ಪ್ರಿಯಾಂಕ ರೆಡ್ಡಿ ಪ್ರಕರಣ :ಎಸ್‍ಎಫ್‍ಐ ನಿಂದ ಪ್ರತಿಭಟನೆ

ಹಾವೇರಿ :

      ದೇಶವ್ಯಾಪಿ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯವನ್ನು ವಿರೋಧಿಸಿ, ಪಶುವೈದ್ಯೆ ಪ್ರಿಯಾಂಕರೆಡ್ಡಿ ಹಾಗೂ ಕಲಬುರಗಿ ಜಿಲ್ಲೆಯ ಎರಡನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಖಂಡಿಸಿ, ವಿದ್ಯಾರ್ಥಿನಿಯರು-ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಲು ಆಗ್ರಹಿಸಿ, ಕಾಮುಕ ಹಂತಕರಿಗೆ ಕಠಿಣ ಶಿಕ್ಷೆಗೆ ನೀಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಹಾವೇರಿ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಇಂದು ನಗರದ ಜಿಎಚ್ ಕಾಲೇಜು ಎದುರು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಪ್ರತಿಭಟನಾಕಾರರನ್ನುದ್ದೇಶಿಸಿ ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲೆ ದಿನನಿತ್ಯ ದೌರ್ಜನ್ಯ, ದಬ್ಬಾಳಿಕೆ ಮತ್ತು ಅತ್ಯಾಚಾರಗಳು ಹೆಚ್ಚಾಗುತ್ತಲೇ ಇವೆ. ಆದರೂ ಇಂತಹ ದುಷ್ಕøತ್ಯಗಳು ಹೆಚ್ಚುತ್ತಲಿವೆ. ಇವುಗಳಿಗೆ ಕಡಿವಾಣ ಹಾಕಬೇಕಾದರೆ ಕಾನೂನುಗಳು ಇನ್ನಷ್ಟು ಬಿಗಿಯಾಗಬೇಕು. ಆ ಮೂಲಕ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಉಗ್ರಪ್ಪ ವರದಿ ಶಿಫಾರಸ್ಸುಗಳನ್ನು ಮತ್ತು ಕೇಂದ್ರದಲ್ಲಿ ಜಸ್ಟಿಸ್ ವರ್ಮಾ ವರದಿಯು ನೀಡಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ರಾಜ್ಯದ ಎಲ್ಲಾ ಶಾಲಾ ಕಾಲೇಜು ಮತ್ತು ಮಹಿಳೆಯರು ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ಯನ್ನು ರಚಿಸಬೇಕು. ಜೊತೆಗೆ ಕಡ್ಡಾಯವಾಗಿ ಸಿ.ಸಿ ಟಿ.ವಿ ಅಳವಡಿಕೆ ಮಾಡಬೇಕು ಎಂದರು.

      ಎಸ್‍ಎಫ್‍ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಅತ್ಯಾಚಾರಗಳನ್ನು ತಡೆಗಟ್ಟಲು ಸಮಾಜ ಮತ್ತು ಕುಟುಂಬಗಳು ಕೂಡ ಮುತುವರ್ಜಿ ವಹಿಸಬೇಕಿದೆ. ಮನೆಗಳಲ್ಲಿ ಹೆಣ್ಣು ಅಬಲೆ, ನಿಸ್ಸಹಾಯಕ ಎಂಬುವ ಮನೋಭಾವ ತೊಡೆದು ಹಾಕಿ, ಮಾನಸಿಕವಾಗಿ ದಿಟ್ಟತನದ ಪೋಷಣೆ ಹಾಗೂ ದೈಹಿಕ ಸ್ವರಕ್ಷಣಾ ತರಬೇತಿಗಳನ್ನು ನೀಡಬೇಕು. ಇರುವ ಕಾನೂನುಗಳ ಜಾರಿಗಾಗಿ ನಿರಂತರ ಒತ್ತಾಯ ಮಾಡಬೇಕಿದೆ ಎಂದರು.

      ಹೈದರಾಬಾದ್‍ನಲ್ಲಿ ಪ್ರಿಯಾಂಕ ರೆಡ್ಡಿ ಎಂಬ ಹೆಣ್ಣುಮಗಳನ್ನು ಕೆಲವು ಕಾಮುಕರು ಹೊತ್ತೊಯ್ದು, ಗ್ಯಾಂಗ್ ರೇಪ್ ಮಾಡಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಈ ಅಮಾನುಷ ಘಟನೆಯ ಬಗ್ಗೆ ತಿಳಿದ ಬಳಿಕ ಮನುಷ್ಯನೆಂಬ ಪ್ರಾಣಿಯು ತನ್ನಲ್ಲಿರುವ ವಿವೇಚನಾ ಶಕ್ತಿಯನ್ನು ಕಳೆದುಕೊಂಡು ತಲುಪಬಲ್ಲ ವಿಕ್ಷಿಪ್ತತೆಯನ್ನು ನೆನೆದು ನಮ್ಮದೇ ನೆರೆಹೊರೆಯವರನ್ನು ನಂಬಲಾರದಷ್ಟು ಅನುಮಾನ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

     ಪ್ರಿಯಾಂಕ ಅವರ ಮೇಲೆ ಅತ್ಯಾಚಾರ ಮಾಡಿ ಜೀವಂತ ಸುಟ್ಟು ಬೂದಿ ಮಾಡಿರುವ ಕಾಮುಕರಿಗೆ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಯಾಕಾಪುರ ಗ್ರಾಮದ ಹೊರವಲಯದಲ್ಲಿ ಎರಡನೇ ತರಗತಿಯ (8 ವರ್ಷ) ಬಾಲಕಿ ಮೇಲೆ ಸೋಮವಾರ ಸಂಜೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹತ್ಯೆಗೈದ ಹಂತಕರಿಗೆ ಕಾನೂನು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಎಸ್‍ಎಫ್‍ಐ,ಡಿವೈಎಫ್‍ಐ ಮುಖಂಡರಾದ ಜ್ಯೋತಿ ಪೋಲಿಸಗೌಡ್ರ, ಖುಷಿ, ಕೃಷ್ಣ ಕಡಕೋಳ, ಶ್ರೇಯಾಗೌಡ, ರಕ್ಷಿತಾ, ಪ್ರಿತಿ, ಅಭಿಷೇಕ ಲಮಾಣಿ, ರಾಜು ಲಮಾಣಿ, ಹನುಮಂತ ಎಚ್, ಕನ್ನಪ್ಪ ಬ್ಯಾಡಗಿ, ನೇಹಾ, ಅರ್ಪಿತಾ, ಐಶ್ವರ್ಯ,ವೇಗಾನಂದ, ವೆಂಕಟೇಶ ಅಕ್ಕಸಾಲಿ, ಗಣೇಶ ಛತ್ರದ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link