ಯಾವುದೇ ಒಬ್ಬ ನಟ ಅಥವಾ ನಟಿ ಸಿನಿಮಾಗಳಲ್ಲಿ ತಮಗೆ ಹೀರೋ ಅಥವಾ ಹೀರೋಯಿನ್ ಪಾತ್ರವೇ ಬೇಕೆಂದು ಬಯಸುವುದು ಸಹಜ! ಆ ಪಾತ್ರಗಳು ಸಿಗಲಿಲ್ಲವೆಂದಾಗ ಅನಿವಾರ್ಯವಾಗಿ ಇತರೆ ಪಾತ್ರಗಳನ್ನು ನಿರ್ವಹಿಸುತ್ತಾರೆ. ಆದರೆ ಪಂಡರಿಬಾಯಿಯವರು ತಮ್ಮ ವೃತ್ತಿ ಬದುಕಿನ ತುತ್ತ ತುದಿಯಲ್ಲಿ ಇರುವಾಗಲೆ `ನನಗೆ ನಾಯಕಿ ಪಾತ್ರ ಬೇಡ, ತಾಯಿಯ ಪಾತ್ರವನ್ನು ಕೊಡಿ’ ಎಂದು ನಿರ್ದೇಶಕರನ್ನು ಒತ್ತಾಯಿಸುತ್ತಿದ್ದರು ಎಂದರೆ ಇದು ಕಟ್ಟು ಕತೆಯಲ್ಲ..! ಇಂತಹ ವರ್ತನೆ ಎಲ್ಲರಲ್ಲೂ ಆಶ್ಚರ್ಯ ತಂದಿದ್ದಲ್ಲದೆ, ಏಕೆ ಹೀಗೆ ಎಂಬ ಕುತೂಹಲವನ್ನೂ ಉಂಟು ಮಾಡಿತ್ತು..! ಇದಕ್ಕೆ ಅವರು ಕೊಟ್ಟ ಕಾರಣವಂತೂ ಅಷ್ಟೇ ಗೌರವ-ಘನತೆಯಿಂದ ಕೂಡಿದ್ದುದಾಗಿತ್ತು. ಇಂತಹ ಕಾರಣವನ್ನು ಇಂದು ನಾವು ಊಹಿಸಲೂ ಕೂಡ ಸಾಧ್ಯವಿಲ್ಲ..! ಆ ಕಾರಣವಾದರೂ ಏನಿರಬಹುದು..!
ಅವರ ಮಾತುಗಳಲ್ಲೆ ಕೇಳುವುದಾದರೆ, `ನಾನು ನಿರ್ದೇಶಕರಲ್ಲಿ ನಾಯಕಿ ಪಾತ್ರ ಬೇಡ, ತಾಯಿಯ ಪಾತ್ರ ಕೊಡಿ ಎಂದು ಕೇಳಿದ್ದು ನಿಜ. ಏಕೆಂದರೆ ನಾಯಕಿ ಪಾತ್ರದಲ್ಲಿ ನಾಯಕ ಪಾತ್ರಧಾರಿಯ ಮೈ-ಕೈಗಳನ್ನು ಮುಟ್ಟಿ ಅಭಿನಯಿಸ ಬೇಕಿತ್ತು. ಇದು ನನ್ನಲ್ಲಿ ಮುಜುಗರ, ಸಂಕೋಚ ಉಂಟು ಮಾಡುತ್ತಿತ್ತು. (ಆ ಹೊತ್ತಿಗೆ ಬರಿ ಮೈ-ಕೈ ಮುಟ್ಟಿ ಅಭಿನಯಿಸಲು ಮುಜುಗರವಂತೆ! ಕನಸಲೂ ಕೂಡ ಇಂದಿನ ದಿನಕ್ಕೆ ಹೋಲಿಸಲಾಗದು ಬಿಡಿ! ಏಕೆಂದರೆ ಇಂದು ಹೀರೋಯಿನ್ಗಳು ಕ್ಯಾಬರೆ ನರ್ತಕಿಯರನ್ನು, ಹೀರೋಗಳು ಹಾಸ್ಯ ನಟರನ್ನು ಮೂಲೆಗುಂಪು ಮಾಡಿ ಅವರ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ.) ತಾಯಿಯ ಪಾತ್ರವಾದರೆ ಅಂತಹ ಮುಜುಗರಕ್ಕೆ ಆಸ್ಪದವೇ ಇರುತ್ತಿರಲಿಲ್ಲ.
ಅಲ್ಲಿ ನಾನು ನಿಜವಾಗಿ ತಾಯಿಯೆ ಆಗಿ ಅಭಿನಯಿಸುತ್ತಿದ್ದೆ. ನನ್ನ ಮಗನ ಪಾತ್ರಧಾರಿ ನನಗೆ ನಿಜವಾಗಿಯೂ ಮಗನೆ ಆಗಿ ಕಾಣುತ್ತಿದ್ದರು. ಆಗ ಯಾವುದೇ ಸಂಕೋಚವಿಲ್ಲದೆ ನಿಸ್ಸಂಕೋಚವಾಗಿ, ನೈಜ ಅಭಿನಯ ನೀಡಲು ಸಾಧ್ಯವಾಗುತ್ತಿತ್ತು. ಹಾಗಾಗಿ ನಾನಾಗಿಯೆ ಮುಂದಾಗಿ ನಿರ್ದೇಶಕರನ್ನು ತಾಯಿಯ ಪಾತ್ರಗಳನ್ನು ಕೊಡಿ ಎಂದು ಕೇಳಿ ತಾಯಿಯ ಪಾತ್ರದಲ್ಲಿ ಯಾವುದೇ ಸಂಕೋಚವಿಲ್ಲದೆ ಅಭಿನಯಿಸುತ್ತಾ ವೃತ್ತಿ ಬದುಕನ್ನು ಸಂತೋಷವಾಗಿ ಕಳೆದೆ’ ಎಂದು ಹೇಳಿಕೊಂಡಿದ್ದರು.
ಪಂಡರಿಬಾಯಿಯವರು 1943ರಲ್ಲಿಯೆ ತಮ್ಮ 13ನೆ (1930) ವಯಸ್ಸಿನಲ್ಲಿ ವಾಣಿ ಚಿತ್ರದ ಮೂಲಕ ಸಿನಿಮಾ ಬದುಕಿಗೆ ಪ್ರವೇಶಿಸಿದರು. ಅಂಬರೀಷ್ರವರ ತಾತನವರಾದ ಪಿಟೀಲು ಚೌಡಯ್ಯನವರು ಈ ಚಿತ್ರದ ನಾಯಕ ನಟ..! ಇವರು ಮೈಸೂರು ಮಹಾರಾಜರ ಆಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದರು. 7 ತಂತಿಗಳ ವೀಣೆಯನ್ನು ಸಂಶೋಧಿಸಿ ಯಶಸ್ವಿಯಾಗಿ ಸಂಗೀತ ಕಛೇರಿ ನಡೆಸಿದ ಹೆಗ್ಗಳಿಕೆ ಇವರದು. ಅಲ್ಲಿಯ ತನಕ ವೀಣೆಗೆ ಗರಿಷ್ಠ ನಾಲ್ಕೇ ತಂತಿಗಳು ಇದ್ದದ್ದು. ಇವರ ಸ್ಮರಣಾರ್ಥ ಬೆಂಗಳೂರಿನಲ್ಲಿ ಪಿಟೀಲು ಚೌಡಯ್ಯ ಸ್ಮಾರಕ ಭವನ ಪಿಟೀಲು ಆಕಾರದಲ್ಲಿಯೆ ಇರುವುದು ವಿಶೇಷ..! ಈ ಚಿತ್ರದ ನಿರ್ದೇಶಕರು ಕಲ್ಚರ್ಡ್ ಕಮೆಡಿಯನ್ ಎಂದು ಹೆಸರಾಗಿದ್ದ ಕೆ.ಹಿರಣ್ಣಯ್ಯನವರು. ಇವರು ಮಾಸ್ಟರ್ ಹಿರಣ್ಣಯ್ಯನವರ ತಂದೆ. (ಮಾಸ್ಟರ್ ಹಿರಣ್ಣಯ್ಯನವರ ಮೂಲ ಹೆಸರು ನರಸಿಂಹಮೂರ್ತಿ..!)
ಪಂಡರಿಬಾಯಿಯವರು 1954ರಲ್ಲಿ ತೆರೆ ಕಂಡ ಡಾ.ರಾಜ್ ರವರ ಪ್ರಪ್ರಥಮ ಚಿತ್ರ ಬೇಡರಕಣ್ಣಪ್ಪ ಚಿತ್ರವೂ ಸೇರಿದಂತೆ, 1965ರಲ್ಲಿ ತೆರೆ ಕಂಡ ಡಾ.ರಾಜ್, ನರಸಿಂಹರಾಜು, ಅಶ್ವತ್ಥ್, ಎಂ.ಪಿ. ಶಂಕರ್, ಉದಯ್ ಕುಮಾರ್ ಅಭಿನಯದ ಹುಣಸೂರರ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆಯ ಜೊತೆ ನಿರ್ದೇಶನದ ಸತ್ಯ ಹರಿಶ್ಚಂದ್ರ ಚಿತ್ರದವರೆಗೂ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಡಾ. ರಾಜ್ರವರ ಪ್ರಪ್ರಥಮ ಚಿತ್ರ ಬೇಡರ ಕಣ್ಣಪ್ಪಕ್ಕೆ ನಾಯಕಿಯಾಗಿದ್ದವರು (1954) ಡಾ. ರಾಜ್ರವರ ಆಕಸ್ಮಿಕ (1997) ಚಿತ್ರದಲ್ಲಿ ಕೊನೆಯದಾಗಿ ತಾಯಿಯ ಪಾತ್ರದಲ್ಲಿ ಅಭಿನಯಿಸಿದರು. ಕೋಮಲ ಕಂಠ ಮತ್ತು ಸೌಮ್ಯ ಮುಖಭಾವದ ಇವರನ್ನು ಕಂಡಾಗ ಪ್ರೇಕ್ಷಕರ ಮನದಲ್ಲಿ ಗೌರವ ಭಾವನೆ ಮೂಡುತ್ತಿತ್ತು..!
ರಾಜ್ ದ್ವಿಪಾತ್ರದ ಚಿತ್ರ ಭಲೆಜೋಡಿಯಲ್ಲಿ ಇವರು ತಾಯಿಯ ಪಾತ್ರದಲ್ಲಿದ್ದಾರೆ. `ನಾ ಅಮ್ಮ ಎಂದಾಗ ಏನೊ ಸಂತೋಷವು, ನಿನ್ನ ಕಂಡಾಗ ಮನಕೇನೊ ಆನಂದವು… ತಾಯಿಯ ಮಮತೆ ಕಂಡಾ ದೇವನು ಅಡಗಿದ ಎಲ್ಲೊ ಮರೆಯಾಗಿ, ತಾಯಿಯ ಶಾಂತಿಗೆ ಧರಣಿಯು ನಾಚಿ ಮೌನದಿ ನಿಂತಳು ತಲೆ ಬಾಗಿ…!’ ಕೆರಳಿದ ಸಿಂಹ ಚಿತ್ರದಲ್ಲಿ `ಅಮ್ಮಾ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆ ಬೇಕು ಈ ಮನೆ ಬೆಳಕಾಗಿ… ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿ ಸಾಟಿಯೇನು?!’ ಈ ಹಾಡುಗಳನ್ನು ಕೇಳುವಾಗ ಪಂಡರಿಬಾಯಿಯವರ ಮುಖ ಕಣ್ಮುಂದೆ ಬರುತ್ತದೆ.
ಅನುರಾಗ ಅರಳಿತು ಚಿತ್ರದಲ್ಲಿ `ಶ್ರೀಕಂಠ ವಿಷಕಂಠ…ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೆ..’ ಹಾಡಿನಲ್ಲಿ ಪಾಶ್ರ್ವವಾಯು ಪೀಡಿತ ಪಾತ್ರಧಾರಿಯಾದ ಇವರನ್ನು ರಾಜ್ ಎತ್ತಿಕೊಂಡು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನವನ್ನು ಸುತ್ತುತ್ತಾರೆ.
ರಾಜ್ರವರ ಬಂಗಾರದ ಪಂಜರ, ಅನುರಾಗ ಅರಳಿತು, ಜೀವನಚೈತ್ರ ಇನ್ನೂ ಮುಂತಾದ ಚಿತ್ರಗಳಲ್ಲದೆ ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್, ಶ್ರೀನಿವಾಸಮೂರ್ತಿ ಮುಂತಾದವರಿಗೂ ಇವರು ತಾಯಿಯಾಗಿ ತಮ್ಮ ಅಮೋಘ ಅಭಿನಯವನ್ನು ನೀಡಿ ಮನೆಮಾತಾಗಿದ್ದಾರೆ. ಇವರು 1957ರಲ್ಲಿಯೆ ಡಾ. ರಾಜ್ ಅಭಿನಯದ ರಾಯರ ಸೊಸೆ ಚಿತ್ರ ನಿರ್ಮಿಸಿದ್ದರು. ಕಲ್ಯಾಣ್ಕುಮಾರ್ ನಿರ್ವಹಿಸ ಬೇಕಿದ್ದ ಪಾತ್ರ ಅವರು ನಿರಾಕರಿಸಿ ರಾಜ್ಗೆ ಸಿಕ್ಕಿತ್ತು.
ಕಲ್ಯಾಣ್ಕುಮಾರ್ಗೆ ಸಿದ್ದಪಡಿಸಿದ್ದ ಉಡುಪನ್ನೆ ರಾಜ್ ಧರಿಸಬೇಕಾಯ್ತು. ಸ್ವತಃ ರಾಜ್ `ಜಟಕಾ ಸಾಬಿ ತರಹ ಕಾಣುತ್ತೇನೆ’ ಎಂದು ತಮ್ಮನ್ನು ತಾವೆ ಹಾಸ್ಯ ಮಾಡಿಕೊಂಡಿದ್ದರು! ಬೇರೆಯವರೂ ಹಾಗೆಯೆ ಅಪಹಾಸ್ಯ ಮಾಡಿದ್ದರು. (ರಾಜ್ ತಮ್ಮ ವೃತ್ತಿ ಬದುಕಿನಲ್ಲಿ ಕಂಡುಂಡ ಅಪಮಾನಗಳಲ್ಲಿ ಇದೂ ಒಂದಷ್ಟೆ. ಕನ್ನಡದ ಪ್ರಪ್ರಥಮ ವರ್ಣ ಚಿತ್ರ ಅಮರ ಶಿಲ್ಪಿ ಚಕಣಾಚಾರಿ ರಾಜ್ ಕೈ ತಪ್ಪಿದ್ದು ಕೂಡ ಒಂದು ಉದಾಹರಣೆಯಷ್ಟೆ.) ರಾಯರಸೊಸೆ ಚಿತ್ರ ಯಶಸ್ವಿಯಾಗಿತ್ತು.
ರಾಜ್ ಪೌರಾಣಿಕ ನಾಟಕಗಳಿಂದ ಬಂದವರಾಗಿ ಮಹಿಳೆಯರಂತೆ ಬೆಳೆಸಿದ್ದ ಉದ್ದಕೂದಲನ್ನು ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಕ್ರಾಪ್ಕಟ್ ಮಾಡಿಸಿದ್ದರು. ಪಂಡರಿ ಬಾಯಿಯವರು ಪಾಂಡುರಂಗನ ಪರಮ ಭಕ್ತೆಯಾಗಿದ್ದು ಮಹಾರಾಷ್ಟ್ರದ ಪಂಡರಾಪುರದಲ್ಲಿ ಪಾಂಡುರಂಗನ ದೇವಸ್ಥಾನವನ್ನು ಕಟ್ಟಿಸಿದ್ದಾರೆ..! ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕೂ ಮಿಗಿಲಾಗಿ ಇವರು ತಾಯಿಯ ಪಾತ್ರಗಳಲ್ಲೇ ಪ್ರೇಕ್ಷಕರ ಮನದಲ್ಲಿ ಉಳಿದಿದ್ದಾರೆ.
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲೆಯಾಳಂ ಚಿತ್ರಗಳಲ್ಲೂ ಎನ್.ಟಿ. ರಾಮರಾವ್, ಎ. ನಾಗೇಶ್ವರ ರಾವ್, ಶಿವಾಜಿ ಗಣೇಶನ್, ಎಂ.ಜಿ.ರಾಮಚಂದ್ರನ್, ಪ್ರೇಮ್ ನಜೀರ್ ಮುಂತಾದವರ ಜೊತೆ ಇವರು ನಟಿಸಿ ಅಲ್ಲಿನ ಪ್ರೇಕ್ಷಕರಿಗೂ ಚಿರಪರಿಚಿತರಾಗಿದ್ದಾರೆ..! ಇವರು ಮದ್ರಾಸಿನಲ್ಲಿ (ಇಂದಿನ ಚೆನ್ನೈ) ವಾಸವಿದ್ದು ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದವರು ಹಿಂತಿರುಗಿ ಹೋಗುವಾಗ ಮಾರ್ಗ ಮಧ್ಯೆ ಕಾಫಿಗೆಂದು ಕಾರು ನಿಲ್ಲಿಸಿ, ರಸ್ತೆ ದಾಟುತ್ತಿದ್ದರು. ಆಗ ಅಪರಿಚಿತ ವಾಹನವೊಂದು ಇವರಿಗೆ ತಗುಲಿ ಅಪಘಾತವಾಗಿ ಇವರ ಬಲಗೈ ಮುರಿಯಿತು. ಅದಾದ ಕೆಲಕಾ¯ ನಂತರ ಮೂತ್ರಪಿಂಡ ವೈಫಲ್ಯದಿಂದ 2003 ನೆ ಜನವರಿ 29 ರಂದು ಚೆನ್ನೈನಲ್ಲಿ ನಿಧನವೊಂದಿದರು.
ನಾಗಾರ್ಜುನ ಸಾಗ್ಗೆರೆ
-ಪ್ರಜಾ ಪ್ರಗತಿ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ