ಬಳ್ಳಾರಿ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‍ಆರ್‍ಸಿ ಕಾಯ್ದೆಗೆ ಗಣಿನಾಡು ಬಳ್ಳಾರಿಯಲ್ಲೂ ತೀವ್ರವಾದ ವಿರೋಧ ವ್ಯಕ್ತವಾಯಿತು. ನಗರದಲ್ಲಿ ಬೃಹತ್ ಮಟ್ಟದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ರಾಜಕೀಯ ಪಕ್ಷಗಳ, ದಲಿತ, ಪ್ರಗತಿಪರ ಸಂಘಟನೆಗಳ ನಾಗರೀಕ ಸಮನ್ವಯ ಸಮಿತಿಯು ಕಾಯ್ದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರದ ಒತ್ತಡ ಹೇರಲಾಯಿತು.
ಕಾಂಗ್ರೆಸ್, ಎಸ್‍ಯುಸಿಐ, ಸಿಪಿಐ, ಸಿಪಿಎಂ, ದಲಿತ ಸಂಘಟನೆಗಳು ರೈತಸಂಘಟನೆ, ವಕೀಲರ ಸಂಘಟನೆ ಮುಖಂಡರು, ಕಾರ್ಯಕರ್ತರನ್ನು ಒಳಗೊಂಡಿದ್ದ ನಾಗರೀಕ ಸಮನ್ವಯ ಸಮಿತಿ ವತಿಯಿಂದ ಬೃಹತ್ ಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಮೋತಿ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರದ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‍ಷಾ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾರ್ಯಕರ್ತರು ಬೃಹತ್ ಮಟ್ಟದ ರಾಷ್ಟ್ರಬಾವುಟವನ್ನು ಹಿಡಿದು ಮೆರವಣಿಗೆ ಮಾಡಿದರು. ವೃತ್ತದಲ್ಲಿ ಕೆಲಹೊತ್ತು ನಡೆದ ಬಹಿರಂಗ ಸಮಾವೇಶದಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಕೇಂದ್ರದ ಬಿಜೆಪಿ ಸರ್ಕಾರ ಕೈಗೊಂಡಿರುವ ನಿರ್ಣಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್, ಪೌರತ್ವ ತಿದ್ದುಪಡಿ ಕಾಯ್ದೆ, ಎನ್‍ಆರ್‍ಸಿ ಕಾಯ್ದೆಗಳು ಜಾರಿಗೆ ಬಂದಲ್ಲಿ ಕೇವಲ ಮುಸಲ್ಮಾನರಿಗೆ ಮಾತ್ರವಲ್ಲ. ದೇಶದ ಎಲ್ಲ ವರ್ಗದ ಜನರಿಗೂ ತೊಂದರೆಯಾಗಲಿದೆ. ಹಾಗಾಗಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಹೋರಾಟ ಮಾಡಬೇಕಾಗಿದೆ. ಈ ಕಾಯ್ದೆಯು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದ ನಾಸೀರ್ ಹುಸೇನ್, ಸಿಎಎ, ಎನ್‍ಆರ್‍ಸಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಮೇಲ್ವರ್ಗಗಳನ್ನು ಒಗ್ಗೂಡಿಸಿ ಕೇಂದ್ರದಲ್ಲಿ ರಾಜಕೀಯ ಅಧಿಕಾರ ಹಿಡಿಯುವುದು ಬಿಜೆಪಿ ಪಕ್ಷದ ಹುನ್ನಾರವಾಗಿದೆ ಎಂದು ದೂರಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ. ದೇಶದ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಕ್ಕೂ ತೊಂದರೆಯಾಗಲಿದೆ. ಮಹಾತ್ಮಗಾಂಧೀಜಿಯವರು `ಈಶ್ವರ್ ಅಲ್ಲಾ ತೇರೇನಾಮ್, ಸಬುಕೋ ಸನ್ಮತಿ ಏ ಭಗವಾನ್’ ಎಂದಿರುವ ದೇಶದಲ್ಲಿ ಧರ್ಮದ ಮೂಲಕ ಸಂಬಂಧಗಳನ್ನು ಒಡೆಯುವ ಕೆಲಸ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‍ಷಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು `ಆಧುನಿಕ ಭಸ್ಮಾಸುರ’ ಎಂದು ಝರಿದ ಉಗ್ರಪ್ಪ, ಪ್ರಧಾನಿ ಮೋದಿಯವರು ನೋಟ್ ಅಮಾನ್ಯೀಕರಣ ತಂದು ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ. ಸಿಎಎ, ಎನ್‍ಆರ್‍ಸಿ ಕಾಯ್ದೆಯನ್ನು ಜಾರಿಗೆ ತಂದು ದೇಶದ ಏಕತೆಯನ್ನು ಹಾಳುಮಾಡುತ್ತಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಆರ್ಟಿಕಲ್ 5,6,7,8,9,10,11,12 ರಲ್ಲಿ ಯಾರ್ಯಾರಿಗೆ ಪೌರತ್ವ ನೀಡಬೇಕೆಂಬುದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ, ಸಿಎಎ, ಎನ್‍ಆರ್‍ಸಿ ಕಾಯ್ದೆ ಏಕೆಬೇಕಿತ್ತು. ನಾನು ಸಂಸದನಾಗಿದ್ದಾಗ ಬಿಲ್ ತಂದಿದ್ದರೆ ಸದನದಲ್ಲಿ ವಿರೋಧ ಮಾಡುತ್ತಿದ್ದೆವು. 370 ಕಾಯ್ದೆ, ತ್ರಿವಳಿ ತಲಾಖ್ ರದ್ದುಪಡಿಸಿದಾಗ ಏನೂ ಆಗಲಿಲ್ಲ ಎಂಬ ಅಹಂ ನಿಂದ ಪ್ರಧಾನಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ ಎಂದು ಆಪಾದಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕರಾದ ಅನಿಲ್‍ಲಾಡ್, ನಾರಾ ಸೂರ್ಯನಾರಾಯಣರೆಡ್ಡಿ, ಜಿಪಂ ಸದಸ್ಯರಾದ ಮುಂಡ್ರಿಗಿ ನಾಗರಾಜ್, ಎ.ಮಾನಯ್ಯ, ಜೆ.ಎಸ್.ಆಂಜನೇಯಲು, ಸಿಪಿಐ, ಸಿಪಿಎಂ, ಎಸ್‍ಯುಸಿಐ ಮುಖಂಡರಾದ ಕೆ.ಸೋಮಶೇಖರ್, ಯು.ಬಸವರಾಜ್ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಹುಮಾಯೂನ್ ಖಾನ್, ಬಿ.ರಾಮ್‍ಪ್ರಸಾದ್, ರಿಜ್ವಾನ್ ಹರ್ಷದ್, ರವಿ, ಎಚ್.ಅರ್ಜುನ್, ಕೆ.ಎಸ್.ಎಲ್.ಸ್ವಾಮಿ, ಚಂದ್ರಕುಮಾರಿ, ವಿ.ಎಸ್.ಶಿವಶಂಕರ್, ಟಿ.ಜಿ.ವಿಠ್ಠಲ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
