ದಾವಣಗೆರೆ:
ನಿವೇಶನ ಮತ್ತು ವಸತಿ ರಹಿತರ ದಂಡು ಕಟ್ಟಿಕೊಂಡು, ಭಾರತ ಕಮ್ಯೂನಿಷ್ಟ್ ಪಕ್ಷವು ಸೂರಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.
ನಗರದ ಅಶೋಕ ರಸ್ತೆಯಲ್ಲಿನ ಕಾಮ್ರೇಡ್ ಪಂಪಾಪತಿ ಭವನದಲ್ಲಿ ಭಾನುವಾರ ಭಾರತ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಮಂಡಳಿಯಿಂದ ಏರ್ಪಡಿಸಿದ್ದ ಸೂರಿಗಾಗಿ ಸಮರ ಸಭೆ ಮತ್ತು ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬರಿಗೂ ವಾಸಿಸಲು ಮನೆ ಇರಬೇಕೆಂಬುದು ಸಂವಿಧಾನದ ವಸತಿ ಹಕ್ಕಿನ ಆಶಯವಾಗಿದೆ. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ, 72 ವರ್ಷಗಳು ಕಳೆದರೂ ಸಹ ಇನ್ನೂ ಕೋಟ್ಯಂತರ ಜನ ಮೂಲ ನಿವಾಸಿಗಳಿಗೆ ಸೂರು ಸಿಕ್ಕಿಲ್ಲ. ಹೀಗಾಗಿ ಈ ತಳ ಸಮುದಾಯದ ಜನರಿಗೆ ನಿವೇಶನ, ಮನೆ ಕೊಡಿಸಬೇಕೆಂಬ ಉದ್ದೇಶದಿಂದ ನಮ್ಮ ಪಕ್ಷ ಸರ್ಕಾರದ ವಿರುದ್ಧ ಸಮರ ಸಾರಿದ್ದು, ಎಲ್ಲಾ ವರ್ಗದ ಜನತೆಗೆ ವಸತಿ ಸೌಲಭ್ಯ ಸಿಕ್ಕು ಗೃಹ ಪ್ರವೇಶ ನಡೆದ ಬಳಿಕವೇ ಈ ಸಮರ ಕೊನೆಗೊಳ್ಳಲಿದೆ ಎಂದು ಹೇಳಿದರು.
ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ವರದಿ ಬಹಿರಂಗ ಪಡಿಸಿರುವಂತೆ ರಾಜ್ಯದ 37 ಲಕ್ಷ ಕುಟುಂಬಗಳಿಗೆ ಅಂದರೆ, 1.48 ಕೋಟಿ ಜನರಿಗೆ ವಸತಿ ಸೌಲಭ್ಯ ಇಲ್ಲವಾಗಿದೆ. ಇದು ವಸತಿ ಸೌಲಭ್ಯ ಕೋರಿ ರಾಜೀವ್‍ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸಿರುವವರ ಮಾಹಿತಿಯಾಗಿದ್ದು, ಇದರ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ 45,699 ಕುಟುಂಬಗಳಿಗೆ ಮನೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಡೇಟಾದ ಪ್ರಕಾರ ಜಿಲ್ಲೆಯ ಐದು ಜನ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾತ್ರ ಮನೆ ಇಲ್ಲ. ಇನ್ನುಳಿದ ಎಲ್ಲಾ ಕಾರ್ಯಕರ್ತೆಯರಿಗೆ ಮನೆ ಇದೆ ಅಂತೆ, ಜಿಲ್ಲೆಯ 26 ಜನ ದೇವದಾಸಿ ಮಹಿಳೆಯರನ್ನು ಬಿಟ್ಟು ಇನ್ನುಳಿದವರೆಲ್ಲರಿಗೂ ಸೂರು ಇದೆ ಅಂತೆ. ಇದೆಲ್ಲವನ್ನೂ ನೋಡಿದರೆ, ಈ ಮಾಹಿತಿಯು ಹಸಿ, ಹಸಿ ಸುಳ್ಳಿನಿಂದ ಕೂಡಿದೆ ಎಂದು ಆರೋಪಿಸಿದರು.
ದೇಶದ ಜನತೆ ವಸತಿ, ನಿರುದ್ಯೋಗ, ಬೆಲೆ ಏರಿಕೆಗಳಂತಹ ಸಮಸ್ಯೆಯಿಂದ ಭಾದಿತರಾಗಿದ್ದರೆ, ಜನಪರ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಕೇಂದ್ರ ಸರ್ಕಾರ ಈ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರೀಕತ್ವ ನೋಂದಣಿಯನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದ ಅವರು, ಎನ್‍ಆರ್‍ಸಿಯಿಂದ ಮುಸಲ್ಮಾನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಏಕೆಂದರೆ, ಅವರೆಲ್ಲರ ದಾಖಲೆಗಳು ಮಸೀದಿಗಳಲ್ಲಿರುವ ಜಮಾತೆಯಲ್ಲಿ ಭದ್ರವಾಗಿವೆ. ಇದರಿಂದ ಪ್ರವಾಹದಿಂದ ಮನೆ-ಮಠ ಕಳೆದುಕೊಂಡವರಿಗೆ, ಭೂಮಿಯ ಅಸ್ತಿತ್ವವೇ ಇಲ್ಲದೇ ಹಾಗೂ ಯಾವ ದಾಖಲೆಯೂ ಇಲ್ಲದೆ ಬದುಕುತ್ತಿರುವ ಈ ದೇಶದ ಮೂಲ ನಿವಾಸಿಗಳಾದ ಆದಿವಾಸಿಗಳಿಗೆ, ಬುಡಕಟ್ಟು ಸಮುದಾಯದವರು ಜೈಲು ಪಾಲಾಗುವುದು ಗ್ಯಾರೆಂಟಿ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರಗಳು ತಕ್ಷಣವೇ ಒಂದಿಂಚ್ಚು ಸಹ ಭೂಮಿ ಇಲ್ಲದವರಿಗೆ ನಿವೇಶನ ನೀಡಬೇಕು. ನಿವೇಶನ ಸೇರಿದಂತೆ ವಸತಿ ಸೌಲಭ್ಯಕ್ಕಾಗಿ ಭೂಮಿ ಕಾಯ್ದಿರಿಸಬೇಕು ಹಾಗೂ ಈಗ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಸಹಾಯಧನವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿವೇಶನ, ಸೂರು ಇಲ್ಲದವರ ಮನೆಗಳ ಮುಂದೆ ನಮಗೆ ನಿಮ್ಮ ನೋಟು ಬೇಡ, ನಿವೇಶನ ಬೇಕು ಎಂಬ ಹೋರಾಟವನ್ನು ರಾಜಕಾರಣಿಗಳು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಸೂರು ಇಲ್ಲದೆ ಬದುಕುತ್ತಿರುವ ಜನರಿಗೆ ನಿವೇಶನ, ಮನೆ ನೀಡಬೇಕೆಂಬ ಹೋರಾಟವನ್ನು ಜನರ ಮಧ್ಯೆ ಕೊಂಡ್ಡೊಯ್ದು ಸೂರು ಕೊಡಿಸಲು ನಮ್ಮ ಪಕ್ಷ ಹೋರಾಟ ನಡೆಸಲಿದೆ ಎಂದು ಹೇಳಿದರು.
ಮಗು ವಿಶ್ವ ಮಾನವನಾಗಿಯೇ ಹುಟ್ಟುತ್ತಾನೆ. ಆದರೆ, ನಾವು ಅವರಲ್ಲಿ ಇಲ್ಲದ ವಿಷಯಗಳನ್ನು ಬಿತ್ತಿ, ಅವರ ಮುಗ್ಧ ಮನಸ್ಸುಗಳನ್ನು ಬದಲಿಸಿ, ಸಮಾಜದಲ್ಲಿ ಅಶಾಂತಿ, ಅಸಹಿಷ್ಣುತೆ ಭಾವನೆ ಬೆಳೆಸುವ ಮನೋಭಾವದಿಂದ ಹೊರಬರಬೇಕಾದರೆ, ಜನರ ಮಧ್ಯೆ ಕುವೆಂಪು ಅವರ ಮನುಜ ಮತ-ವಿಶ್ವ ಪಥ ವಾಕ್ಯ ಜೀವನದ ಮಂತ್ರ ಆಗಬೇಕೆಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿಶ್ವ ಮಾನವ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಡಾ.ಕೆ.ಎಸ್.ಜನಾರ್ಧನ್, ಮುಖಂಡರಾದ ಎಂ.ಸಿ.ಡೋಂಗ್ರೆ, ಆವರಗೆರೆ ಚಂದ್ರು, ಎಂ.ಬಿ.ಶಾರದಮ್ಮ, ಮಹಮ್ಮದ್ ರಫಿಕ್, ಟಿ.ಎಚ್.ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆವರಗೆರೆ ವಾಸು ಸ್ವಾಗತಿಸಿದರು. ಮಹಮ್ಮದ್ ಭಾಷಾ ವಂದಿಸಿದರು. ಇಪ್ಟಾ ಕಲಾವಿದರಾದ ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಐರಣಿ ಚಂದ್ರು, ಲೋಕಿಕೆರೆ ಅಂಜಿನಪ್ಪ, ಭಾನಪ್ಪ, ರಂಗನಾಥ್ ಜಾಗೃತ ಗೀತೆಗಳನ್ನು ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








