ಕೊರಟಗೆರೆ

ಕಲ್ಬುರ್ಗಿ ಜಿಲ್ಲೆಯ ಮಾದಿಹಾಳ್ ತಾಂಡದಲ್ಲಿದ್ದ ಸುಮಾರು 780 ಎಕರೆ ಜಮೀನನ್ನು ವಶಪಡಿಸಿಕೊಂಡು, ಬಹಳ ವರ್ಷಗಳಿಂದ ಇದ್ದಂತಹ ಶ್ರೀ ಸೇವಾಲಾಲ್ ಮರಿಯಮ್ಮ ದೇವಸ್ಥಾನವನ್ನು ಕೆಡವಿ, ಲಂಬಾಣಿ ಜನಾಂಗ ಬೀದಿಗೆ ಬರಲು ಕಾರಣರಾದವರನ್ನು ತಕ್ಷಣ ಬಂಧಿಸಬೇಕೆಂದು ತಾಲ್ಲೂಕು ಲಂಬಾಣಿ ಸಮುದಾಯದ ಅಧ್ಯಕ್ಷ ಲಕ್ಷ್ಮಣನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ವಿಮಾನ ನಿಲ್ದಾಣಕ್ಕಾಗಿ ನಮ್ಮ ಸಮುದಾಯದವರು ಜಮೀನು ಮತ್ತು ಮನೆಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ಯಾವುದೇ ರೀತಿಯ ಸರ್ಕಾರದ ಪರಿಹಾರವಾಗಲಿ, ಉದ್ಯೋಗವಾಗಲಿ ದೊರೆತಿಲ್ಲ. ಮನೆ ಮತ್ತು ಜಮೀನುಗಳನ್ನು ಸರ್ಕಾರ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಮುದಾಯದ ತಾ. ಗೌರವಾಧ್ಯಕ್ಷ ಶ್ರೀರಾಮುಲುನಾಯಕ್ ಮಾತನಾಡಿ, ಸರ್ಕಾರ ನಮ್ಮ ಸಮುದಾಯದವರ ಬಡವರ ಕೃಷಿಯೇತರ ಜಮೀನುಗಳನ್ನು ವಿಮಾನ ನಿಲ್ದಾಣಕ್ಕಾಗಿ ಉಪಯೋಗಿಸಿಕೊಂಡು ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಕಲ್ಬುರ್ಗಿ ವಿಮಾನ ಪ್ರಾಧಿಕಾರದ ಈ ಹೀನ ಕೃತ್ಯಕ್ಕೆ ಸರ್ಕಾರವೆ ಸಂಪೂರ್ಣ ಜವಾಬ್ದಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಜಾಂಚಿ ಕಾಳಿಚರಣ್ ಮಾತನಾಡಿ, ನಮ್ಮ ಸಮುದಾಯದ ಆರಾಧ್ಯ ದೈವ ಶ್ರೀ ಸೇವಾಲಾಲ್ ಮರಿಯಮ್ಮ ದೇವಸ್ಥಾನವನ್ನು ತೆರವು ಮಾಡಲು ಆದೇಶಿಸಿದ ಅಧಿಕಾರಿಗಳ ಮೇಲೆ ಪೋಲೀಸರು ಸ್ವಯಂ ದೂರು ದಾಖಲಿಸಬೇಕು. ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ನಮ್ಮ ಸಮುದಾಯದವರಿಗೆ ಉದ್ಯೋಗ ಕಲ್ಪಿಸಿ ವಿಮಾನ ನಿಲ್ದಾಣಕ್ಕೆ ಶ್ರೀ ಸೇವಾಲಾಲ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲಂಬಾಣಿ ಸಮುದಾಯದ ಕಾರ್ಯದರ್ಶಿ ಬಿ.ಶಂಕರ್, ಹಿರಿಯರಾದ ಮೀಸೆ ಲಕ್ಷ್ಮಾನಾಯ್ಕ, ಮುಖಂಡರಾದ ಹರೀಶ್ ನಾಯಕ್, ವಿಜಯ್ ಶಂಕರ್, ಲಕ್ಷ್ಮಣ ನಾಯಕ್, ಗೋವಿಂದ ನಾಯಕ್, ಲಂಕೇಶ್ ನಾಯಕ್, ಲಂಕೇನಹಳ್ಳಿ ರೈತ ಸಂಘದ ಅಧ್ಯಕ್ಷ ಲಕ್ಷ್ಮಾನಾಯಕ್, ಹನುಮಂತನಾಯಕ್, ಬಾಬುನಾಯಕ್.ಎಂ ಸೇರಿದಂತೆ ಹಲವಾರು ಯುವ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








