ಹೊಸಪೇಟೆ :
ತಳಸಮುದಾಯಗಳ ಜನರು ಕೂಡ ಶಿಕ್ಷಣದ ಮೂಲಕ ಉತ್ತಮ ಗುಣಮಟ್ಟದ ಜೀವನ ನಡೆಸುವುದು ಸಾಧ್ಯ ಎಂಬುದನ್ನು ತಮ್ಮ ಮೂಲಕವೇ ಜಗತ್ತಿಗೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಸ.ಚಿ. ರಮೇಶ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ವಿಶ್ವವಿದ್ಯಾಲಯದ ಭುವನವಿಜಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 63ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಳಿದ, ಶೋಷಿತ, ದಲಿತ ವರ್ಗದ ಜನರಿಗೂ ಶಿಕ್ಷಣ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಅವಕಾಶಗಳನ್ನು ಒದಗಿಸಿದರೆ ಅವರು ಕೂಡ ದೇಶದ ಮುಖ್ಯವಾಹಿನಿಯಲ್ಲಿ ಬೆರೆತು ದೇಶಕ್ಕೆ, ಸಮಾಜಕ್ಕೆ ಉನ್ನತ ಕೊಡುಗೆ ನೀಡುವುದರಲ್ಲಿ ಎರಡು ಮಾತಿಲ್ಲ. ಇಂತಹವರ ಉದ್ಧಾರಕ್ಕಾಗಿ ಅಂಬೇಡ್ಕರ್ ಅವರು ಹಗಲಿರಳು ಶ್ರಮಿಸಿದರು. ದೇಶದ ಪರಿಪೂರ್ಣ ಸಂವಿಧಾನ ರಚನೆ ಹಿಂದೆ ಅಂಬೇಡ್ಕರ್ ಅವರ ಪ್ರಾಮಾಣಿಕ ಪ್ರಯತ್ನವಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ವಿಶೇಷ ಉಪನ್ಯಾಸ ನೀಡುತ್ತಾ, ಡಾ. ಬಿ.ಆರ್. ಅಂಬೇಡ್ಕರ್ ಅವರು ದಲಿತ ಸೂರ್ಯ, ಮೂಕನಾಯಕರಷ್ಟೇ ಅಲ್ಲದೇ ದೇಶದ ಬಹುದೊಡ್ಡ ನಾಯಕರಾಗಿದ್ದರು. ಅವರ ಚಿಂತನೆ, ಆಲೋಚನೆಗಳು ಕೇವಲ ದಲಿತರ ಉದ್ಧಾರಕ್ಕಾಗಿರಲಿಲ್ಲ, ದೇಶದ ಅಭಿವೃದ್ಧಿಗೆ ಸಂಬಂಧಿಸಿದ್ದವು. ಅಂಬೇಡ್ಕರ್ ಅವರು ಕೊನೆಯುಸಿರುವ ವರೆಗೂ ದೇಶಕ್ಕಾಗಿ ಶ್ರಮಿಸಿದರು. ನಾವು ಇಂದು ಪಡೆದಿರುವ ಮತದಾನದ ಹಕ್ಕು, ಮಹಿಳೆಯರಿಗೆ ಆಸ್ತಿಯ ಹಕ್ಕು, 8 ತಾಸುಗಳ ದುಡಿಮೆಯ ಅವಧಿ ಹೀಗೆ ಹಲವಾರು ಸೌಲಭ್ಯಗಳು ಅಂಬೇಡ್ಕರ್ ನೀಡಿದ ಕೊಡುಗೆಯಾಗಿವೆ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು.
ಉನ್ನತ ಶಿಕ್ಷಣ ಪಡೆದವರು ಹುಲಿಯ ಹಾಲು ಕುಡಿದಂತೆ ಎಂದು ಹೇಳುತ್ತಿದ್ದರು. ಅಂಬೇಡ್ಕರ್ ಅವರ ವಿಚಾರ ಮತ್ತು ತರ್ಕಗಳು ಅನ್ಯಾಯವನ್ನು ಪ್ರತಿಭಟಸುತ್ತಿದ್ದವು. ಅವರ ಇಂತಹ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು. ಹಲವು ಧರ್ಮ, ಜಾತಿ, ಭಾಷೆ, ಸಂಸ್ಕøತಿಗಳ ದೇಶದಲ್ಲಿ ಸಂವಿಧಾನವು ಒಂದು ಉತ್ತಮ ಮಾನದಂಡವಾಗಿದೆ. ಇಂತಹ ಸಂವಿಧಾನವನ್ನು ಯುವಪೀಳಿಗೆ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮ ಸಂಚಾಲಕ ಮತ್ತು ಉಪಕುಲಸಚಿವ ಡಾ. ಎ. ವೆಂಕಟೇಶ ಅವರು ಸ್ವಾಗತಿಸಿ, ನಿರೂಪಿಸಿದರು. ಕುಲಸಚಿವ ಡಾ. ಎ. ಸುಬ್ಬಣ್ಣ ರೈ ವಂದನಾರ್ಪಣೆ ಮಾಡಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಬುದ್ಧನ ಗೀತೆಯನ್ನು ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳುಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








