ್ರಿಯೆಗಳು ಮುಂದುವರೆದಿದ್ದು, ಈ ವಿಷಯ ಈಗ ಬೆಳಗುಂಬ ಗ್ರಾ.ಪಂ. ಹಾಗೂ ತುಮಕೂರು ತಾ.ಪಂ. ಕಚೇರಿಯ ಒಳಗೆ ಮತ್ತು ಹೊರಗೆ ಚರ್ಚೆಗೆ ಗ್ರಾಸವಾಗಿದೆ.
ತನಿಖೆಯಿಂದ ಬಯಲು
      “ಬೆಳಗುಂಬ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಕ್ರಮಗಳಾಗುತ್ತಿವೆ ಎಂದು ಗ್ರಾ.ಪಂ.ನ ಕೆಲವು ಸದಸ್ಯರುಗಳ ಒಂದು ಬಣ ನೇರವಾಗಿ ಆರೋಪಿಸಿ, ತನಿಖೆಗೆ ಆಗ್ರಹಿಸಿ ಕೆಲವು ತಿಂಗಳುಗಳ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದು ಸ್ಥಳೀಯ ರಾಜಕೀಯ ಜಿದ್ದಾಜಿದ್ದಿಗೆ ಎಡೆಮಾಡಿತು. ಅಂದು ತನಿಖೆಗೆ ಆಗ್ರಹಿಸಿ ಸಹಿ ಹಾಕಿದವರಲ್ಲಿ ಸದಸ್ಯ ಎಂ.ಎಸ್.ಲೋಕೇಶ್ ಸಹ ಒಬ್ಬರಾಗಿದ್ದರು.
       ಅಂತಿಮವಾಗಿ ತನಿಖೆಯೂ ನಡೆಯಿತು. ಗ್ರಾ.ಪಂ.ನಲ್ಲಿ ಕೆಲವು ಲೋಪಗಳಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅದರ ಜೊತೆ-ಜೊತೆಯಲ್ಲೇ ಸದಸ್ಯ ಎಂ.ಎಸ್.ಲೋಕೇಶ್ ಓರ್ವ ಸದಸ್ಯರಾಗಿದ್ದುಕೊಂಡೇ ಗ್ರಾ.ಪಂ.ನ ನೀರು ವಿತರಕ ಹುದ್ದೆಯಲ್ಲೂ ಅಕ್ರಮವಾಗಿ ಮುಂದುವರೆದಿರುವುದೂ ಬೆಳಕಿಗೆ ಬಂತು. ಇದು ಗ್ರಾ.ಪಂ.ನ ಮತ್ತೊಂದು ಬಣಕ್ಕೆ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದ್ದು, ಅದರ ಪರಿಣಾಮವಾಗಿ ಈಗ ಲೋಕೇಶ್ ಕಾನೂನಿನ ಸಂಕಷ್ಟಕ್ಕೆ ಸಿಲುಕುವಂತಾಗಿದೆ” ಎಂದು ತಾ.ಪಂ. ಕಚೇರಿಯಲ್ಲಿ ಚರ್ಚಿಸಲಾಗುತ್ತಿದೆ.
ಎರಡು ಕಡೆಯೂ ಹಣ 
      “ಲೋಕೇಶ್ ಮೊದಲಿನಿಂದಲೂ ಮಾರನಾಯಕನಹಳ್ಳಿ ಭಾಗದಲ್ಲಿ ನೀರು ವಿತರಕ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಬೆಳಗುಂಬ ಗ್ರಾಮ ಪಂಚಾಯಿತಿಯಿಂದ ಚೆಕ್ ಮೂಲಕ ವೇತನವನ್ನೂ ಪಡೆಯುತ್ತಿದ್ದಾರೆ. ಈಗ ಸುಮಾರು 14,000 ರೂ. ವೇತನ ಪ್ರತಿ ತಿಂಗಳೂ ಅವರಿಗೆ ದೊರೆಯುತ್ತಿದೆ. ಈ ಮಧ್ಯ ಅವರು ಅದೇ ಮಾರನಾಯಕನಹಳ್ಳಿ ಕ್ಷೇತ್ರದಿಂದ ಬೆಳಗುಂಬ ಗ್ರಾಮ ಪಂಚಾಯಿತಿಗೆ ಸದಸ್ಯರಾಗಿ ಚುನಾಯಿತರಾಗಿದ್ದು, ಚುನಾಯಿತ ಸದಸ್ಯರಿಗೆ ನೀಡುವ ಮಾಸಿಕ 1,000 ರೂ. ಗೌರವ ಧನವನ್ನೂ ಪಡೆಯುತ್ತಿದ್ದಾರೆ.
 
     ಕಾನೂನಿನ ಪ್ರಕಾರ ಒಬ್ಬರೇ ವ್ಯಕ್ತಿ ಎರಡೆರಡು ಜವಾಬ್ದಾರಿ ನಿರ್ವಹಿಸಿ, ಎರಡೂ ಮೂಲಗಳಿಂದ ಸರ್ಕಾರಿ ಹಣ ಪಡೆಯುವುದು ತಪ್ಪು. ಹೀಗಾಗಿ ಈಗ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಇದೀಗ ಅವರು ಪ್ರತಿ ತಿಂಗಳೂ 14,000 ರೂ. ವೇತನ ಬರುವ ಹಾಗೂ ಇನ್ನೂ ಹಲವು ವರ್ಷ ಕರ್ತವ್ಯ ನಿರ್ವಹಣೆಗೆ ಅವಕಾಶವಿರುವ ನೀರು ವಿತರಕ ನೌಕರಿಯೇ ಇರಲೆಂದು ಹೇಳತೊಡಗಿದ್ದಾರೆ. ಆದರೆ ಇದು ಸಾಧ್ಯವಿಲ್ಲ. ಸರ್ಕಾರ ಕೈಗೊಳ್ಳುವ ಮುಂದಿನ ಕಾನೂನು ಕ್ರಮಗಳ ಬಗ್ಗೆ ನಮಗೂ ಕುತೂಹಲ ಇದೆ” ಎಂದು ತಾ.ಪಂ. ಕಚೇರಿಯಲ್ಲಿ  ಹೇಳಲಾಗುತ್ತಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link