ಚಿಕ್ಕನಾಯಕನಹಳ್ಳಿ

ವಿಶೇಷ ವರದಿ:ಸಿ.ಗುರುಮೂರ್ತಿ ಕೊಟಿಗೆಮನೆ
ಮೋಡ ನೋಡಿಕೊಂಡು ರಾಗಿ ಕುಯ್ಯೋಣವೆಂದುಕೊಂಡಿದ್ದೆ, ಆದರೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇಷ್ಟು ತಿಂಗಳು ಕಾದಿದ್ದ ರಾಗಿ ಬೆಳೆಯೆಲ್ಲಾ ವ್ಯರ್ಥವಾಗುತ್ತಿದೆಯೆಲ್ಲಾ ಎಂಬ ಚಿಂತೆ ಕಾಡುತ್ತಿದೆ ಎಂದು ರೈತನೊಬ್ಬ ತನ್ನ ನೋವನ್ನು ಹೇಳಿಕೊಳ್ಳುವಾಗ ಅವರ ಕಂಠ ಗದ್ಗದಿತವಾಗುತ್ತದೆ.
ತಾಲ್ಲೂಕಿನ ಅರಳೀಕೆರೆ ಸಮೀಪದ ರಾಗಿ ಹೊಲದಲ್ಲಿ ಮಕಾಡೆ ಮಲಗಿದ ರಾಗಿ ಬೆಳೆಯ ಬಗ್ಗೆ ನೋವನ್ನು ತೋಡಿಕೊಂಡ ರೈತ ಶಿವರಾಮಯ್ಯ, ಕಪ್ಪಾಗಿರುವ ರಾಗಿ ತೆನೆಯನ್ನು ಹಿಡಿದು ಬೇಸರ ವ್ಯಕ್ತಪಡಿಸಿದರು.ಮುಂಗಾರಿನ ಆರಂಭದಲ್ಲಿ ಮಳೆ ಇಲ್ಲದೆ ಸಂಕಷ್ಠಕ್ಕೆ ಸಿಲುಕಿದ್ದ ತಾಲ್ಲೂಕಿನ ರೈತರು, ಈಗ ಬರುತ್ತಿರುವ ಮಳೆಯಿಂದಾಗಿ ಮತ್ತಷ್ಟು ಸಂಕಷ್ಠಕ್ಕೆ ಸಿಲುಕಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಮಳೆ ಬರುತ್ತಿದೆ, ರಾಗಿ ಪೈರನ್ನು ಕತ್ತರಿಸಿ ಭವಣೆ ಹೊಟ್ಟಲು ಸಿದ್ದತೆ ಮಾಡಿಕೊಂಡ ರೈತರು ಬೆಳೆಯ ಸ್ಥಿತಿ ನೋಡಿ ಮರುಕ ಪಡುತ್ತಿದ್ದಾರೆ.
ಈ ಬಾರಿ ಉತ್ತಮ ಮಳೆಯಾದ ಕಾರಣ ರೈತರು ರಾಗಿ ಬೆಳೆಗೆ ಹೆಚ್ಚು ಒತ್ತು ಕೊಟ್ಟು ಬೆಳೆದಿದ್ದರು. ಬಿತ್ತನೆ ವೇಳೆಯಲ್ಲಿ ಸಕಾಲದಲ್ಲಿ ಬಿದ್ದ ಮಳೆ ಉತ್ತಮ ಫಸಲಿನ ಸೂಚನೆಯನ್ನು ನೀಡಿ ರೈತರಲ್ಲಿ ಸಂತಸ ಮೂಡಿಸಿತ್ತು, ಆದರೆ ಬರುತ್ತಿರುವ ಸೋನೆ ಮಳೆಯಿಂದ ರೈತರು ಬೆಳೆದ ರಾಗಿಯೆಲ್ಲಾ ಮಲಗುತ್ತಿವೆ, ಕಪ್ಪಾಗಿ ಮೊಳಕೆ ಹೊಡೆಯಲು ಶುರು ಮಾಡಿವೆ, ಈಗಾಗಲೇ ಕೆಲವೆಡೆ ತೆನೆಹೊತ್ತ ರಾಗಿ ಪೈರು ನೆಲಕ್ಕೆ ಬಾಗಿದೆ.
ರೈತ ಶಿವರಾಮಯ್ಯ ಮಾತನಾಡಿ, ಬಂದಿರುವ ಮಳೆಯಿಂದ ರಾಗಿ ತೆನೆ ನೆನೆದು ಕುಯ್ಯುವಾಗ ಬಿದ್ದು ಹೋಗುತ್ತವೆ ಹಾಗೂ ರಾಗಿ ಮುಗ್ಗಲು ಬರುತ್ತದೆ. ರಾಗಿ ಎಲ್ಲಾ ಮಣ್ಣು ಪಾಲಾಗುತ್ತಿದೆ, ಈ ರೀತಿ ಆಗಿರುವುದು ನಮ್ಮದೊಂದೇ ಹೊಲವಲ್ಲ ನಮ್ಮ ಸುತ್ತಮುತ್ತಲಿನ ಎಲ್ಲಾ ರೈತರ ಹೊಲಗಳಲ್ಲಿ ಹಾಕಿರುವ ಬೆಳೆಯೂ ಇದೇ ರೀತಿ ಆಗಿದೆ. ಮುಕ್ಕಾಲು ಭಾಗ ಬೆಳೆ ನಷ್ಠವಾಗಿದೆ. ಒಟ್ಟಾರೆ ಅಕಾಲಿಕ ಮಳೆಯಿಂದಾಗಿ ರೈತರ ಜೀವನ ಸಂಕಷ್ಠಕ್ಕೀಡಾಗಿದೆ. ಇದಕ್ಕೆ ಪರಿಹಾರ ಯಾರನ್ನು ಕೇಳಲಿ ಎಂಬುದು ನಮ್ಮ ಮುಂದಿರುವ ಜಿಜ್ಞಾಸೆ ಎನ್ನುತ್ತಾರೆ ರೈತರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







