ಹಾವೇರಿ
ಹೆಚ್.ಐ.ವಿ/ಏಡ್ಸ್ ಮುಕ್ತ ಭಾರತ ನಿಮಾರ್ಣದ ಗುರಿ ಹೊಂದಿರುವ ಸರ್ಕಾರದ ಆಶಯಗಳಿಗೆ ಎಲ್ಲರೂ ಕೈಜೋಡಿಸಿ ಏಡ್ಸ್ ನಿರ್ಮೂಲನೆಗೆ ಪಣತೊಡೋಣ. ಆರೋಗ್ಯವಂತ ಸಮಾಜದ ವೃದ್ಧಿಗೆ ಎಲ್ಲರೂ ಸಹಕರಿಸೋಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ್ ದೇಸಾಯಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಐ.ವಿ/ಏಡ್ಸ್ ಸೋಂಕಿತರನ್ನು ಕೀಳರಿಮೆಯಿಂದ ಕಾಣದೆ ಜನಸಾಮಾನ್ಯರಂತೆ ಭಾವಿಸಬೇಕು. ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಸರ್ಕಾರಗಳು ತಂದಿರುವ ಉಚಿತ ಚಿಕಿತ್ಸೆ, ಸೇವಾ ಸೌಲಭ್ಯಗಳನ್ನು ಸೋಂಕಿತರು ಪಡೆದುಕೊಳ್ಳಬೇಕು. ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿರುವವ ಬಗ್ಗೆ ಕಾಳಜಿ ವಹಿಸಿ ಸೋಂಕಿತರಿಗೆ ಜಾಗೃತಿ ಮೂಡಿಸುವುದು ಹಾಗೂ ಮನವೊಲಿಸುವ ಕಾರ್ಯ ನಡೆಯಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ.ನಿಲೇಶ ಎಂ.ಎನ್ ಅವರು ಮಾತನಾಡಿ, ಹೆಚ್.ಐ.ವಿ/ಏಡ್ಸ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಜಿಲ್ಲಾ ಆಸ್ಪತ್ರೆಯ ಎ.ಆರ್.ಟಿ ಕೇಂದ್ರದಲ್ಲಿ ಪ್ರಸ್ತುತ 7705 ಹೆಚ್‍ಐವಿ ಸೋಂಕಿತರು ನೊಂದಣಿ ಮಾಡಿಕೊಂಡಿ ದ್ದಾರೆ. ನೊಂದಾಯಿತರಿಗೆ ಉಚಿತ ಆಪ್ತಸಮಾಲೋಚನೆ ಮತ್ತು ರಕ್ತತಪಾಸಣೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 13 ಐಸಿಟಿಸಿ ಕೇಂದ್ರಗಳು,67 ಎಫ್.ಐಸಿಟಿಸಿ, 10 ಪಿಪಿಪಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಲೈಂಗಿಕ ಕಾರ್ಯಕರ್ತೆಯರು ತಮ್ಮ ಕುಂದುಕೊರತೆಗಳನ್ನು ಜಿಲ್ಲಾಪಂಚಾಯತ್ ಸಿಇಒ ರಮೇಶ ದೇಸಾಯಿ ಅವರೊಂದಿಗೆ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಬಸವರಾಜ ತಳವಾರ ಕಾರ್ಯಕ್ರಮಾಧಿಕಾರಿಗಳಾದ ರಾಜು ನರಸಯ್ಯ, ತಾಲೂಕು ಆರೋಗ್ಯಧಿಕಾರಿಗಳಾದ ಡಾ.ಪ್ರಭಾಕರ ಕುಂದೂರ, ಹಾಗೂ ಸರ್ಕಾರ, ಸರ್ಕಾರೇತರ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಲೈಂಗಿಕ ಕಾರ್ಯಕರ್ತೆಯರು, ಜಿಲ್ಲಾಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಾಥಾಗೆ ಹಸಿರು ನಿಶಾನೆ: ಇದಕ್ಕೂ ಮೊದಲು ವಿಶ್ವ ಏಡ್ಸ್ ದಿನ ಅಂಗವಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಆಯೋಜಿಸಲಾದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀವಿದ್ಯಾ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಾಗರಾಜ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರಾಜೇಂದ್ರ ದೊಡ್ಮನಿ ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಕೆ.ಸಿ.ಪಾವಲಿ, ಕಾರ್ಯದರ್ಶಿಗಳಾದ ಪಿ.ಎಂ ಬೆನ್ನೂರ ಇತರರು ಉಪಸ್ಥಿತರಿದ್ದರು